ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯ ಆರಂಭ: ಶಿಕ್ಷಣ ಇಲಾಖೆ ಆದೇಶ
ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳ ಮಾಹಿತಿಯನ್ನು ತುರ್ತಾಗಿ ಪಟ್ಟಿಮಾಡಿ ಕಳುಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬೆಂಗಳೂರು (ಸೆ.08): ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳ ಮಾಹಿತಿಯನ್ನು ತುರ್ತಾಗಿ ಪಟ್ಟಿಮಾಡಿ ಕಳುಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಸಂಬಂಧ ಆಗಸ್ಟ್ 24 ಮತ್ತು 25ರಂದು ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲೇ ಸ್ಪಷ್ಟಸೂಚನೆ ನೀಡಿದ್ದರೂ ಇದುವರೆಗೆ ಬೆಂಗಳೂರು ನಗರ ಸೇರಿದಂತೆ ಕೇವಲ ನಾಲ್ಕು ಜಿಲ್ಲೆಗಳ ಅಧಿಕಾರಿಗಳು ಮಾತ್ರ ಶಾಲೆಗಳ ಪಟ್ಟಿಕಳುಹಿಸಿದ್ದು ಉಳಿದ ಜಿಲ್ಲೆಗಳಿಂದ ಯಾವುದೇ ಮಾಹಿತಿ ಬಂದಿಲ್ಲ. ಹಾಗಾಗಿ ಇಲಾಖಾ ಆಯುಕ್ತ ಆರ್.ವಿಶಾಲ್ ಅವರು ಬುಧವಾರ ಮತ್ತೊಮ್ಮೆ ಅಧಿಕಾರಿಗಳಿಗೆ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಮಾಹಿತಿ ಕಳುಹಿಸುವುದನ್ನು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.
ಶಿಕ್ಷಕರಿಗೆ ‘Google Guru’ ಸ್ಪರ್ಧಿ: ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಯಾವ ಶಾಲೆಗಳು ಅನಧಿಕೃತ?: ಕರ್ನಾಟಕ ಶಿಕ್ಷಣ ಕಾಯ್ದೆ 1983ರಡಿ ನೋಂದಣಿ ಪಡೆಯದೇ ನಡೆಸುತ್ತಿರುವ ಶಾಲೆಗಳು, ತಾವು ಪಡೆದಿದ್ದ ಮಾನ್ಯತೆಯನ್ನು ನಿಯಮಾನುಸಾರ ನವೀಕರಿಸಿಕೊಳ್ಳದೆ ಇರುವ ಶಾಲೆಗಳು, ಇಲಾಖೆ ಪೂರ್ವಾನುಮತಿ ಪಡೆಯದೆ ಸ್ಥಳಾಂತರ ಹಾಗೂ ಬೇರೆಯವರಿಗೆ ಹಸ್ತಾಂತರ ಮಾಡಿರುವ ಶಾಲೆಗಳು (ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿರುವ ಶಾಲೆಗಳನ್ನು ಹೊರತುಪಡಿಸಿ), ಅನುಮತಿ ಇಲ್ಲದೆ ಉಪಶಾಲೆ ನಡೆಸುತ್ತಿರುವ, ಪ್ರತಿ ತರಗತಿಗೆ ಅನುಮತಿಗಿಂತ ಹೆಚ್ಚು ವಿಭಾಗಗಳನ್ನು ನಡೆಸುತ್ತಿರುವ, ಅನುಮತಿ ಪಡೆದ ಮಾಧ್ಯಮ, ಪಠ್ಯಕ್ರಮದ ಬದಲು ಬೇರೆ ಮಾಧ್ಯಮ, ಪಠ್ಯಕ್ರಮ ಬೋಧಿಸುತ್ತಿರುವುದು ಸೇರಿದಂತೆ ಅನಧಿಕೃತ ಶಾಲೆಗಳನ್ನು ಗುರುತಿಸಲು ಅನೇಕ ಮಾನದಂಡಗಳನ್ನು ಇಲಾಖೆ ರೂಪಿಸಿ ಪ್ರಕಟಿಸಿದೆ. ಅದರ ಆಧಾರದಲ್ಲಿ ಶಾಲೆಗಳ ಪಟ್ಟಿಮಾಡಿ ಮಾಹಿತಿ ಕಳುಹಿಸಲು ಸೂಚಿಸಲಾಗಿದೆ.
