Hijab Case: ಹಿಜಾಬ್ ನಿಷೇಧಿಸಿದ್ದಕ್ಕೆ 17000 ಮಂದಿ ಪರೀಕ್ಷೆ ಗೈರು!
- ಹಿಜಾಬ್ ನಿಷೇಧಿಸಿದ್ದಕ್ಕೆ 17000 ಮಂದಿ ಪರೀಕ್ಷೆ ಗೈರು
- ‘ಹಿಜಾಬ್‌ನಿಂದಾಗಿ ಶಾಲೆ ಬಿಟ್ಟವರ ಬಗ್ಗೆ ಅಧಿಕೃತ ದಾಖಲೆಯಿದೆಯೇ?’
- -ಸುಪ್ರೀಂ ಪ್ರಶ್ನೆಗೆ ಹಿಜಾಬ್‌ಪರ ವಕೀಲರ ಉತ್ತರ
- ಲಿಂಗ, ಧರ್ಮದ ಹೆಸರಿನಲ್ಲಿ ತಾರತಮ್ಯ, ಬಹುಸಂಖ್ಯಾತರ ಸಮಾಜದಲ್ಲಿ ಮುಸ್ಲಿಂರು ಗುರಿಯಾಗಿದ್ದಾರೆ-ಧವನ್
ನವದೆಹಲಿ (ಸೆ.15) : ‘ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮತ್ತು ಈ ಬಗ್ಗೆ ಹೈಕೋರ್ಚ್ ತೀರ್ಪಿನ ಬಳಿಕ ಶಿಕ್ಷಣ ಸಂಸ್ಥೆಗಳನ್ನು ತೊರೆದಿರುವ ವಿದ್ಯಾರ್ಥಿಗಳ ಅಂಕಿಅಂಶಗಳ ಬಗ್ಗೆ ಅಧಿಕೃತ ದಾಖಲೆ, ಸಾಕ್ಷ್ಯ ಇದೆಯೇ?’ -ಇದು ಹಿಜಾಬ್ ಕುರಿತಾದ ಅರ್ಜಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಚ್ ನ್ಯಾಯಪೀಠ ಹಿಜಾಬ್ ಪರ ವಕೀಲರಿಗೆ ಕೇಳಿರುವ ಪ್ರಶ್ನೆ.
Hijab Ban Case ಬುಧವಾರದ ಒಳಗೆ ವಾದ ಮುಗಿಸಿ, ಸೆ.14ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್!
ಇದಕ್ಕೆ ಉತ್ತರಿಸಿದ ಹಿಜಾಬ್‌ಪರ ವಕೀಲ ಅಹಮದಿ, ನಮಗಿರುವ ಮಾಹಿತಿಯ ಪ್ರಕಾರ ಈ ತೀರ್ಪಿನಿಂದಾಗಿ 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗಳಿಂದ ದೂರ ಉಳಿದಿದ್ದರು. ಇಷ್ಟುಮಾತ್ರವಲ್ಲದೆ ಸರ್ಕಾರದ ನಿರ್ಧಾರದಿಂದಾಗಿ ಜಾತ್ಯತೀತ ನೆಲೆಯಡಿ ನಡೆಸುತ್ತಿದ್ದ ಶಾಲೆಗಳಲ್ಲಿ ಕಲಿಯುತ್ತಿದ್ದ ಹಿಜಾಬ್ ಪರ ವಿದ್ಯಾರ್ಥಿನಿಯರು ಬಲವಂತವಾಗಿ ಮದ್ರಸಾ ಶಿಕ್ಷಣದತ್ತ ಮುಖಮಾಡುವಂತಾಗಿದೆ ಎಂದು ಹೇಳಿದರು.
ಅಷ್ಟಕ್ಕೂ ಒಬ್ಬರ ಧಾರ್ಮಿಕ ಆಚರಣೆಯು ಕಾನೂನು, ಜಾತ್ಯತೀತ ಶಿಕ್ಷಣ ಅಥವಾ ಏಕತೆಗೆ ಭಂಗ ತರುತ್ತದೆ ಎಂದು ಯಾರಾದರೂ ಯಾಕೆ ಅಂದುಕೊಳ್ಳಬೇಕು? ಯಾರಾದರೂ ಹಿಜಾಬ್ ಧರಿಸಿಕೊಂಡು ಶಾಲೆಗೆ ಹೋಗುತ್ತಿದ್ದರೆ ಅದು ಉಳಿದವರನ್ನು ಯಾಕೆ ಕೆರಳಿಸಬೇಕು ಎಂದು ಪ್ರಶ್ನಿಸಿದರು.
5ನೇ ದಿನವೂ ಕೂಡ ಹಿಜಾಬ್ ನಿರ್ಬಂಧ ವಿರೋಧಿಸಿ ಅರ್ಜಿದಾರರ ಪರ ವಕೀಲರು ನ್ಯಾ.ಹೇಮಂತ್ ಗುಪ್ತಾ ಅವರ ನೇತೃತ್ವದ ದ್ವಿಸದಸ್ಯ ನ್ಯಾಯಪೀಠದ ಮುಂದೆ ವಾದ ಮಂಡಿಸಿದರು. ಹಿರಿಯ ವಕೀಲರಾದ ರಾಜೀವ್ ಧವನ್, ಅದಿತ್ಯ ಸೋಂದೆ, ಅಹಮದಿ ಸೇರಿ ಐವರು ನ್ಯಾಯವಾದಿಗಳು ವಾದ ಮಂಡಿಸಿದರು. ಬಳಿಕ ಗುರುವಾರಕ್ಕೆ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಮುಂದೂಡಿತು.
