Mysuru : ಶಿಕ್ಷಣದಿಂದ ವಂಚಿತರಾಗುತ್ತಿರುವ ಆದಿವಾಸಿ ಮಕ್ಕಳು
ತಳಹಂತದಿಂದ ರಾಜ್ಯ ಮಟ್ಟದವರೆಗೂ ನೌಕರರನ್ನು ಮತ್ತು ಅಧಿಕಾರಿಗಳನ್ನು ನೇಮಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸರ್ಕಾರ ಎಷ್ಟೇ ಕೆಲಸ ಮಾಡಿದರೂ ಆದಿವಾಸಿಗಳ ಶೈಕ್ಷಣಿಕ ಪ್ರಗತಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ.
ಎಚ್.ಡಿ. ಕೋಟೆ (ನ.18): ನನ್ನ ಮಗ ಅಥವಾ ಮಗಳು ಡಾಕ್ಟರ್ ಆಗಬೇಕು, ಎಂಜಿನಿಯರ್ ಆಗಬೇಕು. ಇಡೀ ಶಾಲೆಗೆ ಮೊದಲು ಬರಬೇಕು, ಟಾಪ್‌ಲಿಸ್ಟ್‌ನಲ್ಲಿ ನಮ್ಮ ಮಕ್ಕಳ ಹೆಸರಿರಬೇಕು ಎಂದು ದಿನಬೆಳಗಾದರೆ ಮಕ್ಕಳ ಬಗ್ಗೆ ಕಾಳಜಿ ಮತ್ತು ಮುತುವರ್ಜಿ ವಹಿಸಿ, ಶಾಲೆಗೆ ಹೋಗಲು ಆಟೋ, ವ್ಯಾನು, ಬಸ್ಸುಗಳನ್ನು ಮಾಡಿ, ಮಡಿಮಡಿ ಬಟ್ಟೆ, ಬಿಸಿ ಬಿಸಿ ಊಟ ಹಾಗೂ ಶಾಲೆ ಕಲಿಕೆ ಸಾಲದೆಂದು ಸಂಜೆ ಟ್ಯೂಷನ್ ಕೊಡಿಸುವ ಪಟ್ಟಣದ ತಂದೆ ತಾಯಿಗಳು ಒಂದು ಕಡೆಯಾದರೇ, ಶಿಕ್ಷಣದಿಂದ ವಂಚಿತರಾಗುತ್ತಿರುವ ಆದಿವಾಸಿ ಮಕ್ಕಳು ಮತ್ತೊಂದು ಕಡೆ.
ಶಾಲೆಗೆ (School) ಹೋದರೆಷ್ಟು ಬಿಟ್ಟರೆಷ್ಟು. ಏನು ಕಲಿತ್ತಿದ್ದಾರೆ? ಹೇಗೆ ಕಲಿಯುತ್ತಿದ್ದಾರೆ? ಅವರ ಪುಸ್ತಕ (Book) , ಪೆನ್ನು, ಬ್ಯಾಗು ಹೇಗಿವೆ, ಶಾಲೆಯಲ್ಲಿ ಪಾಠ ಪ್ರವಚನ ಹೇಗೆ ನಡೆಯುತ್ತಿವೆ, ಎಂಬುದರ ಪರಿವೆಯೇ ಇಲ್ಲದೆ ‘ಅವ ಯಾನಾ ಓದಿದರೆ ನನಗೇನು, ನನ್ನ ಜೊತೆ ಕಾಡು ಸುತ್ತಿದರೆ ಸಾಕು. ನಾ ಸೂಲಿಗೆ ಹೋಗು ಎಂದರೆ ಅವ ಒಲ್ಲೆ ಅಂತಾನೇ, ನಾ ಹೇನಾ ಮಾಡದು’ ಎನ್ನುವ ಮತ್ತೊಂದು ವರ್ಗ ಇನ್ನೂಂದು ಕಡೆ.!
