ವಿಷ್ಣುಗುಪ್ತ ವಿವಿಯಲ್ಲಿ ಅಹಿಚ್ಛತ್ರ ಕ್ಯಾಂಪಸ್ ಶೀಘ್ರ: ರಾಘವೇಶ್ವರ ಶ್ರೀ
ನಮ್ಮ ಸಮಾಜದ ನಡೆ- ನುಡಿ, ಆಹಾರ- ವಿಹಾರ, ಸಂಸ್ಕೃತಿ- ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಈ ವಿಶಿಷ್ಟ ಕ್ಯಾಂಪಸ್ ಇಡೀ ದೇಶಕ್ಕೆ ಆದರ್ಶವಾಗಲಿದೆ. ಈ ಅಹಿಚ್ಛತ್ರ ಮುಂದೊಂದು ದಿನ ವಿಶ್ವದ ಬೆಳಕಾಗಲಿದೆ ಎಂದ ಶ್ರೀಗಳು
ಗೋಕರ್ಣ(ಸೆ.11): ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಅಹಿಚ್ಛತ್ರ ಕ್ಯಾಂಪಸ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರಕಟಿಸಿದರು. ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ನಡೆದ ಗುರುಕುಲ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಸಮಾಜದ ನಡೆ- ನುಡಿ, ಆಹಾರ- ವಿಹಾರ, ಸಂಸ್ಕೃತಿ- ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಈ ವಿಶಿಷ್ಟ ಕ್ಯಾಂಪಸ್ ಇಡೀ ದೇಶಕ್ಕೆ ಆದರ್ಶವಾಗಲಿದೆ. ಈ ಅಹಿಚ್ಛತ್ರ ಮುಂದೊಂದು ದಿನ ವಿಶ್ವದ ಬೆಳಕಾಗಲಿದೆ ಎಂದು ನುಡಿದರು.
ಇಡೀ ಜಗತ್ತು ಶ್ರೀಪೀಠ ಹಾಗೂ ಶಿಷ್ಯವರ್ಗವನ್ನು ಈ ಮಹತ್ಕಾರ್ಯದ ಮೂಲಕ ನೆನಪಿಸಿಕೊಳ್ಳುವಂತಾಗಬೇಕು. ಇದಕ್ಕೆ ಶಿಷ್ಯ ಸಮುದಾಯ ಶಕ್ತಿಮೀರಿ ಶ್ರಮಿಸಬೇಕು. ಶಿವಾಜಿ ಧರ್ಮ ಸಾಮ್ರಾಜ್ಯ ಸ್ಥಾಪನೆಗೆ ಮಾವಳೆಗಳು ಬೆನ್ನೆಲುಬಾಗಿ ನಿಂತಂತೆ ಶ್ರೀಮಠದ ಶಿಷ್ಯಭಕ್ತರು ಈ ಕಾರ್ಯಕ್ಕೆ ಸಂಕಲ್ಪ ತೊಡಬೇಕು ಎಂದು ಸೂಚಿಸಿದರು.
NEET: ಮೊಬೈಲ್ ಮುಟ್ಬೇಡಿ, ತರಗತಿ ತಪ್ಪಸಬ್ಯಾಡ್ರಿ, ಕೂಲ್ ಆಗಿದ್ದು ಓದ್ರಿ
ಇದಕ್ಕೆ ಪೂರಕವಾಗಿ ಸಮಾಜದ ಅನುಕೂಲಸ್ಥ ದೊಡ್ಡ ಕುಟುಂಬಗಳು ಒಗ್ಗಟ್ಟಿನಿಂದ ವಿಶ್ವವಿದ್ಯಾಪೀಠ ನಿರ್ಮಾಣದ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ವಿದ್ಯಾಭಿಕ್ಷೆ ಎಂಬ ಸೇವೆಯನ್ನು ಈ ಚಾತುರ್ಮಾಸ್ಯದಿಂದ ಆರಂಭಿಸಲಾಗುತ್ತಿದೆ ಎಂದು ಸ್ವಾಮೀಜಿ ಪ್ರಕಟಿಸಿದರು.
ಈ ಮಣ್ಣಿನ ಗುಣ ಅಪಾರ. ಗೋಕರ್ಣದ ಮಣ್ಣಿನ ಮಹಿಮೆ ಆತ್ಮಲಿಂಗವನ್ನು ಕರೆಸಿಕೊಂಡಿದೆ. ಆದಿಗುರು ಶಂಕರರನ್ನು ಮೂರು ಬಾರಿ ಕರೆಸಿಕೊಂಡಿದೆ. ಶಿವನ ಆತ್ಮಲಿಂಗವನ್ನೇ ಧಾರಣೆ ಮಾಡುವ ಶಕ್ತಿ ಇರುವ ಮಣ್ಣಿನಲ್ಲಿ ಭಗೀರಥ ಒಂದು ಅಂಗುಷ್ಠದ ಮೇಲೆ ನಿಂತು ಗಂಗೆಗಾಗಿ ತಪಸ್ಸು ಮಾಡಿದ ಭೂಮಿ ಗೋಕರ್ಣ ಎಂಬ ಉಲ್ಲೇಖ ಪುರಾಣದಲ್ಲಿದೆ ಎಂದು ಬಣ್ಣಿಸಿದರು.
