Appointment of Guest Lecturers: 14 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ !
*ಹೊರಟ್ಟಿ, ಡಾ. ಅಶ್ವತ್ಥ ನೇತೃತ್ವದ ಸಭೆಯಲ್ಲಿ ಸೂಚನೆ
*ಉಪನ್ಯಾಸಕರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ
*ಅಕ್ರಮ ನೇಮಕ: ಪ್ರಾಧ್ಯಾಪಕರ ವಜಾಕ್ಕೆ ಶಿಫಾರಸು
*ವಿವಿಧ ವಿವಿಗಳ 67 ಮಂದಿ ನೇಮಕಾತಿ ಮೇಲೆ ತೂಗುಕತ್ತಿ
ಸುವರ್ಣಸೌಧ (ಡಿ. 15): ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಪದವಿ ಕಾಲೇಜುಗಳ 14 ಸಾವಿರ ಅತಿಥಿ ಉಪನ್ಯಾಸಕರ (Guest Lecturers) ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಚಿಸಿರುವ ಉನ್ನತ ಮಟ್ಟದ ಸಮಿತಿಗೆ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (C. N. Ashwath Narayan) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ.
ಸಮಿತಿ ನೀಡಿದ ವರದಿ ಆಧರಿಸಿ ಅತಿಥಿ ಉಪನ್ಯಾಸಕರ ಬೇಡಿಕೆ ಹಾಗೂ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಕಲ್ಪಿಸಲು ಸೂಕ ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ, ಧಾರವಾಡ ಸೇರಿದಂತೆ ವಿವಿಧೆಡೆ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಿರತರಾಗಿರುವ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.
ಸಮಿತಿಯ ವರದಿ ಬಂದ ನಂತರ ಅತಿಥಿ ಉಪನ್ಯಾಸಕರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಪಶ್ಚಿಮ ಬಂಗಾಳ (West Bengal) ಮತ್ತು ಇತರ ರಾಜ್ಯಗಳಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಲಾಗಿದೆ ಎನ್ನುವುದನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ರಾಜ್ಯದಲ್ಲೂ ನ್ಯಾಯ ಒದಗಿಸಲಾಗುವುದು, ಅತಿಥಿ ಉಪನ್ಯಾಸಕರಿಗೆ ನೇಮಕಾತಿ (Recruitment) ಸಂದರ್ಭದಲ್ಲಿ ಆದ್ಯತೆ ಕೊಡಬೇಕೆ ಅಥವಾ ಇವರಿಗೆ ಒಂದು ಗೌರವಾರ್ಹ ವೇತನವನ್ನು ನಿಗದಿಪಡಿಸಿ ಸೇವೆಯಲ್ಲಿ ಮುಂದುವರೆಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದರು. ಸಭೆಯಲ್ಲಿ ಪರಿಷತ್ ಸದಸ್ಯರುಗಳಾದ ಅರುಣ ಶಹಾಪುರ, ವೈ.ಎ.ನಾರಾಯಣಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಭೋಜೇಗೌಡ, ಆಯನೂರು ಮಂಜುನಾಥ್ ಮತ್ತಿತರರು ಇದ್ದರು.
ಅಕ್ರಮ ನೇಮಕ: ಪ್ರಾಧ್ಯಾಪಕರ ವಜಾಕ್ಕೆ ಶಿಫಾರಸು
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ 67 ಸಹಾಯಕ ಮತ್ತು ಸಹ ಪ್ರಾಧ್ಯಾಪಕರ (Assistant Professor) ನೇಮಕಾತಿ, ಪದೋನ್ನತಿ ಹಾಗೂ ವೇತನ (Pay scale) ನಿಗದಿಯಲ್ಲಿ ಯುಜಿಸಿ ನಿಯಮಾವಳಿ ಹಾಗೂ ಸರ್ಕಾರದ ಆದೇಶ ಉಲ್ಲಂಘಿಸಿ ನೇಮಕಗೊಂಡಿರುವವರನ್ನು ಕೂಡಲೇ ವಜಾಗೊಳಿಸಿ ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬೆಂಗಳೂರು ವಿವಿ, ಮೈಸೂರು ವಿವಿ, ಕರ್ನಾಟಕ ರಾಜ್ಯ ಮುಕ್ತ ವಿವಿ, ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ವಿವಿಗಳು ಹಾಗೂ ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜು, ಮೈಸೂರಿನ ಬಸುದೇವ ಸೋಮಾನಿ ಪದವಿ ಕಾಲೇಜು, ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ಒಟ್ಟು 67 ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಿಯಮಗಳ ಪಾಲನೆಯಾಗಿಲ್ಲ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಲು ಸರ್ಕಾರ ಚಿಸಿದ್ದ ಶಾಸಕ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿ ಮಂಗಳವಾರ ಸದನದಲ್ಲಿ ಮಧ್ಯಂತರ ವರದಿ ಮಂಡಿಸಿತು.
ನಿಯಮ, ಸರ್ಕಾರದ ಆದೇಶ ಉಲ್ಲಂಘಿಸಿ 67 ಪ್ರಾಧ್ಯಾಪಕರ ನೇಮಕಾತಿ, ಪದೋನ್ನತಿ ಮತ್ತು ವೇತನ ನಿಗದಿ ಮಾಡಿದ ವಿವಿಗಳ ಕುಲಪತಿಗಳು, ಕುಲಸಚಿವರು, ಅಧಿಕಾರಿಗಳು ಹಾಗೂ ಇದಕ್ಕೆ ಸಹಕಾರ ನೀಡಿರುವ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದಿದೆ.ಅಲ್ಲದೆ, ಕೆಲ ಪ್ರಕರಣಗಳಲ್ಲಿ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡುವಂತೆಯು ಸಮಿತಿ ಶಿಫಾರಸು ಮಾಡಿದೆ.
ಇದನ್ನೂ ಓದಿ:
1) Belagavi Assembly Session: ಪೊಲೀಸ್ ಕ್ವಾರ್ಟರ್ಸ್ ಕೋಳಿ ಗೂಡಿನಂತಿವೆ: ಸ್ಪೀಕರ್ ಕಾಗೇರಿ ಕಿಡಿ
2) Leader of the Opposition: ಕರ್ನಾಟಕದಲ್ಲಿ ವಿಪಕ್ಷ ನಾಯಕನಿಗೆ ಯಾವ ಗೌರವವೂ ಉಳಿದಿಲ್ಲ: ಸಿದ್ದರಾಮಯ್ಯ
3) Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