ಲಿಂಗ, ಧರ್ಮದ ಹೆಸರಲ್ಲಿ ತಾರತಮ್ಯ: ವಕೀಲ ರಾಜೀವ್ ಧವನ್ ವಾದ ಮಂಡಿಸಿ, ಹಿಜಾಬ್‌ಗೆ ಪ್ರಪಂಚದಾದ್ಯಂತ ಮಾನ್ಯತೆ ಇದೆ. ಕರ್ನಾಟಕದಲ್ಲಿ ಮಾತ್ರ ಯಾಕೆ ನಿರ್ಬಂಧ ? ಇದು ಲಿಂಗ ಮತ್ತು ಧಾರ್ಮಿಕ ಹಕ್ಕು ನಿರ್ಧರಿಸುವ ವಿಷಯವಾಗಿದೆ. ಅಲ್ಲದೆ ಇಂದು ಬಹುಸಂಖ್ಯಾತ ಸಮುದಾಯದಲ್ಲಿ ಇಸ್ಲಾಂನಿಂದ ಬಂದಿದ್ದನ್ನು ಹೊಡೆದುರುಳಿಸುವ ಅಸಂತೃಪ್ತ ಬಹಳ ಇದೆ. ಕೇವಲ ಮುಸ್ಲಿಮರು ಮತ್ತು ಮುಸ್ಲಿಂ ಮಹಿಳೆಯರೇ ಅವರ ಗುರಿ. ಇನ್ನು ನನ್ನ ಅರ್ಜಿದಾರರು ಹಿಜಾಬ್ ಧರಿಸಿಯೇ ಕರಾಟೆ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ. ಪುಟ್ಟಸ್ವಾಮಿ ಮತ್ತು ನಲ್ಸಾ ಪ್ರಕರಣಗಳಲ್ಲಿ ಇದನ್ನು ಖಾಸಗಿ ಹಕ್ಕು ಎಂದು ಪರಿಗಣಿಸಲಾಗಿದೆ. ಹಿಜಾಬ್ ಧರಿಸಿದವರನ್ನು ಲಿಂಗ ಮತ್ತು ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದರು.
ಕೇಂದ್ರೀಯ ವಿದ್ಯಾಲಯದಲ್ಲಿ ಹಿಜಾಬ್‌ಗೆ ಅವಕಾಶ ಇದೆ. ಧರ್ಮ ಮತ್ತು ಅದರ ಆಚರಣೆಗಳನ್ನು ಅಗತ್ಯ ಭಾಗಗಳು ಅಲ್ಲ ಎಂದು ಹೇಳುವ ಅಧಿಕಾರ ಹೊರಗಿನವರಿಗೆ ಇಲ್ಲ. ಸಮವಸ್ತ್ರ ನಿಯಮ ರೂಪಿಸುವಾಗ ಬರ್ಖಾಗೆ ಅವಕಾಶ ಇಲ್ಲ ಎನ್ನಬಹುದು. ಆದರೆ ಸಮವಸ್ತ್ರ ಬಣ್ಣದ ಹಿಜಾಬ್‌ಗೆ ನಿರ್ಬಂಧ ವಿಧಿಸುವುದು ಎಷ್ಟುಸರಿ ಎಂದು ನ್ಯಾಯಪೀಠದ ಮುಂದೆ ವಾದ ಮುಂದಿಟ್ಟರು.
ಯಾವ ಸುವ್ಯವಸ್ಥೆ ಹಾಳಾಗಿದೆ?: ವಕೀಲ ಆದಿತ್ಯ ಸೋಂದೆ ತಮ್ಮ ವಾದ ಮಂಡಿಸಿ, ಸಂಸ್ಕೃತಿ, ಸಂಪ್ರದಾಯಗಳ ಮಾನದಂಡದ ಅಡಿ ಕರ್ನಾಟಕದಲ್ಲಿ ಕೊಡವರಿಗೆ ಶಸ್ತ್ರಗಳನ್ನು ಹೊಂದುವ ಹಕ್ಕು ಕೋರ್ಚ್ ದಯಪಾಲಿಸಿದೆ. ಧಾರ್ಮಿಕ ಹೋರಾಟ ಅಥವಾ ಸಾಂಸ್ಕೃ›ತಿಕ ಹಕ್ಕಿನ ನಡುವೆ ಅತಿ ಸಣ್ಣ ಅಥವಾ ತೆಳುವಾದ ಗೆರೆ ಇದೆ. ಇದನ್ನು ಪತ್ತೆ ಹಚ್ಚುವ ಅಥವಾ ಪ್ರತ್ಯೇಕಿಸುವುದು ಕಷ್ಟ. ಸಾರ್ವಜನಿಕ ಸುವ್ಯವಸ್ಥೆಯ ಮಾನದಂಡದಡಿ ಕರ್ನಾಟಕ ಸರ್ಕಾರ ಹಿಜಾಬ್‌ಗೆ ನಿರ್ಬಂಧ ವಿಧಿಸಿದೆ. ಹಿಜಾಬ್‌ನಿಂದ ಯಾವ ಸುವ್ಯವಸ್ಥೆ ಹಾಳಾಗಿದೆ? ಹುಡುಗಿಯರು ಹಿಜಾಬ್ ಧರಿಸುವುದು ಸಾಮಾನ್ಯ ಎಂದರು.