Bengaluru: ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ತರಬೇತಿ
ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲು ಚಿಂತನೆ ನಡೆದಿದೆ. ಬಿಬಿಎಂಪಿಯ 17 ಕಾಲೇಜುಗಳಲ್ಲಿನ 700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ಯೋಜನೆ ರೂಪಿಸಲಾಗುತ್ತಿದೆ.
ವರದಿ: ರಕ್ಷಾ ಕಟ್ಟೆಬೆಳಗುಳಿ
ಬೆಂಗಳೂರು (ಜು.14): ಬಿಬಿಎಂಪಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡಲು ಚಿಂತನೆ ನಡೆದಿದೆ. ಬಿಬಿಎಂಪಿಯ 17 ಕಾಲೇಜುಗಳಲ್ಲಿನ 700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗಾಗಿ ಯೋಜನೆ ರೂಪಿಸಲಾಗುತ್ತಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ಸಿಇಟಿ, ಜಿಇಇ ಮತ್ತು ನೀಟ್ ಬರೆಯಲು ಅಗತ್ಯವಿರುವ ತರಬೇತಿ ನೀಡುವುದು ಉದ್ದೇಶ. ಅದರಿಂದ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ ಹಾಗೂ ಕೃಷಿ ವಿಜ್ಞಾನ ಕೋರ್ಸ್‌ಗಳಲ್ಲಿ ಬಿಬಿಎಂಪಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅನುಕೂಲವಾಗಲಿದೆ.
ಇನ್ನು ಚರ್ಚಾ ಹಂತದಲ್ಲಿರುವ ಈ ಯೋಜನೆ ಸದ್ಯದಲ್ಲೇ ಜಾರಿಗೆ ಬರಲಿದೆ. ತರಬೇತಿ ನೀಡುವುದಕ್ಕೆ ಸಂಬಂಧಿಸಿದಂತೆ ಮಾಡಬೇಕಿರುವ ವೆಚ್ಚ, ತರಬೇತಿ ನೀಡಲು ತಜ್ಞರನ್ನು ನೇಮಿಸಬೇಕೆ ಅಥವಾ ಪ್ರತ್ಯೇಕ ಇನ್‌ಸ್‌ಟಿಟ್ಯೂಟ್‌ನ್ನು ನೇಮಕ ಮಾಡಬೇಕೆ ಎಂಬುದಿನ್ನು ನಿರ್ಧಾರವಾಗಿಲ್ಲ. ಪ್ರಮುಖವಾಗಿ ತರಬೇತಿಗೆ ಮಾಡಬೇಕಿರುವ ವೆಚ್ಚವನ್ನು ಯಾವ ಅನುದಾನದ ಮೂಲಕ ಒದಗಿಸಬೇಕು ಎನ್ನುವ ನಿರ್ಣಯ ಆಗಬೇಕಿದೆ. ವರ್ಷದಿಂದ ವರ್ಷಕ್ಕೆ ಬಿಬಿಎಂಪಿ ಶಾಲೆ, ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ.
ಪಿಎಸ್‌ಐ ಹಗರಣ ಕಲಬುರಗಿಗೆ ಸೀಮಿತವಲ್ಲ: ಪ್ರಿಯಾಂಕ್ ಖರ್ಗೆ
ಆದರೆ, ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಹಾಗೂ ಕಲಿಕೆಗೆ ಹೊಸ ಸೌಲಭ್ಯಗಳನ್ನು ಒದಗಿಸಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅದರಂತೆ ರಾತ್ರಿ ಶಾಲೆ ವ್ಯವಸ್ಥೆ, ಶಾಲೆಗಳಲ್ಲಿನ ಮೂಲಸೌಕರ್ಯ ವೃದ್ಧಿಯಂತಹ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಅದರ ಜತೆಗೆ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಡಲು ಅಗತ್ಯವಿರುವ ತರಬೇತಿಯನ್ನು ನೀಡಲು ಚಿಂತನೆ ನಡೆಸಲಾಗಿದೆ.
ರಾತ್ರಿ ಶಾಲೆ: ಬಿಬಿಎಂಪಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಮನೆಯಲ್ಲಿ ಓದಲು ಅವಕಾಶವಿರದ ಮಕ್ಕಳಿಗಾಗಿ ರಾತ್ರಿ ಶಾಲೆ ಆರಂಭಿಸಲು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ರಾತ್ರಿ ಶಾಲೆ ನಡೆಸಿ ಮಕ್ಕಳಿಗೆ ಟ್ಯೂಷನ್ ಮಾದರಿಯಲ್ಲಿ ಶಿಕ್ಷಣ ನೀಡುವುದು ಅಧಿಕಾರಿಗಳ ಪ್ಲ್ಯಾನ್ ಆಗಿದೆ. ಇದರ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಮಪ್ರಸಾತ್ ಮನೋಹರ್ ಈಗಾಗಲೆ ಮುಖ್ಯ ಆಯುಕ್ತರೊಂದಿಗೂ ಚರ್ಚಿಸಿದ್ದು, ಶೀಘ್ರದಲ್ಲಿ ರಾತ್ರಿ ಶಾಲೆಯ ರೂಪುರೇಷೆ ಸಿದ್ಧಪಡಿಸಲಾಗುತ್ತದೆ.
ಮರಗಳನ್ನು ಕತ್ತರಿಸಿದ್ದಕ್ಕೆ ನೆಡುತೋಪು ಯೋಜನೆ ಜಾರಿ ಮಾಡಿ: ಹೈಕೋರ್ಟ್
ಬಿಬಿಎಂಪಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಗತ್ಯವಿರುವ ತರಬೇತಿ ನೀಡುವ ಚಿಂತನೆಯಿದೆ. ಇದು ಇನ್ನೂ ಚರ್ಚಾ ಹಂತದಲ್ಲಿದ್ದು, ಶೀಘ್ರದಲ್ಲಿ ರೂಪುರೇಷೆ ಸಿದ್ಧಪಡಿಸಲಾಗುವುದು. ಜತೆಗೆ ಮುಖ್ಯ ಆಯುಕ್ತರೊಂದಿಗೆ ಚರ್ಚಿಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.