Guest Lecturers ಅತಿಥಿ ಉಪನ್ಯಾಸಕರಿಗೆ ಭರವಸೆ ನೀಡಿದ ಸಚಿವ ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ ಭೇಟಿಯಾದ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ
ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನ ಮುಂದಿಟ್ಟ ನಿಯೋಗ
ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ನಿಯೋಗವು ಮನವಿ
ಬೆಂಗಳೂರು, (ಜ.07): ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ನಿಯೋಗವು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(Dr CN Ashwath Narayan) ಅವರನ್ನು ಭೇಟಿ ಮಾಡಿತು.
ಇಂದು(ಶುಕ್ರವಾರ) ಬೆಂಗಳೂರಿನಲ್ಲಿ ಅಶ್ವತ್ಥ್ ನಾರಾಯಣ ಅವರನ್ನ ಭೇಟಿ ಮಾಡಿ, ಅತಿಥಿ ಉಪನ್ಯಾಸಕರು(Guest Lecturer) ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಿದರು. ಜೊತೆಗೆ, ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವಂತೆ ನಿಯೋಗವು ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಕೂಡ ಇದ್ದರು.
Appointment of Guest Lecturers: 14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ !
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯರು, ಅತಿಥಿ ಉಪನ್ಯಾಸಕರ ಸಂಘಟನೆಗಳು ಮತ್ತು ಸಂಬಂಧಿಸಿದ ಎಲ್ಲರೊಂದಿಗೂ ಚರ್ಚಿಸಿ, ಶೀಘ್ರದಲ್ಲೇ ಪರಿಹಾರ ಕಂಡುಹಿಡಿಯಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸಂಘಟನೆಯ ಅಧ್ಯಕ್ಷ ಡಾ. ರಘು ಅಕಮಂಚಿ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಎಬಿವಿಪಿ ಮುಖಂಡರಾದ ಸ್ವಾಮಿ ಮೊದಲಾದವರು ಇದ್ದರು.
ಈ ಹಿಂದೆ ನಡೆದ ಸಭೆ
ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಪದವಿ ಕಾಲೇಜುಗಳ 14 ಸಾವಿರ ಅತಿಥಿ ಉಪನ್ಯಾಸಕರ (Guest Lecturers) ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಚಿಸಿರುವ ಉನ್ನತ ಮಟ್ಟದ ಸಮಿತಿಗೆ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (C. N. Ashwath Narayan) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಸಮಿತಿ ನೀಡಿದ ವರದಿ ಆಧರಿಸಿ ಅತಿಥಿ ಉಪನ್ಯಾಸಕರ ಬೇಡಿಕೆ ಹಾಗೂ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಕಲ್ಪಿಸಲು ಸೂಕ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ, ಧಾರವಾಡ ಸೇರಿದಂತೆ ವಿವಿಧೆಡೆ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಿರತರಾಗಿರುವ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.
ಅತಿಥಿ ಉಪನ್ಯಾಸಕರನ್ನ ತರಾಟೆಗೆ ತೆಗೆದುಕೊಂಡಿದ್ದ ನಾಗೇಶ್
ಕೋಲಾರ (ಜ. 1): ‘ನೀವು ಕೆಲಸ ಮಾಡಿ ಎಂದು ನಿಮ್ಮ ಮನೆಗೆ ಬಂದು ನಾವು ಕೇಳಿಕೊಂಡಿದ್ವಾ, ಇಷ್ಟಇದ್ದರೆ ಕೆಲಸ ಮಾಡಿ, ಇಲ್ಲ ಅಂದರೆ ಪರೀಕ್ಷೆ ಬರೆದು ಬೇರೆ ದಾರಿ ನೋಡಿಕೊಳ್ಳಿ’. ಇದು ವೇತನ ಹೆಚ್ಚಿಸಿ, ಸೇವಾಭದ್ರತೆ ನೀಡಿ ಎಂದು ಅತಿಥಿ ಉಪನ್ಯಾಸಕರು (Guest Lecture) ಮನವಿ ಮಾಡಿದಾಗ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B C Nagesh) ಪ್ರತಿಕ್ರಿಯಿಸಿದ ಪರಿ. ಕೋಲಾರದ (Kolar) ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮುಳಬಾಗಿಲುನಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ (Bengaluru) ತೆರಳುತ್ತಿದ್ದಾಗ ಕೋಲಾರದಲ್ಲಿ ಕಳೆದ 17 ದಿನಗಳಿಂದ ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ವಿಷಯ ತಿಳಿದು ಕೋಲಾರ-ಮುಳಬಾಗಿಲು ಹೆದ್ದಾರಿಯ ಬಂಗಾರಪೇಟೆಯ ಫ್ಲೈ ಓವರ್ ಬಳಿ ಸಚಿವರ ಕಾರಿಗೆ ಮುತ್ತಿಗೆ ಹಾಕಿದರು. ‘ನಮಗೆ ವೇತನ ಹೆಚ್ಚಳ ಮಾಡಿ, ಜೀವನಕ್ಕೆ ಭದ್ರತೆ ನೀಡಿ, ನಾವು ಶೋಷಣೆಗೆ ಒಳಗಾಗಿದ್ದೇವೆ’ ಎಂದು ಸಚಿವರಿಗೆ ಮನವಿ ಪತ್ರ ನೀಡಿದರು. ಆಗ ಗರಂ ಆದ ಸಚಿವರು, ಉಪನ್ಯಾಸಕರಿಗೆ ಎಚ್ಚರಿಕೆ ನೀಡಿ ‘ಶೋಷಣೆ ಎನ್ನುವ ಪದಕ್ಕೆ ಅರ್ಥ ಗೊತ್ತೇನ್ರಿ?’ ಎಂದು ತರಾಟೆಗೆ ತೆಗೆದುಕೊಂಡರು.
ನಿಮ್ಮ ಮನೆಗೆ ಬಂದು ನಾವು ಕೇಳಿಕೊಂಡಿದ್ವಾ?
ಮುಂದುವರಿದು, ‘ನೀವು ಕೆಲಸ ಮಾಡಿ ಎಂದು ನಿಮ್ಮ ಮನೆಗೆ ಬಂದು ನಾವು ಕೇಳಿಕೊಂಡಿದ್ವಾ? ನೀವು ಹೇಳುವುದನ್ನೆಲ್ಲಾ ಮಾಡುವುದಕ್ಕೆ ಕಾನೂನಿನಲ್ಲಿ ಹಲವಾರು ತೊಡಕುಗಳಿವೆ’ ಎಂದು ಖಡಕ್ಕಾಗಿ ಹೇಳಿ ಕಾರು ಹತ್ತಿದರು. ಸಚಿವರ ಕಾರು ಹೊರಡುತ್ತಿದ್ದಂತೆ ಅತಿಥಿ ಉಪನ್ಯಾಸಕರು ಸಚಿವರಿಗೆ ಹಾಗು ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ ಪ್ರತಿಭಟನಾ ಸ್ಥಳಕ್ಕೆ ಹಿಂತಿರುಗಿದರು.
ಶಿಕ್ಷಣ ಸಚಿವರ ಈ ನಡೆಗೆ ಅತಿಥಿ ಉಪನ್ಯಾಸಕರ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ‘ ಇಂತಹ ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಗೆ ಬೇಕೇ? ಇಂತಹವರಿಂದ ಶಿಕ್ಷಕರ ಸಮಸ್ಯೆಗಳು ಇತ್ಯರ್ಥವಾಗುತ್ತವೆಯೇ ಎಂದು’ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.