ನವೆಂಬರ್ ಮೊದಲ ದಿನವೇ 1500 ಕಾರುಗಳಿಗೆ ನಗರ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ. ಬಿಎಸ್6 ಎಮಿಶನ್ ಅಲ್ಲದ ಕಾರುಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಇನ್ನು ಹೊಸ ನಿಯಮದಿಂದ ಒಂದೇ ದಿನ 68 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ನವದೆಹಲಿ (ನ.02) ನವೆಂಬರ್ ತಿಂಗಳಿನಿಂದ ಹಲವು ನಿಯಮಗಳು ಕಠಿಣಗೊಂಡಿದೆ. ಪರಿಣಾಮ ಒಂದೇ ದಿನ ಬರೋಬ್ಬರಿ 68 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳ ಮೇಲೆ ಕಠಿಣ ರೂಲ್ಸ್ ಜಾರಿ ಮಾಡಲಾಗಿದೆ. ಬಿಎಸ್6 ಎಮಿಶನ್ ಅಲ್ಲದ ವಾಹನಗಳಿಗೆ ನಗರ ಪ್ರವೇಶ ನಿರ್ಬಂಧಿಸಲಾಗಿದೆ. ಇದರ ಅರಿವು ಇಲ್ಲದ, ಗೊತ್ತಿದ್ದೂ ಬಂದ 1539 ಕಾರುಗಳನ್ನು ಸಿಟಿ ಪ್ರವೇಶ ನಿರಾಕರಿಸಲಾಗಿದೆ. ಇಷ್ಟೇ ಅಲ್ಲ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರಿಗೆ ದಂಡ ವಿಧಿಸಿ ಒಂದೇ ದಿನ ಬರೋಬ್ಬರಿ 68 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ವಾಯು ಮಾಲಿನ್ಯಕ್ಕೆ ಕಠಿಣ ರೂಲ್ಸ್

ದೆಹಲಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ವಿಂಟರ್ ರೂಲ್ಸ್ ಜಾರಿಗೆ ತಂದಿದೆ. ಚಳಿಗಾಲ ಶುರುವಾಗುತ್ತಿದ್ದಂತೆ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುವ ಕಾರಣ ಕಠಿಣ ನಿಯಮ ಜಾರಿಗೆ ತರಲಾಗಿದೆ. ದೆಹಲಿ ಪ್ರವೇಶಿಸುವ ನಗರದ ಹೊರವಲಯದಲ್ಲಿ ಪೊಲೀಸರು ನಾಕಾಬಂಧಿ ಹಾಕಲಾಗಿದೆ. ಬಿಎಸ್‌-6 (BS-VI) ಅಲ್ಲದ ಹೊರರಾಜ್ಯದ ವಾಹನಗಳ ನಿಷೇಧ ಹೇರಲಾಗಿದೆ. ಇನ್ನು ಪಿಯುಸಿಸಿ (PUCC) ರಹಿತ ವಾಹನಗಳ ತಪಾಸಣೆ ತೀವ್ರಗೊಳಿಸಲಾಗಿದೆ. ಮೊದಲ ದಿನದ ಕಾರ್ಯಾಚರಣೆಯಲ್ಲೇ ಬರೋಬ್ಬರಿ ₹68.4 ಲಕ್ಷಕ್ಕೂ ಅಧಿಕ ದಂಡ ಮತ್ತು ಪರಿಸರ ಪರಿಹಾರ ಶುಲ್ಕ ವಿಧಿಸಲಾಗಿದೆ.