ರಾಜ್ಯ ಮತ್ತು ಕೇಂದ್ರ ಸರ್ಕಾರದ ಲಕ್ಷಾಂತರ ರು.ಗಳು ಆದಿವಾಸಿ ಮತ್ತು ಬುಡಕಟ್ಟು ಜನರ ಶಿಕ್ಷಣಕ್ಕಾಗಿ ಹರಿದು ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಾಗೇಯೇ ಈ ಆದಿವಾಸಿಗಳ ಅಭಿವೃದ್ಧಿ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಪ್ರತ್ಯೇಕ ಇಲಾಖೆಯನ್ನೇ ಸೃಷ್ಟಿಸಿಕೊಂಡು ಅದಕ್ಕೆ ಪ.ವರ್ಗಗಳ ಕಲ್ಯಾಣ ಇಲಾಖೆ ಎಂದು ಈ ಇಲಾಖೆಗೆ ಪ್ರತ್ಯೇಕವಾಗಿ ತಳಹಂತದಿಂದ ರಾಜ್ಯ ಮಟ್ಟದವರೆಗೂ ನೌಕರರನ್ನು ಮತ್ತು ಅಧಿಕಾರಿಗಳನ್ನು ನೇಮಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸರ್ಕಾರ ಎಷ್ಟೇ ಕೆಲಸ ಮಾಡಿದರೂ ಆದಿವಾಸಿಗಳ ಶೈಕ್ಷಣಿಕ ಪ್ರಗತಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ.
ಕಾರಣ ನೂರಾರಿದ್ದರೂ ಮುಖ್ಯವಾಗಿ ಅರಣ್ಯದೊಳಗೆ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಹಾಡಿಗಳಿಗೆ ಜ್ವಲಂತ ಸಮಸ್ಯೆಗಳು ಎಡಬಿಡದೆ ಕಾಡುತ್ತಿವೆ. ಬಹಳ ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಹಾಡಿಗಳಲ್ಲಿ ಸಮರ್ಪಕವಾಗಿ ಶಾಲಾ ಕೊಠಡಿಗಳು ಇಲ್ಲ. ಬಹುಪಾಲು ಹಾಡಿಗಳಲ್ಲಿ ನೆರಕೆ, ಶೆಡ್ಡು, ಟಾರ್ಪಲ…, ತಗಡು ಮತ್ತು ಸೀಟುಗಳ ಆಶ್ರಯದಲ್ಲಿ ತರಗತಿಗಳು ನಡೆಯುತ್ತಿವೆ.
1 ರಿಂದ 7ನೇ ತರಗತಿವರೆಗೂ ಒಂದೆ ಕಡೆ ವಿದ್ಯಾಭ್ಯಾಸ ಮಾಡಿಸುತ್ತಿದ್ದರೆ, ಶಾಲಾ ಕೊಠಡಿ ನಿರ್ಮಿಸಲು ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಇರುವಂತ ಶಿಥಿಲ ಕೇಂದ್ರಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಇಲ್ಲ. ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಎರಡು ಮೂರು ಶಾಲೆಗಳಿಗೆ ಒಬ್ಬರೇ ಶಿಕ್ಷಕರು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಸಾಕಷ್ಟುಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಿಗದಿತ ಸಮಯಕ್ಕೆ ಮತ್ತು ಸರಿಯಾಗಿ ಶಾಲೆಗೆ ಶಿಕ್ಷಕರೇ ಬಾರದೆ ಇರುವುದು. ಕಾಲಕಾಲಕ್ಕೆ ಸರಿಯಾಗಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ಸರಬರಾಜು ಆಗುತ್ತಿಲ್ಲ. ಮಕ್ಕಳಿಗೆ ಪೀಠೊಪಕರಣ ಇಲ್ಲ, ಶೌಚಾಲಯ ಇಲ್ಲ, ಕುಡಿವ ನೀರಿಲ್ಲ, ಮಕ್ಕಳನ್ನು ಓದಿಸುವಲ್ಲಿ ಪೋಷಕರಲ್ಲಿಯೂ ನಿರಾಸಕ್ತಿ. ಇಷ್ಟೆಲ್ಲಾ ಇಲ್ಲಗಳ ನಡುವೆ ಆದಿವಾಸಿ ಮಕ್ಕಳು ಓದುತ್ತಿದ್ದಾರೆ.
