Dharwad: ಶಾಲೆಯಿಂದ ಹೊರಗುಳಿದ 688 ಮಕ್ಕಳು!

ಸಮಗ್ರ ಶಿಕ್ಷಣ ಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 688 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಕುಂದಗೋಳ ತಾಲೂಕಿನಲ್ಲಿಯೇ ಅತಿ ಹೆಚ್ಚು (230) ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

688 children out of school in hubballi dharwad education rav

ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ (ಫೆ.8) : ಸಮಗ್ರ ಶಿಕ್ಷಣ ಕರ್ನಾಟಕ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 688 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಕುಂದಗೋಳ ತಾಲೂಕಿನಲ್ಲಿಯೇ ಅತಿ ಹೆಚ್ಚು (230) ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.

2022 ಡಿಸೆಂಬರ್‌ 28ರಿಂದ 2023ರ ಜ. 5ರ ವರೆಗೆ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ದೊರೆತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸುವಂತೆ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಎಲ್ಲ ಜಿಲ್ಲೆಗಳಿಗೆ ಸೂಚಿಸಿದ್ದರು. ಅದರಂತೆ ರಾಜ್ಯಾದ್ಯಂತ ಏಕಕಾಲದಲ್ಲಿ ಸಮೀಕ್ಷೆ ನಡೆದಿತ್ತು. ಧಾರವಾಡ ಜಿಲ್ಲಾಮಟ್ಟದಲ್ಲಿ ಸಿಆರ್‌ಪಿ, ಬಿಆರ್‌ಸಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಈ ಸಮೀಕ್ಷೆ ನಡೆಸಿದ್ದಾರೆ.

ಕೊಪ್ಪಳ: ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

ಬೇರೆ ಶಾಲೆಗೆ ಸೇರದ ಮಕ್ಕಳು:

ಕೊರೋನಾ ಬಳಿಕ ವರ್ಗಾವಣೆ ಪ್ರಮಾಣ ಪತ್ರ ಪಡೆದ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸಿಲ್ಲ ಎನ್ನುವುದು ಸಮೀಕ್ಷೆಯಲ್ಲಿ ದೃಢವಾಗಿದೆ. ಜಿಲ್ಲೆಯಲ್ಲಿ 688ರಲ್ಲಿ 661 ಮಕ್ಕಳು ಆರ್ಥಿಕ, ಸಾಮಾಜಿಕ ಸೇರಿದಂತೆ ವಿವಿಧ ಕಾರಣಗಳಿಂದ ಶಾಲೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಉಳಿದ 27 ವಿದ್ಯಾರ್ಥಿಗಳು ಯಾವುದೇ ಶಾಲೆಗೆ ದಾಖಲಾಗಿಲ್ಲ. ಇದರಲ್ಲಿ 21 ಮಕ್ಕಳು ಹುಬ್ಬಳ್ಳಿ ನಗರದವರೇ ಇದ್ದಾರೆ. ಇವೆರಲ್ಲರೂ 6ರಿಂದ 14 ವರ್ಷದೊಳಗಿನವರಾಗಿದ್ದಾರೆ.

ಗಂಡು ಮಕ್ಕಳೇ ಹೆಚ್ಚು:

6ರಿಂದ 14 ವರ್ಷ 426, 15ರಿಂದ 19 ವರ್ಷದೊಳಗಿನ 262 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದರಲ್ಲಿ ಗಂಡು ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. 6ರಿಂದ 14 ವರ್ಷ 270, 15ರಿಂದ 19 ವರ್ಷದೊಳಗಿನ 178 ಗಂಡು ಮಕ್ಕಳು, 6ರಿಂದ 14 ವರ್ಷ 156, 15ರಿಂದ 19 ವರ್ಷದೊಳಗಿನ 84 ಹೆಣ್ಣು ಮಕ್ಕಳಿದ್ದಾರೆ.

ಆರು ತಿಂಗಳ ಕಾಲಾವಕಾಶ:

ಮುಂದಿನ 6 ತಿಂಗಳಲ್ಲಿ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು. ಈ ಕುರಿತು ಸಿಆರ್‌ಪಿ ಮತ್ತು ಬಿಆರ್‌ಸಿ, ತಾಲೂಕು ನೋಡಲ್‌ ಅಧಿಕಾರಿ, ಶಿಕ್ಷಣ ಸಂಯೋಜಕರಿಗೆ ಶೀಘ್ರದಲ್ಲಿ ತರಬೇತಿ ನೀಡಲಾಗುವುದು ಎನ್ನುತ್ತಾರೆ ಸಮಗ್ರ ಶಿಕ್ಷಣ ಕರ್ನಾಟಕದ ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಪ್ರಕಾಶ ಭೂತಾಳಿ. ಕುಂದಗೋಳ, ಧಾರವಾಡ ಗ್ರಾಮೀಣ, ನವಲಗುಂದ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ದಾಖಲಾಗಿದೆ.

Education: ಖಾಸಗಿ ಶಾಲೆಗಳಿಂದ ಪಾಲಕರಿಗೆ ಶುಲ್ಕದ ಬರೆ!

ಸದ್ಯ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿದ್ದು ಅವರನ್ನು ಮುಖ್ಯವಾಹಿನಿಗೆ ತರಲು ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಮತ್ತು ಮುಖ್ಯೋಪಾಧ್ಯಾಯರಿಗೆ ಸೂಚಿಸಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದೊಳಗೆ ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮಕೈಗೊಳ್ಳಲಾಗುವುದು.

ಎಸ್‌.ಎಸ್‌. ಕೆಳದಿಮಠ, ಡಿಡಿಪಿಐ

ಸಮೀಕ್ಷೆ ಮೂಲಕ ಜಿಲ್ಲೆಯಲ್ಲಿ ಶಾಲೆಯಿಂದ ದೂರವಾದ 688 ಮಕ್ಕಳನ್ನು ಗುರುತಿಸಲಾಗಿದೆ. ಅಂತಹ ಮಕ್ಕಳ ಮನೆ-ಮನೆಗೆ ಹಂತ-ಹಂತವಾಗಿ ಭೇಟಿ ನೀಡಿ ಪಾಲಕರ ಮನವೊಲಿಸಿ ಮಕ್ಕಳನ್ನು ಮುಂದಿನ ವರ್ಷದಿಂದ ಶಾಲೆಗೆ ದಾಖಲಿಸಲಾಗುವುದು. ವಯೋಮಿತಿ ಆಧಾರದಂತೆ ಮಕ್ಕಳಿಗೆ ಪ್ರವೇಶಾತಿ ನೀಡಲಾಗುವುದು.

ಜಿ.ಎನ್‌. ಮಠಪತಿ, ಸಮಗ್ರ ಶಿಕ್ಷಣ ಕರ್ನಾಟಕದ ಉಪಯೋಜನಾಧಿಕಾರಿ

ತಾಲೂಕು ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ

  • ಧಾರವಾಡ ಗ್ರಾಮೀಣ 182
  • ಧಾರವಾಡ ನಗರ 36
  • ಹುಬ್ಬಳ್ಳಿ ಗ್ರಾಮೀಣ 45
  • ಹುಬ್ಬಳ್ಳಿ ನಗರ 31
  • ಕಲಘಟಗಿ 25
  • ಕುಂದಗೋಳ 230
  • ನವಲಗುಂದ 139
  • ಒಟ್ಟು 688
Latest Videos
Follow Us:
Download App:
  • android
  • ios