ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಮಕ್ಕಳೇ ಆಲ್ ದಿ ಬೆಸ್ಟ್
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಇಂದು ಗುರುವಾರದಿಂದ (ಮಾ.9) ಆರಂಭವಾಗುತ್ತಿದ್ದು ರಾಜ್ಯಾದ್ಯಂತ 1,109 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ 7.27 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ.
ಬೆಂಗಳೂರು (ಮಾ.09): ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಇಂದು ಗುರುವಾರದಿಂದ (ಮಾ.9) ಆರಂಭವಾಗುತ್ತಿದ್ದು ರಾಜ್ಯಾದ್ಯಂತ 1,109 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಈ ಬಾರಿ 7.27 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆಯಲಿದೆ.
ಮಾ.29ರವರೆಗೆ ನಿತ್ಯ ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗಳು ನಡೆಯಲಿದ್ದು. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕಣ್ಗಾವಲು, ಮೊಬೈಲ್ ನಿಷೇಧ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಮೇಲ್ವಿಚಾರಕರು ಮಾತ್ರ ಬೇಸಿಕ್ ಹ್ಯಾಂಡ್ ಸೆಟ್ ಬಳಸಬಹುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಸಂಬಂಧ ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು, ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮಗಳು ನಡೆಯದಂತೆ ನಿಗಾ ವಹಿಸಲು ಸಿಸಿ ಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿ ಪಕ್ಷದಲ್ಲಿ ತಮಗೆ ಗೌರವ ಸಿಗುತ್ತಿಲ್ಲವೆಂದು ಸಚಿವ ಸೋಮಣ್ಣ ಮುನಿಸು: ಕಾಂಗ್ರೆಸ್‌ನತ್ತ ವಾಲಿದ ಗುಸುಗುಸು
ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು ಬಿಗಿ ಪೊಲೀಸ್ ಬಂದೋಬಸ್‌್ತ ಇರುತ್ತದೆ. ರಾಜ್ಯದ 5,716 ಪಿಯು ಕಾಲೇಜುಗಳಿಂದ ಒಟ್ಟು 7,26,195 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೋಂದಾಯಿಸಿದ್ದು, ಈ ಪೈಕಿ 3,63,698 ಬಾಲಕರು ಮತ್ತು 3,62.497 ಬಾಲಕಿಯರು. ಇದರಲ್ಲಿ 6.29 ಲಕ್ಷ ವಿದ್ಯಾರ್ಥಿಗಳು ಹೊಸಬರು (ಫ್ರೆಷರ್ಸ್) , 25,847 ಖಾಸಗಿ ಮತ್ತು 70,589 ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಕಲಾ ನಿಕಾಯದಿಂದ 2,34,815, ವಾಣಿಜ್ಯ- 2,47,260 ಮತ್ತು ವಿಜ್ಞಾನದಿಂದ 2,44,120 ವಿದ್ಯಾರ್ಥಿಗಳಾಗಿದ್ದಾರೆ. ಪರೀಕ್ಷಾ ಕಾರ್ಯಕ್ಕೆ 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲ್ಲೂಕು ಜಾಗೃತ ದಳ ಮತ್ತು 2,373 ವಿಶೇಷ ಜಾಗೃತ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಪರೀಕ್ಷೆ ನಡೆಸಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಿಯ ಮಂಡಳಿಯ (ಕೆಎಸ್‌ಇಎಬಿ) ಕೇಂದ್ರ ಕಚೇರಿಯಿಂದ ಹಿಡಿದು ಪರೀಕ್ಷಾ ಕೇಂದ್ರಗಳ ವರೆಗೂ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ ಕೇಂದ್ರಗಳಲ್ಲಿ ಎಲ್ಲೆಡೆ 24/7 ಸಿಸಿಟಿವಿ ನಿಗಾ ಹಾಗೂ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಟ್ಯೂಷನ್, ಕೋಚಿಂಗ್ ಕೇಂದ್ರಗಳು, ಝೆರಾಕ್ಸ್ ಕೇಂದ್ರಗಳು, ಸೈಬರ್ ಕೇಂದ್ರ, ಕಂಪ್ಯೂಟರ್ ಕೇಂದ್ರ ಹಾಗೂ ಗೇಮ್ಸ್ ಕೇಂದ್ರಗಳ ಮೇಲೆ ಗಮನ ಹರಿಸಲಾಗಿದೆ ಎಂದು ತಿಳಿಸಿದರು.