ಶಾಲೆಯಲ್ಲಿ ಕುಳಿತು ಬಾಯಲ್ಲಿ ರಗಸದಅ ಜವಮಬನ ಎಂದು ಕಲಿಯುತ್ತಾ ವಿದ್ಯೆಯಿಂದ ಭವ್ಯವಾದ ಬದುಕ್ಕನ್ನು ಕಟ್ಟಿಕೊಳ್ಳಬೇಕಾದ ಮಕ್ಕಳು ಇಂದು ನೆಲ್ಲಿಕಾಯಿ, ಗಾಂಧರಿ ಮೆಣಸಿನ ಪೊಟ್ಟಣಗಳನ್ನು ಹಿಡಿದು ರಸ್ತೆಬದಿಯಲ್ಲಿ ಪುಡಿಗಾಸಿಗಾಗಿ ಅಣ್ಣಾ ಅಕ್ಕಾ ಅಂತ ಹಂಬಲಿಸುವ ದೃಶ್ಯ ನಾಗರೀಕ ಸಮಾಜವನ್ನು ನಾಚೀಸುವಂತಿದೆ ಎಂದು ಉಮೇಶ್ ಬಿ. ನೂರಲಕುಪ್ಪೆ ತಿಳಿಸಿದ್ದಾರೆ.
ಕೊನೆಗೆ ಈ ಮಕ್ಕಳು ಶಿಕ್ಷಣದಿಂದ ವಂಚಿತವಾಗುತ್ತಿರುವುದಕ್ಕೆ ಹೊಣೆಗಾರಿಕೆಯನ್ನು ಯಾರುಹೋರಬೇಕು ಎಂಬುದು ಪ್ರಶ್ನಾರ್ಹವಾಗಿದೆ ಎಂದಿದ್ದಾರೆ.
-- ಬಾಕ್ಸ--
-- ಕಲಿಕೆಯಿಂದ ಹಿಮ್ಮುಖವಾಗುವ ಅಪಾಯ --
ಹಲವು ಸಮಸ್ಯೆಗಳಿಂದ ಅರಣ್ಯದೊಳಗಿನ ಮತ್ತು ಅರಣ್ಯದಂಚಿನ ಆದಿವಾಸಿ ಮಕ್ಕಳು ಕಲಿಕೆಯಿಂದ ಹಿಮ್ಮುಖವಾಗುವ ಎಲ್ಲ ಲಕ್ಷಣವಿದೆ. ಕೆಲವೊಮ್ಮೆ ಬಲವಂತವಾಗಿ ಸ್ಥಳೀಯ ಶಿಕ್ಷಕರ ಒತ್ತಡಕ್ಕೂ ಕೆಲವು ತಂದೆ ತಾಯಿಗಳ ಆಸಕ್ತಿಗೂ ಕೆಲವು ಮಕ್ಕಳು ಶಾಲೆಗೆ ಹೋಗುತ್ತಿರುವುದನ್ನು ಬಿಟ್ಟರೆ. ಇಡಿ ಹಾಡಿಯ ಎಲ್ಲ ಮಕ್ಕಳು ಕಲಿಕೆಯ ದೃಷ್ಟಿಯಿಂದ ಸ್ವಾಭಾವಿಕವಾಗಿ ಮಕ್ಕಳು ಶಾಲೆಗೆ ಹೋಗುವಂತ ವಾತಾವರಣ ಕಡಿಮೆಯಾಗುತ್ತಿದೆ.
ಅಷ್ಟೇ ಅಲ್ಲ ನೋವಿನ ಸಂಗತಿ ಎಂದರೆ ಕಾಡಿನಿಂದ ತಂದಂತಹ ನೆಲ್ಲಿಕಾಯಿ. ಗಾಂಧರಿ ಮೆಣಸಿನಕಾಯಿ, ಮೀನು, ಸೊಪ್ಪು, ಜೇನುಗಳಂತ ಆಹಾರ ತೆಗೆದುಕೊಂಡು ಬಳ್ಳೆಯಿಂದ ಮಾನಂದವಾಡಿಗೆ ಹೋಗುವ ಮುಖ್ಯರಸ್ತೆಯ ಬದಿಯಲ್ಲಿ ನಿಂತು ದಾರಿಹೋಕರಿಗೆ ಮಾರಾಟ ಮಾಡುವ ದೃಶ್ಯಗಳು ಮನುಷ್ಯತ್ವದ ನೆಲೆಯನ್ನು ಅಲುಗಾಡಿಸುವಂತಿದೆ.