ಬಿಎಸ್6 ಎಮಿಶನ್ ಅಲ್ಲದ ಕಾರುಗಳಿಗೆ ನಿರ್ಬಂಧ

ನವೆಂಬರ್ 1ರಿಂದ ಜಾರಿಗೆ ಬಂದಿರುವ ನೂತನ ನಿಯಮಗಳ ಹಿನ್ನೆಲೆಯಲ್ಲಿ ದೆಹಲಿ ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಜಂಟಿ ತಂಡಗಳು ನಗರದ ಗಡಿ ಭಾಗಗಳಲ್ಲಿ ಭಾರಿ ತಪಾಸಣೆ ನಡೆಸುತ್ತಿದೆ. ದೆಹಲಿ ನಗರದ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಒಟ್ಟು 14,930 ವಾಹನಗಳ ತಪಾಸಣೆ ನಡೆಸಲಾಗಿದೆ. ಪೈಕಿ ಬಿಎಸ್‌-6 ಹೊರಸೂಸುವಿಕೆ ಮಾನದಂಡ ಹೊಂದಿರದ 1,539 ಹೊರರಾಜ್ಯದ (ಉದಾಹರಣೆಗೆ ಯುಪಿ, ಹರಿಯಾಣ ಸೇರಿ ಇತರ ರಾಜ್ಯದ ನೋಂದಾಯಿತ) ವಾಹನಗಳನ್ನು ದೆಹಲಿ ಪ್ರವೇಶಿಸದಂತೆ ತಡೆದು ವಾಪಸ್ ಕಳುಹಿಸಲಾಗಿದೆ. ತಪಾಸಣೆಗೆ ಒಳಪಟ್ಟ ಒಟ್ಟು ವಾಹನಗಳಲ್ಲಿ ಶೇಕಡಾ 10.31 ರಷ್ಟು ವಾಹನಗಳನ್ನು ಗಡಿಯಲ್ಲೇ ವಾಪಸ್ ಕಳುಹಿಸಲಾಯಿತು.

ಅಧಿಕೃತ ಅಂಕಿಅಂಶಗಳ ಪ್ರಕಾರ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಇಲ್ಲದೆ ಸಂಚರಿಸುತ್ತಿದ್ದ ವಾಹನಗಳಿಗೆ ಒಟ್ಟು 566 ಚಲನ್‌ಗಳನ್ನು ನೀಡಲಾಗಿದ್ದು, ಇವರಿಂದಲೇ ₹56.6 ಲಕ್ಷ ದಂಡ ಸಂಗ್ರಹಿಸಲಾಗಿದೆ. ನಿಷೇಧಿತ ಹೊರರಾಜ್ಯದ ವಾಹನ ಪ್ರವೇಶ ನಿಯಮ ಉಲ್ಲಂಘಿಸಿದ್ದಕ್ಕಾಗಿ ₹2 ಲಕ್ಷ ದಂಡ ಹಾಗೂ ಕಟ್ಟಡ ನಿರ್ಮಾಣದ ಧೂಳು ಮತ್ತು ಕಟ್ಟಡ ನಿರ್ಮಾಣ ಹಾಗೂ ಧ್ವಂಸ(Construction & Demolition) ಸ್ಥಳಗಳಿಗೆ ₹9.8 ಲಕ್ಷ ಪರಿಸರ ಪರಿಹಾರ ದಂಡ ವಿಧಿಸಲಾಗಿದೆ. ಇದರಿಂದಾಗಿ ಮೊದಲ ದಿನದ ಒಟ್ಟು ದಂಡದ ಮೊತ್ತ ₹68,40,000 ತಲುಪಿದೆ.

ದೆಹಲಿ ಗಡಿಯಲ್ಲಿ ಭಾರಿ ಟ್ರಾಫಿಕ್ ಜಾಮ್

ದೆಹಲಿ-ಗುರುಗ್ರಾಮ ಹಾಗೂ ದೆಹಲಿ-ನೋಯ್ಡಾ (ಕಾಳಿಂದಿ ಕುಂಜ್) ಸೇರಿದಂತೆ ಪ್ರಮುಖ ಗಡಿ ಭಾಗಗಳಲ್ಲಿ ಬಿಗಿ ತಪಾಸಣೆ ಮಾಡಲಾಗಿದೆ. ದೆಹಲಿ ಗಡಿ ಪ್ರದೇಶಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಈ ಮಧ್ಯೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50 ರಷ್ಟು 'ವರ್ಕ್ ಫ್ರಮ್ ಹೋಮ್' (WFH) ನಿಯಮ ಕೂಡ ನವೆಂಬರ್ 1 ರಿಂದ ಜಾರಿಯಲ್ಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ವಲಯಗಳಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಕ್ರಮ ವಹಿಸಲಾಗಿದೆ. ವಾಯು ಗುಣಮಟ್ಟ (AQI) ಮತ್ತಷ್ಟು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಜನವರಿ 31ರವರೆಗೆ ಈ ಕಠಿಣ ಕ್ರಮಗಳು ಮುಂದುವರಿಯಲಿವೆ.