Asianet Suvarna News Asianet Suvarna News

ಬಿಜೆಪಿ ಪಕ್ಷದಲ್ಲಿ ತಮಗೆ ಗೌರವ ಸಿಗುತ್ತಿಲ್ಲವೆಂದು ಸಚಿವ ಸೋಮಣ್ಣ ಮುನಿಸು: ಕಾಂಗ್ರೆಸ್‌ನತ್ತ ವಾಲಿದ ಗುಸುಗುಸು

ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಪಕ್ಷದಲ್ಲಿನ ವಿದ್ಯಮಾನಗಳ ಬಗ್ಗೆ ಮುನಿಸಿಕೊಂಡು ಒಂದು ವಾರ ಕಳೆದಿದ್ದು, ಪಕ್ಷದ ನಾಯಕರು ಅಸಮಾಧಾನ ಶಮನಗೊಳಿಸುವ ಪ್ರಯತ್ನ ಮುಂದುವರೆಸಿದ್ದಾರೆ.

Minister V Somanna Sneers At The BJP Party gvd
Author
First Published Mar 9, 2023, 6:22 AM IST | Last Updated Mar 9, 2023, 6:22 AM IST

ಬೆಂಗಳೂರು (ಮಾ.09): ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಪಕ್ಷದಲ್ಲಿನ ವಿದ್ಯಮಾನಗಳ ಬಗ್ಗೆ ಮುನಿಸಿಕೊಂಡು ಒಂದು ವಾರ ಕಳೆದಿದ್ದು, ಪಕ್ಷದ ನಾಯಕರು ಅಸಮಾಧಾನ ಶಮನಗೊಳಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಪಕ್ಷದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಇದೇ ತಿಂಗಳ 1ರಂದು ತಾವು ಉಸ್ತುವಾರಿ ಸಚಿವರಾಗಿರುವ ಚಾಮರಾಜನಗರದಲ್ಲಿ ಆರಂಭವಾದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೇತೃತ್ವದ ತಂಡದ ವಿಜಯ ಸಂಕಲ್ಪ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೂ ಅವರು ಗೈರಾಗಿದ್ದರು. 

ಸಮಾರಂಭದ ಉದ್ಘಾಟನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸಿದ್ದರು. ಮೇಲಾಗಿ ಯಾತ್ರೆಯ ತಂಡದಲ್ಲಿ ಸೋಮಣ್ಣ ಅವರೂ ಇದ್ದರು. ಆದರೂ ಅವರು ಗೈರು ಹಾಜರಾಗುವ ಮೂಲಕ ತಮ್ಮ ಮುನಿಸು ಹೊರಹಾಕಿದ್ದರು. ಇದರ ಬೆನ್ನಲ್ಲೇ ಸೋಮಣ್ಣ ಅವರು ಬಿಜೆಪಿಯ ಬಗ್ಗೆ ಮನನೊಂದು ಕಾಂಗ್ರೆಸ್‌ನತ್ತ ದೃಷ್ಟಿಹಾಯಿಸಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ದಟ್ಟವಾಗಿ ಹಬ್ಬಿದೆ. ಇದನ್ನು ಸ್ವತಃ ಸೋಮಣ್ಣ ಅವರು ನಿರಾಕರಿಸಿದ್ದರೂ ಅನುಮಾನ ಮಾತ್ರ ನಿವಾರಣೆಯಾಗಿಲ್ಲ. ಅವರ ತಂಡದ ವಿಜಯ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ಮುಂದುವರೆದಿದ್ದರೂ ಅತ್ತ ಸುಳಿಯದೆ ಅಂತರ ಕಾಪಾಡಿಕೊಂಡಿದ್ದಾರೆ.

ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ

ಪ್ರಚಂಡ ಸಂಘಟನಕಾರರಾಗಿರುವ, ವೀರಶೈವ ಲಿಂಗಾಯತ ಸಮುದಾಯದಲ್ಲಿ ಪ್ರಬಲ ಹಿಡಿತ ಹೊಂದಿರುವ ಸೋಮಣ್ಣ ಅವರನ್ನು ಬಿಟ್ಟುಕೊಡಲು ಒಪ್ಪದ ಬಿಜೆಪಿ ನಾಯಕರು ಮನವೊಲಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಆದರೆ, ಅಷ್ಟುಸುಲಭವಾಗಿ ಸೋಮಣ್ಣ ಸಮಾಧಾನಗೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಿಲ್ಲ.