ಹಿಜಾಬ್ ನಿಷೇಧ: ಕಳೆದ ವರ್ಷ ಜಾರಿ ಮಾಡಿರುವ ಸಮವಸ್ತ್ರ ನೀತಿಯ ಅನ್ವಯ ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಸಮವಸ್ತ್ರ ನಿಯಮ ಪಾಲನೆ ಕಡ್ಡಾಯವಾಗಿದೆ. ಸಮವಸ್ತ್ರ ನಿಯಮ ಈಗಲೂ ಅನ್ವಯವಾಗಲಿದೆ. ಕಳೆದ ವರ್ಷದ ನಿಯಮವೇ ಈ ಬಾರಿ ಜಾರಿಯಲ್ಲಿರಲಿದೆ. ಯಾವುದೇ ಮಕ್ಕಳು ಪರೀಕ್ಷೆಯಿಂದ ವಂಚಿತಾಗುವುದು ಬೇಡ. ಕಳೆದ ವರ್ಷ ಆರು ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದಾಗಿ ಪರೀಕ್ಷೆ ಬರೆದಿಲ್ಲ. ಅವರು ಈ ಬಾರಿಯಾದರೂ ಪರೀಕ್ಷೆ ಬರೆಯುವಂತೆ ಮನವಿ ಮಾಡಿಕೊಳ್ಳುತ್ತೇನೆ. ಸಮವಸ್ತ್ರದ ನಿಯಮ ಪಾಲಿಸಿ ಪರೀಕ್ಷೆಗೆ ಹಾಜರಾಗಬೇಕು ಎಂದರು.
ವಿದ್ಯಾರ್ಥಿಗಳೇ ಗಮನಿಸಿ...
* ಪರೀಕ್ಷೆ ಆರಂಭಕ್ಕೂ ಒಂದು ತಾಸು ಮೊದಲೇ ಕೇಂದ್ರದಲ್ಲಿರಿ
* ಹೊರಡುವಾಗ ಹಾಲ್ ಟಿಕೆಟ್, ಪೆನ್ನು ಮರೆಯದೆ ಕೊಂಡೊಯ್ಯಿರಿ
* ಮೊಬೈಲ್, ವಾಚ್, ಕ್ಯಾಲ್ಯುಲೇಟರ್ ಸೇರಿ ಎಲೆಕ್ಟ್ರಾನಿಕ್ಸ್ ಉಪಕರಣ ನಿಷೇಧ
* ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷ ಕಾಲಾವಕಾಶವಿರುತ್ತದೆ ಬಳಸಿಕೊಳ್ಳಿ
* ಈ ಬಾರಿ 1 ಅಂಕದ ಬಹು ಆಯ್ಕೆ ಮಾದರಿ ಪ್ರಶ್ನೆಗಳು ಹೆಚ್ಚಿರುತ್ತವೆ. ಯೋಚಿಸಿ ಉತ್ತರಿಸಿ
* ಅವುಗಳಿಗೆ ನಿಧಾನವಾಗಿ ಯೋಜಿಸಿ ಸರಿಯಾದ ಉತ್ತರ ಗುರುತಿಸಿ
* ಉಳಿದ ಪ್ರಶ್ನೆಗಳಲ್ಲಿ ಮೊದಲು ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ
* ಉಳಿದ ಪ್ರಶ್ನೆಗಳಿಗೆ ಗೊತ್ತಿರುವಷ್ಟಾದರೂ ಉತ್ತರಿಸಿ
ಕುಮಾರಸ್ವಾಮಿ ಸಿಎಂ ಆಗ್ತಾರೆ ಎಂಬ ಇಬ್ರಾಹಿಂ ಹೇಳಿಕೆ ಅಹಂಕಾರದ ಮಾತಲ್ಲ: ಎಚ್‌ಡಿಕೆ
ಪಿಯು ಫಲಿತಾಂಶ ಉತ್ತಮಗೊಳಿಸಲು ಈ ಬಾರಿ ಬಹು ಆಯ್ಕೆ ಮಾದರಿ ಪ್ರಶ್ನೆಗಳ ಹೆಚ್ಚಳ ಮಾಡಲಾಗಿದೆ. ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಬಂದರೂ ಪರಿಗಣಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಗೊಂದಲ, ಭಯ ಪಡದೆ ನಿರಾಯಾಸವಾಗಿ ಪರೀಕ್ಷೆ ಬರೆಯಬೇಕು.
- ಬಿ.ಸಿ.ನಾಗೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