ಗಿರಿಕಾನನಗಳ ಭೂಮಿಯಲ್ಲಿ ಇಂದು ಬ್ರಹ್ಮಸೃಷ್ಟಿಯಿಂದ ವಿನೂತನ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಇಲ್ಲಿ ಆವೀರ್ಭವಿಸಿದೆ. ಇದರ ಶ್ರೇಯಸ್ಸು ಕ್ಷೇತ್ರಾಧಿಪತಿ ಮಲ್ಲಿಕಾರ್ಜುನನಿಗೆ, ಇಲ್ಲಿನ ಮಣ್ಣಿಗೆ ಸಲ್ಲುತ್ತದೆ. ಇದು ಮಿಂಚಿ ಮರೆಯಾಗುವ ಪವಾಡ ಅಲ್ಲ; ಶಾಶ್ವತವಾಗಿ ನೆಲೆ ನಿಲ್ಲುವ ಪವಾಡ ಎಂದರು.
60 ದಿನಗಳ ಅಮೃತ ಮಳೆ ಸುರಿದು ನಿಂತಂತೆ ಚಾತುರ್ಮಾಸ್ಯ ಸಂಪನ್ನಗೊಳ್ಳುತ್ತಿದೆ. ಮುಂದೇನು ಎಂಬ ಪ್ರಶ್ನೆ ಶಿಷ್ಯರನ್ನು ಕಾಡುತ್ತಿದೆ. ಆದರೆ ಈ ಕಾರ್ಯ ಮುಗಿದರೂ ಇದರ ಪರಿಣಾಮ ಶಾಶ್ವತ. ದಿವ್ಯತೆ ನಮ್ಮೊಳಗೆ ಸಂಚರಿಸಿದೆ. ರಾಮದೇವರ ಮುದ್ರೆಯೊಂದು ಭಕ್ತರ ಹೃದಯದ ಮೇಲೆ ಬಿದ್ದಿದೆ. ಮಠವೇ ಪುನರ್ನವವಾಗುತ್ತಿದೆ. ಎಲ್ಲರ ಸೇವೆಗಳು ನಿತ್ಯಶಾಶ್ವತ ಎಂದು ವಿವರಿಸಿದರು.
ನಿಷ್ಠೆ, ಪ್ರಾಮಾಣಿಕತೆ, ನಿರಂತರ ಅನುಸರಣೆಗೆ ಅನ್ವರ್ಥವಾಗಿರುವ ಕೆ.ಜಿ.ಭಟ್ ಅವರು ಇಡೀ ಯುವ ಪೀಳಿಗೆಗೆ ಮಾದರಿ ಎಂದು ಪ್ರಶಸ್ತಿ ಪುರಸ್ಕೃತರನ್ನು ಶ್ಲಾಘಿಸಿದರು. ನಮ್ಮ ಯಾವುದೇ ಅಂಗಸಂಸ್ಥೆ ಮಾಡುವ ಖರ್ಚಿನ ಪ್ರತಿಶತ 5ನ್ನು ಶ್ರೀರಾಮನಿಗೆ ಕಪ್ಪವಾಗಿ ಸಲ್ಲಿಸುವ ಯೋಜನೆ ಈ ಸಂದರ್ಭದಲ್ಲಿ ಚಾಲನೆ ಪಡೆಯಿತು.
ಅದು ಸುರಕ್ಷಾ ನಿಧಿಯಾಗಿ ಶ್ರೀಮಠದಲ್ಲಿ ಇರಲಿದೆ ಎಂದು ಸ್ವಾಮೀಜಿ ನುಡಿದರು. ದುಂದುವೆಚ್ಚಕ್ಕೆ ಕಡಿವಾಣ ಹಾಕಿ ರಾಮದೇವರಿಗೆ ಕಪ್ಪವಾಗಿ ಸಲ್ಲಿಸುವ ಈ ನಿಧಿ ಮುಂದಿನ ದಿನಗಳಲ್ಲಿ ಅಕ್ಷಯ ನಿಧಿಯಾಗಿ ರೂಪುಗೊಳ್ಳಲಿದೆ ಎಂದರು.
ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಮಾತನಾಡಿದರು.
ಶಿಕ್ಷಣಕ್ಕಾಗಿ ಯಟ್ಯೂಬ್‌ನಿಂದ ಜಾಹೀರಾತು ಮುಕ್ತ ಯುಟ್ಯೂಬ್ ಪ್ಲೇಯರ್!
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಜಿ. ಭಟ್, ಈ ಪ್ರಶಸ್ತಿಯ ಕೀರ್ತಿ, ಶ್ರೀಮಠದ ಸಂಕಷ್ಟದ ಸಂದರ್ಭದಲ್ಲಿ ಹೆಬ್ಬಂಡೆಯಾಗಿ ನಿಂತ ಶಿಷ್ಯಕೋಟಿಗೆ ಸಲ್ಲುತ್ತದೆ. ಈ ಚಾತುರ್ಮಾಸ್ಯ ಪ್ರಶಸ್ತಿ ರಾಷ್ಟ್ರಪತಿ ವಿಶಿಷ್ಟಸೇವಾ ಪದಕಕ್ಕಿಂತ ಶ್ರೇಷ್ಠವಾದದ್ದು ಎಂದು ಬಣ್ಣಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಸಂಚಾಲಕಿ ಶುಭಮಂಗಳ, ಸಿಗಂಧೂರು ಕ್ಷೇತ್ರದ ಅರ್ಚಕ ಶೇಷಗಿರಿ ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ವೇದಿಕೆಯಲ್ಲಿದ್ದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು ಅವಲೋಕನ ನಡೆಸಿದರು. ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಪರಮೇಶ್ವರ ಮಾರ್ಕಾಂಡೆ ಸಭಾಪೂಜೆ ನೆರವೇರಿಸಿದರು.