Asianet Suvarna News Asianet Suvarna News

ಹುಬ್ಬಳ್ಳಿ: ತಗಡಿನ ಶೆಡ್‌ನಲ್ಲಿಯೇ ಶತಮಾನದ ಶಾಲೆ..!

ಕಾರವಾರ ರಸ್ತೆಯಲ್ಲಿನ ಗಿರಣಿಚಾಳದ ‘ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’ಯ ದಯನೀಯ ಸ್ಥಿತಿ ಇದು.

Century School in a Shed in Hubballi grg
Author
First Published Nov 23, 2022, 11:15 AM IST

ಬಾಲಕೃಷ್ಣ ಜಾಡಬಂಡಿ 

ಹುಬ್ಬಳ್ಳಿ(ನ.23): ಮಳೆ ಬಂದರೆ ಸೋರುವ ಶೆಡ್‌, ಬೇಸಿಗೆಯ ಬಿಸಿಲಿನ ಜಳಕ್ಕೆ ಬಸವಳಿಯುವ ವಿದ್ಯಾರ್ಥಿಗಳು, ಶಿಕ್ಷಕರು. ಬಾಯಾರಿಕೆ ತಣಿಸಿಕೊಳ್ಳಲು ತೊಟ್ಟು ನೀರೂ ಇಲ್ಲ..!. ಇದು ಶತಮಾನಗಳ ಇತಿಹಾಸ ಹೊಂದಿರುವ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ, ಬಿಜೆಪಿ ಮುಖಂಡರಾದ ಹನುಮಂತಪ್ಪ ಮಾಲಪಲ್ಲಿ, ಪರಶುರಾಮ ಪೂಜಾರ, ಜೆಡಿಎಸ್‌ ಮುಖಂಡ ಮೇಘರಾಜ ಹಿರೇಮನಿ ಅವರು ಓದಿದ ಕಾರವಾರ ರಸ್ತೆಯಲ್ಲಿನ ಗಿರಣಿಚಾಳದ ‘ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ’ಯ ದಯನೀಯ ಸ್ಥಿತಿ ಇದು.

1987ರಲ್ಲಿ ನಿರ್ಮಿಸಿದ ಶೆಡ್‌:

ಭಾರತ್‌ ಜವಳಿ ಗಿರಣಿಯಲ್ಲಿ ದುಡಿಯುತ್ತಿದ್ದ ಕಾರ್ಮಿಕರ ಮಕ್ಕಳಿಗಾಗಿ ಶತಮಾನದ ಹಿಂದೆ ಈ ಶಾಲೆಯನ್ನು ತೆರೆಯಲಾಗಿದೆ. 1987ರಲ್ಲಿ ಈ ಶಾಲೆಗೆ ತಗಡಿನ ಶೆಡ್‌ ರೂಪದ ಕೋಣೆ ನಿರ್ಮಿಸಲಾಗಿದೆ. ಅಂದಿನಿಂದ ಇಂದಿನವರೆಗೂ ಆ ಶಾಲೆಯ ಮೇಲ್ಚಾವಣಿಗೆ ತಗಡಿನೆ ಶೀಟ್‌ ಖಾಯಂ ಆಗಿದೆ. ಇದನ್ನು ಗಮನಿಸಿದ ರೌಂಡ್‌ ಟೇಬಲ್‌ ಇಂಡಿಯಾ-ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಗಳು ಒಂದು ಕೊಠಡಿ ನಿರ್ಮಿಸಿಕೊಟ್ಟಿವೆ. ಆದಾದ ಬಳಿಕ ಸರ್ಕಾರವಾಗಲಿ, ಯಾವುದೇ ಜನಪ್ರತಿನಿಧಿಗಳಾಗಲಿ ಈ ಶಾಲೆಯತ್ತ ನೋಡಿಯೇ ಇಲ್ಲ. ಹಿಂದೆ ಈ ಶಾಲೆಯ ಬಳಿ ದೊಡ್ಡ ಮರವಿತ್ತು. ಬೇಸಿಗೆಯಲ್ಲಿ ಈ ಮರದ ಕೆಳಗೆ ಮಕ್ಕಳನ್ನು ಕೂಡ್ರಿಸಿಕೊಂಡು ಶಿಕ್ಷಕರು ಪಾಠ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಆ ಮರ ಕಡಿಯಲಾಗಿದೆ. ಮಕ್ಕಳಿಗೆ ಮರದ ನೆರಳಿನ ಭಾಗ್ಯವೂ ಇಲ್ಲದಂತಾಗಿದೆ.

ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳೆಸಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಮೂರು ತರಗತಿ:

1ರಿಂದ 5ನೇ ತರಗತಿ ಹೊಂದಿರುವ ಈ ಶಾಲೆಯಲ್ಲಿ ಕೇವಲ 31 ಮಕ್ಕಳು ಕಲಿಯುತ್ತಿದ್ದು ಎರಡು ಕೊಠಡಿಗಳಿವೆ. ರೌಂಡ್‌ ಟೇಬಲ್‌ ಇಂಡಿಯಾ-ಲೇಡಿಸ್‌ ಸರ್ಕಲ್‌ ಇಂಡಿಯಾ ಸಂಸ್ಥೆ ಇತ್ತೀಚೆಗೆ ಒಂದು ಕೊಠಡಿ ಕಟ್ಟಿಸಿಕೊಂಡಿದ್ದು ಅದರಲ್ಲಿ 1,2 ಹಾಗೂ 3ನೇ ತರಗತಿ, ತಗಡಿನ ಶೆಡ್‌ನ ಒಂದೇ ಕೊಠಡಿಯಲ್ಲಿ 4 ಮತ್ತು 5ನೇ ತರಗತಿ ಹಾಗೂ ಕಚೇರಿ ಮಾಡಲಾಗಿದೆ.

ಈ ಶಾಲೆಯಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವರು ಗಣ್ಯರು ಓದಿದ್ದಾರೆ. ಅವರು ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದರೂ ಈ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿಕೊಟ್ಟಿಲ್ಲ. ಹೊಸ ಕಟ್ಟಡ ನಿರ್ಮಿಸಿಕೊಂಡುವಂತೆ ಹೋರಾಟ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಮೋಹನ ಹಿರೇಮನಿ.

ಆದರೆ, ಶಾಲೆ ಇರುವ ಜಾಗದ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯವಿದೆ. ಹಾಗಾಗಿ ಶಾಲೆಯ ಕಟ್ಟಡಕ್ಕೆ ಸೂಕ್ತ ಜಾಗ ನೀಡುವಂತೆ ಮಹಾನಗರ ಪಾಲಿಕೆಗೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಎರಡು ಬಾರಿ ಪತ್ರ ಬರೆದಿದ್ದಾರೆ. ಜಾಗ ಖಾಸಗಿ ಒಡೆತನದಲ್ಲಿ ಇರುವುದರಿಂದ ಕಟ್ಟಡ ನಿರ್ಮಿಸುವುದು ಶಿಕ್ಷಣ ಇಲಾಖೆಗೂ ಕಗ್ಗಂಟಾಗಿ ಪರಿಣಮಿಸಿದೆ.

ಪ್ರವೇಶಾತಿ ಕುಸಿತ:

ಬಡ ಮಕ್ಕಳೇ ಓದುವ ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಕುಡಿಯಲು ನೀರಿಲ್ಲ, ನೈಸರ್ಗಿಕ ಕರೆಗೆ ಶೌಚಾಲಯವೂ ಇಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ಪ್ರವೇಶಾತಿಯು ಕುಸಿಯುತ್ತಿದೆ. ತಕ್ಷಣ ಸರ್ಕಾರ ಈ ಶಾಲೆಯತ್ತ ಚಿತ್ತ ಹರಿಸಿ ಸುಸಜ್ಜಿತ ಕಟ್ಟಡ ಕಟ್ಟಿಸುವ ಜತೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂಬುದು ಶಿಕ್ಷಣ ಪ್ರೇಮಿಗಳ ಒತ್ತಾಯ.

Mysuru : ಶಿಕ್ಷಣದಿಂದ ವಂಚಿತರಾಗುತ್ತಿರುವ ಆದಿವಾಸಿ ಮಕ್ಕಳು

ಈಗಾಗಲೇ 2 ಬಾರಿ ಶಾಲೆಗೆ ಭೇಟಿ ನೀಡಿದ್ದೇನೆ. ಶಾಲೆಗೆ ಕೊಠಡಿ ನಿರ್ಮಿಸಲು ತಯಾರಿದ್ದೇವೆ. ಆದರೆ ಸೂಕ್ತ ಜಾಗದ ಕಾರಣ ಹಿನ್ನಡೆಯಾಗಿದೆ. ಶಾಲಾ ಕೊಠಡಿ ನಿರ್ಮಿಸಲು ಜಾಗ ನೀಡುವಂತೆ ಮಹಾನಗರ ಪಾಲಿಕೆಗೆ ಮನವಿ ಮಾಡಲಾಗಿದೆ. ಶಾಲೆ ಸ್ಥಳಾಂತರದ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ ಅಂತ ಹುಬ್ಬಳ್ಳಿ ಶಹರ ಬಿಇಒ ಚೆನ್ನಬಸಪ್ಪಗೌಡ ತಿಳಿಸಿದ್ದಾರೆ. 

ಮಳೆ ಬಂದರೆ ಶೆಡ್‌ ಸೋರುತ್ತಿದ್ದು ತಾತ್ಕಾಲಿಕ ದುರಸ್ತಿ ಮಾಡಿಸಲಾಗಿದೆ. ಕುಡಿಯುವ ನೀರು, ಶೌಚಾಲಯ ಸೇರಿ ಅಗತ್ಯ ಸೌಲಭ್ಯ ಒದಗಿಸಲು ಕೋರಿ ಪಾಲಿಕೆ ಸದಸ್ಯರಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಅಂತ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯಿನಿ ಎ.ಎ. ಕಬ್ಬೇರ ಹೇಳಿದ್ದಾರೆ. 
 

Follow Us:
Download App:
  • android
  • ios