ಭದ್ರಾ ನಾಲೆಗಳಿಗೆ ನೀರು ಬಿಡಲು ಆಗ್ರಹಿಸಿ ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ದಾವಣಗೆರೆ ನಗರ ಬಂದ್‌ಗೆ ಭಾರತೀಯ ರೈತ ಒಕ್ಕೂಟ ಕರೆ ನೀಡಿದೆ. ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ಖಾಸಗಿ ಬಸ್, ಆಟೋ ಮತ್ತು ವರ್ತಕರ ಸಂಘ ಬೆಂಬಲ ಸೂಚಿಸಿವೆ.
ದಾವಣಗೆರೆ: ಭದ್ರಾ ಜಲಾಶಯದಿಂದ ನಾಲೆಗಳಿಗೆ ತಕ್ಷಣವೇ ನೀರು ಬಿಡಬೇಕೆಂದು ಆಗ್ರಹಿಸಿ 'ಭಾರತೀಯ ರೈತ ಒಕ್ಕೂಟ' ನಾಳೆ (ಸೋಮವಾರ) ದಾವಣಗೆರೆ ನಗರ ಬಂದ್‌ಗೆ ಕರೆ ನೀಡಿದೆ. ರೈತರ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾಗಿರುವ ಈ ಬಂದ್‌ಗೆ ಜಿಲ್ಲೆಯ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಬಂದ್ ಸಮಯ ಮತ್ತು ಪ್ರತಿಭಟನೆ
ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಗರ ಬಂದ್‌ಗೆ ಕರೆ ನೀಡಲಾಗಿದೆ. ಬೆಳಗ್ಗೆ 7 ಗಂಟೆಗೆ ದಾವಣಗೆರೆಯ ಪ್ರಮುಖ ಕೇಂದ್ರವಾದ ಜಯದೇವ ವೃತ್ತದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಆರ್. ಲಿಂಗರಾಜ್ ಮಾತನಾಡಿ, ಬಂದ್‌ಗೆ ಸಹಕರಿಸುವಂತೆ ವರ್ತಕರು ಮತ್ತು ಉದ್ಯಮಿಗಳಿಗೆ ಮನವಿ ಮಾಡಿದ್ದೇವೆ. ದಲ್ಲಾಳಿಗಳ ಸಂಘ, ಖಾಸಗಿ ಬಸ್ ಮಾಲೀಕರು ಹಾಗೂ ಆಟೋ ಚಾಲಕರ ಸಂಘ ಈಗಾಗಲೇ ನಮಗೆ ಬೆಂಬಲ ಘೋಷಿಸಿವೆ. ಶಾಂತಿಯುತವಾಗಿ ಬಂದ್ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.
ಯಾವುವು ಲಭ್ಯವಿರುತ್ತವೆ?
ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳು. ಹಾಲು ಮಾರಾಟ ಕೇಂದ್ರಗಳು ತೆರೆದಿರಲಿವೆ. ನಗರದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭದ್ರಾ ಡ್ಯಾಂನಲ್ಲಿ 175 ಅಡಿ ನೀರಿದೆ. ಹಿಂದೆ 150 ಅಡಿ ಇದ್ದಾಗಲೇ ನಾಲೆಗಳಿಗೆ ನೀರು ಬಿಟ್ಟ ಇತಿಹಾಸವಿದೆ. ಆದರೆ ಸರ್ಕಾರ ಈಗ ಅಡಿಕೆ, ತೆಂಗು ಬೆಳೆಗಾರರು ಮತ್ತು ಭತ್ತ ಬೆಳೆಗಾರರ ನಡುವೆ ಗೊಂದಲ ಸೃಷ್ಟಿಸಿ ಎರಡು ಗುಂಪು ಮಾಡುತ್ತಿದೆ ಎಂದು ಆರೋಪಿಸಿದರು.
ರೈತರ ಸಂಕಷ್ಟವೇನು?
ಈಗಾಗಲೇ ಜಿಲ್ಲೆಯ ಶೇ. 30ರಷ್ಟು ರೈತರು ಭತ್ತದ ನಾಟಿ ಮಾಡಿದ್ದಾರೆ. ಸಾವಿರಾರು ರೈತರು ಸಸಿ ಮಡಿಗಳನ್ನು ಮಾಡಿ ನಾಟಿಗೆ ಸಿದ್ಧರಾಗಿದ್ದಾರೆ. ನೀರು ಬಿಡದಿದ್ದರೆ ಈ ಸಸಿಗಳು ಒಣಗಿ ಹೋಗುವ ಭೀತಿ ಇದೆ. ಪ್ರಸ್ತುತ ಡ್ಯಾಂಗೆ 4000 ಕ್ಯೂಸೆಕ್ ಒಳಹರಿವು ಇದೆ. ನಮಗೆ ಬೇಕಿರುವುದು ಕೇವಲ 3000 ಕ್ಯೂಸೆಕ್ ನೀರು ಮಾತ್ರ. ಆದರೂ ಸರ್ಕಾರ ವಿಳಂಬ ಮಾಡುತ್ತಿದೆ. ಸಿಎಂ ಜೊತೆ ಮಾತನಾಡುತ್ತೇವೆ ಎಂದು ಅಧಿಕಾರಿಗಳು ಹೇಳಿ ಕಳಿಸಿದ್ದಾರೆಯೇ ಹೊರತು ಇದುವರೆಗೆ ಯಾವುದೇ ತೀರ್ಮಾನ ಮಾಡಿಲ್ಲ. ಹದಿನೈದು ದಿನಗಳಿಂದ ನಾವು ಮನವಿ ಮಾಡುತ್ತಿದ್ದೇವೆ, ನಿನ್ನೆ ರಾಷ್ಟ್ರೀಯ ಹೆದ್ದಾರಿ ತಡೆದರೂ ಸರ್ಕಾರ ಕಣ್ಣು ಬಿಡುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ. ದಾವಣಗೆರೆಯ ನಾಗರಿಕರು ರೈತರ ಈ ನ್ಯಾಯಯುತ ಹೋರಾಟಕ್ಕೆ ಸಹಕರಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಮನವಿ ಮಾಡಿದೆ.