ಮುನಿಸಿಗೆ ಕಾರಣ ಏನು?: ಚುನಾವಣಾ ರಣತಂತ್ರ ರೂಪಿಸುಲ್ಲಿ ನಿಪುಣರಾದ ಸೋಮಣ್ಣ ಅವರು ಕಳೆದ ಹಲವು ವರ್ಷಗಳಿಂದ ನಡೆದ ಹಲವು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರಣರಾಗಿದ್ದರು. ಪಕ್ಷ ಗೆಲ್ಲುವುದು ಕಷ್ಟಎಂಬಂಥ ವಾತಾವರಣದಲ್ಲಿಯೂ ಅಲ್ಲಿ ಗೆಲುವು ತಂದು ಕೊಡುವ ಮೂಲಕ ಪಕ್ಷದ ವರಿಷ್ಠರ ಗಮನ ಸೆಳೆದಿದ್ದರು. ಜತೆಗೆ ಬಿಜೆಪಿಗೆ ಬಂದ ನಂತರ ನಡೆದ ಮೂರು ಲೋಕಸಭಾ ಚುನಾವಣೆಯಲ್ಲಿ, ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ತಂದುಕೊಡುವಲ್ಲಿ ಶ್ರಮಿಸಿದರು. ಆದರೆ, ಅದಕ್ಕೆ ಪ್ರತಿಯಾಗಿ ತಮಗೆ ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಸಿಗಬೇಕಾದಷ್ಟುಮನ್ನಣೆ ಸಿಗಲಿಲ್ಲ ಎಂಬ ನೋವನ್ನು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಸಚಿವ ಸ್ಥಾನ ನೀಡಿದರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಖಾತೆಯನ್ನು ನೀಡಲಿಲ್ಲ. ಹೆಚ್ಚು ಕೆಲಸ ಮಾಡಲು ಅವಕಾಶವಿಲ್ಲದ ವಸತಿ ಖಾತೆಯನ್ನೇ ನೀಡಿದರು. ಆ ಇಲಾಖೆಯಲ್ಲಿಯೂ ಹೊಸ ಯೋಜನೆಗಳನ್ನು ಮಾಡುವುದಕ್ಕೆ ಬೇಕಾದಷ್ಟುಅನುದಾನವನ್ನೂ ನೀಡಲಿಲ್ಲ. ಪಕ್ಷದ ಸಂಘಟನೆಯಲ್ಲಿ ಅಥವಾ ಚುನಾವಣೆಯಲ್ಲಿ ಯಾವುದೇ ಹೆಚ್ಚು ಕೆಲಸ ಮಾಡದವರಿಗೆ ಪ್ರಮುಖ ಖಾತೆಗಳನ್ನು ನೀಡಿ ಹೇರಳ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಂಘಟನೆ ಬಲಗೊಳಿಸಲು ಕೆಲಸ ಮಾಡಲು ಹೊರಟಾಗ ಪಕ್ಷದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕುಟುಂಬದವರು ಮಧ್ಯೆ ಪ್ರವೇಶಿಸಿ ತಡೆ ಒಡ್ಡುತ್ತಿದ್ದಾರೆ. 

ಇತ್ತೀಚೆಗೆ ತಾವು ಉಸ್ತುವಾರಿ ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಏಕಾಏಕಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಬೆಂಬಲಿಗ ಎಂ.ರುದ್ರೇಶ್‌ ಅವರು ಚಾಮರಾಜನಗರದ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸೋಮಣ್ಣ ಅವರು ಪಕ್ಷದ ಹಿರಿಯ ನಾಯಕರಿಗೆ ಮೌಖಿಕ ದೂರನ್ನೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ‘ಯಡಿಯೂರಪ್ಪ ಅವರ ಕುಟುಂಬದಲ್ಲಿ ಅವರ ಇಬ್ಬರು ಪುತ್ರರಿಗೂ ಟಿಕೆಟ್‌ ನೀಡುವುದಾದರೆ ನನ್ನ ಪುತ್ರನಿಗೂ ಯಾಕೆ ಟಿಕೆಟ್‌ ನೀಡುವುದಿಲ್ಲ? ನಾನು ನನ್ನ ಪುತ್ರ ಇಬ್ಬರೂ ಸ್ಪರ್ಧಿಸಿ ಗೆಲುವು ಸಾಧಿಸುತ್ತೇವೆ. 

ಅಧಿಕಾರ ಕೊಟ್ಟರೆ ರಾಮರಾಜ್ಯ ನಿರ್ಮಾಣ: ಜೆಡಿಎಸ್‌ ಸಮಾವೇಶದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ

ನನ್ನ ಪುತ್ರನೂ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡಿದ್ದಾನೆ. ನ್ಯಾಯ ಎಲ್ಲರಿಗೂ ಒಂದೇ ಇರಬೇಕು ಎಂದು ಸೋಮಣ್ಣ ಅವರು ಪಕ್ಷದ ನಾಯಕರ ಬಳಿ ಬೇಡಿಕೆ ಇರಿಸಿದ್ದಾರೆ. ಆದರೆ, ಈ ಬೇಡಿಕೆಯ ಬಗ್ಗೆ ವರಿಷ್ಠರೇ ತೀರ್ಮಾನ ಕೈಗೊಳ್ಳಬೇಕಾಗುತ್ತದೆ’ ಎಂದು ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ. ಒಂದು ವೇಳೆ ತಮ್ಮ ಬೇಡಿಕೆ ಈಡೇರದಿದ್ದರೆ ಸಚಿವ ಸೋಮಣ್ಣ ಅವರು ಹಲವು ವರ್ಷಗಳ ಬಿಜೆಪಿ ನಂಟನ್ನು ಕಡಿದುಕೊಂಡು ಕಾಂಗ್ರೆಸ್‌ಗೆ ವಾಪಸಾಗುವ ಬಗ್ಗೆ ತಮ್ಮ ಆಪ್ತರು ಹಾಗೂ ಬೆಂಬಲಿಗರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios