ಪಿಎಸ್‌ಐ ಹಗರಣ ಕಲಬುರಗಿಗೆ ಸೀಮಿತವಲ್ಲ: ಪ್ರಿಯಾಂಕ್ ಖರ್ಗೆ
* ಇದು ರಾಜ್ಯವ್ಯಾಪಿ ಹಗರಣ
* ಸರ್ಕಾರದ ಗಮನ ಬರೀ ಕಲಬುರಗಿ ಮೇಲೆ
* ಉಳಿದ ಕೇಂದ್ರಗಳ ಅಕ್ರಮ ಮುಚ್ಚಿ ಹಾಕಲು ಸರ್ಕಾರ ಯತ್ನ
ಬೆಂಗಳೂರು(ಜು.14): ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕಲಬುರಗಿಯ ಪರೀಕ್ಷಾ ಕೇಂದ್ರವೊಂದರಲ್ಲೇ 3.5 ಕೋಟಿ ರು. ಅಕ್ರಮ ನಡೆದಿದೆ. ಇದರ ಬಗ್ಗೆಯೇ ರಾಜ್ಯ ಸರ್ಕಾರ ಗಮನ ಹರಿಸುತ್ತಿದ್ದು, ಉಳಿದ ಕೇಂದ್ರಗಳ ಅವ್ಯವಹಾರದ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಆದ್ದರಿಂದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಯ ದಿವ್ಯಾ ಹಾಗರಗಿ ಅವರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೇ 3.5 ಕೋಟಿ ರು. ಅಕ್ರಮ ನಡೆದಿದೆ. ಕಲಬುರಗಿಯಲ್ಲೇ 11 ಪರೀಕ್ಷಾ ಕೇಂದ್ರಗಳಿವೆ. ಇನ್ನುಳಿದಂತೆ ರಾಜ್ಯದಲ್ಲಿ ಎಷ್ಟೊಂದು ಪರೀಕ್ಷಾ ಕೇಂದ್ರಗಳಿವೆಯಲ್ಲ..? ಆದರೆ ಸರ್ಕಾರ ಒಂದು ಪರೀಕ್ಷಾ ಕೇಂದ್ರ ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದೆ. ಇನ್ನುಳಿದ ಸೆಂಟರ್‌ಗಳ ಅವ್ಯವಹಾರವನ್ನೂ ತನಿಖೆ ಮಾಡ ಬೇಕಿರುವುದರಿಂದ ನ್ಯಾಯಾಂಗ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಪಿಎಸ್‌ಐ ಹಗರಣದ ಬಗ್ಗೆ ಸಿಐಡಿಯವರು ಜು.1 ರಂದು ಕಲಬುರಗಿಯಲ್ಲಿ ಸುಮಾರು 2 ಸಾವಿರ ಪುಟದ ಆರೋಪಪಟ್ಟಿಸಲ್ಲಿಸಿದ್ದಾರೆ. ಪ್ರಾಂಶುಪಾಲರು ಎಂದು ಹೇಳಿಕೊಂಡು ಪರೀಕ್ಷೆ ನಡೆಯುವ ಸಂದರ್ಭದಲ್ಲಿ ದಿವ್ಯಾ ಹಾಗರಗಿ ಹಾಜರಿದ್ದಾರೆ. ಪರೀಕ್ಷೆಗೆ ಗೈರಾಗಿರುವ ಅಭ್ಯರ್ಥಿಯ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಅದನ್ನು ವಾಟ್ಸಾಪ್ ಮೂಲಕ ತಂಡವೊಂದಕ್ಕೆ ಕಳುಹಿಸಿ ಅವರಿಂದ ದಿವ್ಯಾ ಹಾಗರಗಿ ಉತ್ತರ ತರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
PSI Scam: ರಾಜ್ಯ ಸರ್ಕಾರಕ್ಕೆ 6 ಪ್ರಶ್ನೆ ಕೇಳಿದ ಪ್ರಿಯಾಂಕ್ ಖರ್ಗೆ
ಉತ್ತರವನ್ನು ದಿವ್ಯಾ ಅವರು ಪರೀಕ್ಷಾ ಮೇಲ್ವಿಚಾರಕರಿಗೆ ವಾಟ್ಸ್ ಅಪ್ ಮಾಡಿದ್ದು ಅವರು ಮೌಖಿಕವಾಗಿ ಅಭ್ಯರ್ಥಿಗಳಿಗೆ ಉತ್ತರ ಹೇಳಿ ಬರೆಸಿದ್ದಾರೆ. ಪ್ರಾಂಶುಪಾಲ ಕಾಶೀನಾಥ್ ಪ್ರಕಾರ ಒಬ್ಬ ಅಭ್ಯರ್ಥಿಗೆ 30 ಲಕ್ಷ ನಿಗದಿ ಮಾಡಲಾಗಿದೆ. ಬ್ಲೂ-ಟೂತ್ ಬಳಸಿಯೂ ಅಕ್ರಮ ನಡೆಸಲಾಗಿದೆ. ಸಾಕ್ಷಿ ಸಿಗಬಾರದು ಎಂದು ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಜಜ್ಜಿ ಹಾಕಲಾಗಿದೆ ಎಂದು ವಿವರಿಸಿದರು.
ವಿಧಾನ ಸೌಧವಲ್ಲ, ವ್ಯಾಪಾರ ಸೌಧ:
ಅಕ್ರಮದ ತನಿಖೆಯನ್ನು ಕಲಬುರಗಿಗೆ ಮಾತ್ರ ಸೀಮಿತವಾಗಿ ಪೂರ್ಣಗೊಳಿಸಲು ಸರ್ಕಾರ ಮುಂದಾಗಿದ್ದು ರಕ್ಷಣೆ ನೀಡುತ್ತಿದೆ. ಬೆಂಗಳೂರಿನವರೆಗೆ ತನಿಖೆ ನಡೆಯುತ್ತಿಲ್ಲ. ವಿಧಾನ ಸೌಧವನ್ನು ವ್ಯಾಪಾರ ಸೌಧವನ್ನಾಗಿ ಮಾಡಲು ಹೊರಟಿದ್ದಾರೆ. ತನಿಖೆ ಮುಗಿಯುವುದು ಯಾವಾಗ, ಪುನಃ ಪರೀಕ್ಷೆ ನಡೆಸುವುದು ಯಾವಾಗ, ತನಿಖೆ ಮುಗಿಯುವಷ್ಟರಲ್ಲಿ ಅಭ್ಯರ್ಥಿಗಳಿಗೆ ವಯಸ್ಸಾಗಿರುತ್ತದೆ. ನ್ಯಾಯಾಂಗ ತನಿಖೆ ನಡೆಸಲು ಹಿಂದೇಟು ಏಕೆ ಎಂದು ಪ್ರಶ್ನಿಸಿದರು.
'PSI Scam ನಾನು ಮಾತನಾಡಿದ್ದಕ್ಕೆ ಬೆಳಕಿಗೆ ಬಂತು, ಸುಮ್ನೇ ಇದ್ದಿದ್ರೆ ಮುಚ್ಚಿ ಹಾಕ್ತಿದ್ರು'
ಈ ಸರ್ಕಾರದ ಅವಧಿಯಲ್ಲಿ ಎಸ್‌ಡಿಎ, ಎಫ್‌ಡಿಎ, ಲೋಕೋಪಯೋಗಿ ಇಲಾಖೆ, ಪೊಲೀಸ್ ಪೇದೆ ಸೇರಿದಂತೆ ಇತರ ನೇಮಕಾತಿಗಳಲ್ಲೂ ಅವ್ಯವಹಾರ ನಡೆದಿದೆ. ಇವೆಲ್ಲವುಗಳ ತನಿಖೆ ಆಗಬೇಕು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಳಿ ಅಕ್ರಮಕ್ಕೆ ಸಂಬಂಧಿಸಿದ ಮಾಹಿತಿಗಳಿವೆಯಂತೆ. ಅವರನ್ನೂ ತನಿಖೆ ನಡೆಸಿ. ಮಾಜಿ ಮುಖ್ಯಮಂತ್ರಿ ಪುತ್ರ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪವಿದ್ದು ಅವರನ್ನೂ ವಿಚಾರಣೆ ನಡೆಸಿ. ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪಾಲ್ ಹೇಳಿಕೆ ನೀಡಲು ಅವಕಾಶ ಕೊಡಿ ಎಂದು ಆಗ್ರಹಿಸಿದರು.
‘ಖರ್ಗೆ ಉತ್ಸವ’ ಬಗ್ಗೆ ಕೇಳಿದ ಪ್ರಶ್ನೆಗೆ ತಿರುಗೇಟು
‘ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕರೂ ಆಗಿರುವ ತಂದೆ ಮಲ್ಲಿಕಾರ್ಜುನ ಖರ್ಗೆಯವರ ಉತ್ಸವ ಮಾಡಲಾಗುವುದೇ?’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ, ‘ನಮ್ಮ ಅಭಿಮಾನಿಗಳು ನಮಗೆ ಉತ್ಸವ ಮಾಡುತ್ತಾರೆ. ಕೆಪಿಸಿಸಿ ಅಧ್ಯಕ್ಷರಿಗೆ ಅವರ ಅಭಿಮಾನಿಗಳು, ಶಾಸಕಾಂಗ ಪಕ್ಷದ ನಾಯಕರಿಗೆ ಅವರ ಅಭಿಮಾನಿಗಳು ಉತ್ಸವ ಮಾಡುತ್ತಾರೆ. ಉತ್ಸವದ ವಿಷಯ ಬಿಡಿ. ಯುವಕರಿಗೆ ಆಗಿರುವ ಮೋಸ ಸರಿಪಡಿಸೋಣ’ ಎಂದು ತಿರುಗೇಟು ನೀಡಿದರು.