ಸಾಕ್ಷ್ಯ ನೀಡಲು ಕ್ಯಾಮ್ಸ್‌ಗೆ ಸೂಚನೆ: ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲಾ ಸಂಘಟನೆಗಳು ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಸಂಬಂಧ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕ್ಯಾಮ್ಸ್ ಸಂಘಟನೆಗೆ ಕೋರಿದ್ದಾರೆ. ಆರೋಪ ಮಾಡಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಅವರಿಗೆ ತಮ್ಮ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸೆ.9ರಂದು ತಮ್ಮ ಕಚೇರಿಗೆ ಹಾಜರಾಗಿ ವಿವರಣೆ ನೀಡುವಂತೆ ಆಯುಕ್ತ ಡಾ.ವಿಶಾಲ್ ಪತ್ರ ಬರೆದಿದ್ದಾರೆ.
ಇಲಾಖೆಗೆ ತಾವು ನೀಡಿರುವ ಎಲ್ಲ ಮನವಿಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರೂ ಇಲಾಖೆಯ ಹಾಗೂ ಸಚಿವಾಲಯದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದೀರಿ. ಈ ಆರೋಪವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸೆ.9ರ ಬೆಳಗ್ಗೆ 11 ಗಂಟೆಗೆ ತಮಗೆ ಅವಕಾಶ ನೀಡಿದ್ದು ಹಾಜರಾಗಿ ದಾಖಲೆ ಸಲ್ಲಿಸಿ ಎಂದು ಸೂಚಿಸಿದ್ದಾರೆ. ಇಲಾಖೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮತ್ತೊಂದು ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಅಧ್ಯಕ್ಷರಿಗೂ ಇದೇ ರೀತಿ ಸೂಚನೆ ನೀಡಿ ಈಗಾಗಲೇ ಆಯುಕ್ತರು ದಾಖಲೆಗಳನ್ನು ಪಡೆದಿದ್ದರು.
ಪತ್ತೆ ಕಾರ್ಯಕ್ಕೆ ಕ್ಯಾಮ್ಸ್ ಸ್ವಾಗತ: ರಾಜ್ಯದಲ್ಲಿ ನಡೆಯುತ್ತಿರುವ ಅನಧಿಕೃತ ಶಾಲೆಗಳನ್ನು ಪತ್ತೆ ಮಾಡಿ ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ ಕ್ರಮವನ್ನು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಸ್ವಾಗತಿಸಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ‘ಇಲಾಖಾ ಕ್ರಮ ಆರೋಗ್ಯಕರ ಬೆಳವಣಿಗೆಯಾಗಿದೆ. ಇದರ ಜೊತೆಗೆ ಕೇಂದ್ರ ಪಠ್ಯಕ್ರಮದ ಶಾಲೆಗಳ ನಿಯಂತ್ರಣ ರಾಜ್ಯ ಶಿಕ್ಷಣ ಇಲಾಖೆಯಡಿ ಬರುತ್ತದಾ? ಬರುವುದಾದರೆ ಯಾವ ಕಾಯ್ದೆ, ನಿಯಮದಡಿ ನಿಯಂತ್ರಣ ಮಾಡಲು ಸಾಧ್ಯವಿದೆ ಎಂಬ ಬಗ್ಗೆ ಸ್ಪಷ್ಟಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ರಾಜಸ್ಥಾನದ ತನಿಷ್ಕಾ ದೇಶಕ್ಕೆ ಮೊದಲ ರ‍್ಯಾಂಕ್, ಕರ್ನಾಟಕದ ಹೃಷಿಕೇಶ್‌ಗೆ 3ನೇ ಸ್ಥಾನ
ಏಕೆಂದರೆ ಈ ಸಂಬಂಧ ಹೈಕೋರ್ಚ್‌ನಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ಕೇಂದ್ರ ಪಠ್ಯಕ್ರಮದ ಶಾಲೆಗಳ ಶುಲ್ಕ ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳಿಗೆ ಕಾಯ್ದೆಗೆ ತಿದ್ದುಪಡಿ ತಂದು ಆ ಎರಡು ವಿಷಯಗಳಲ್ಲಿ ಮಾತ್ರ ನಿಯಂತ್ರಿಸುವ ನಿಟ್ಟಿನಲ್ಲಿ ನಿಯಮಗಳನ್ನು ತಂದಿತ್ತು. ಇದನ್ನು ಹೊರತುಪಡಿಸಿ ಬೇರೆಲ್ಲಾ ಅಂಶಗಳಲ್ಲೂ ನಿಯಂತ್ರಿಸುವ ಬಗ್ಗೆ ಅಧಿಕೃತ ಅಧಿಸೂಚನೆ ಮಾಡಲಾಗಿದೆಯಾ ಎಂಬ ಬಗ್ಗೆ ಸ್ಪಷ್ಟತೆಯ ಕೊರತೆ ಇದೆ. ಹಾಗಾಗಿ ಈ ಬಗ್ಗೆ ಮಾಹಿತಿ ಪ್ರಕಟಿಸಬೇಕೆಂದು ಅವರು ಕೋರಿದ್ದಾರೆ.