ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಬದನೆಕಾಯಿ ಪಲ್ಯ ಮತ್ತು ರೊಟ್ಟಿ ತಿಂದ ಒಂದೇ ಕುಟುಂಬದ ಮೂವರು ಹೆಣ್ಣು ಮಕ್ಕಳು (7 ವರ್ಷ, 3 ವರ್ಷ ಮತ್ತು 9 ತಿಂಗಳು) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರಿಗೆ ತಿಳಿಸದೆ ಮಕ್ಕಳನ್ನು ಹೂತುಹಾಕಿದ್ದ ಪೋಷಕರ ಕ್ರಮ ಅನುಮಾನ ಮೂಡಿಸಿದ್ದು, ಅಧಿಕಾರಿಗಳು ಈಗ ಶವಗಳನ್ನು ಹೊರತೆಗೆದು ತನಿಖೆ ನಡೆಸುತ್ತಿದ್ದಾರೆ.

ಛತ್ತರ್‌ಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ಕುಟುಂಬದ ಮೂವರು ಪುಟ್ಟ ಮಕ್ಕಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿಗೆ ಅವರು ಸೇವಿಸಿದ ಬದನೆಕಾಯಿ ಪಲ್ಯವೇ ಕಾರಣ ಎಂಬ ಸಂಶಯ ವ್ಯಕ್ತವಾಗಿದ್ದು, ಪ್ರಕರಣ ಈಗ ಹಲವು ತಿರುವುಗಳನ್ನು ಪಡೆದುಕೊಂಡಿದೆ.

ನಡೆದಿದ್ದೇನು?

ಜಿಲ್ಲೆಯ ಇಸಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪೋರಾ ಖುರ್ದ್ ಗ್ರಾಮದಲ್ಲಿ ದುರಂತ ಸಂಭವಿಸಿದೆ. ಮೃತ ಮಕ್ಕಳನ್ನು ಬಾಲಮುಕುಂದ್ ಕುಶ್ವಾಹಾ ಎಂಬುವವರ ಪುತ್ರಿಯರಾದ ಪೂನಮ್ (7 ವರ್ಷ), ಮನಿಷಾ (3 ವರ್ಷ) ಮತ್ತು ಕೇವಲ ಒಂಬತ್ತು ತಿಂಗಳ ಹಸುಗೂಸು ಚಾಹತ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ.. ಗುರುವಾರ ರಾತ್ರಿ ಮೂವರು ಮಕ್ಕಳು ಮನೆಯಲ್ಲಿ ತಯಾರಿಸಿದ್ದ 'ಬದನೆಕಾಯಿ ಭರ್ತಾ' (ಬದನೆಕಾಯಿ ಪಲ್ಯ) ಮತ್ತು ರೊಟ್ಟಿಯನ್ನು ಸೇವಿಸಿದ್ದರು. ಆಹಾರ ಸೇವಿಸಿದ ಕೆಲವೇ ಹೊತ್ತಿನಲ್ಲಿ ಮಕ್ಕಳ ಆರೋಗ್ಯ ಕ್ಷೀಣಿಸಿದ್ದು, ಮೂವರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹೂತು ಹಾಕಿದ್ದ ಪೋಷಕರು

ಮಕ್ಕಳ ಸಾವಿನ ಬಗ್ಗೆ ಪೋಷಕರು ಪೊಲೀಸರಿಗೆ ಅಥವಾ ಸ್ಥಳೀಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಮರಣೋತ್ತರ ಪರೀಕ್ಷೆ ನಡೆಸದೆಯೇ ಮಕ್ಕಳ ಶವಗಳನ್ನು ಗ್ರಾಮದ ಹೊರವಲಯದಲ್ಲಿ ರಹಸ್ಯವಾಗಿ ಹೂತು ಹಾಕಿದ್ದರು. ಈ ವಿಷಯವು ತಡವಾಗಿ ಪೊಲೀಸರ ಗಮನಕ್ಕೆ ಬಂದಿದೆ. ಮಕ್ಕಳ ಸಾವು ಅನುಮಾನಾಸ್ಪದ ಎಂದು ತಿಳಿದ ಕೂಡಲೇ ಛತ್ತರ್‌ಪುರದ ಮುಖ್ಯ ವೈದ್ಯಾಧಿಕಾರಿ ಆರ್.ಪಿ. ಗುಪ್ತಾ, ಕಂದಾಯ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡ ಗ್ರಾಮಕ್ಕೆ ಧಾವಿಸಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಹೂತು ಹಾಕಲಾಗಿದ್ದ ಮೂವರು ಮಕ್ಕಳ ಶವಗಳನ್ನು ಪೊಲೀಸರು ಮಣ್ಣಿನಿಂದ ಹೊರತೆಗೆದಿದ್ದಾರೆ.

ಮಕ್ಕಳ ಸಾವಿಗೆ ಅವರು ತಿಂದ ಆಹಾರ ವಿಷಪೂರಿತವಾಗಿದ್ದೇ (Food Poisoning) ಕಾರಣವೇ? ಅಥವಾ ಮತ್ಯಾವುದಾದರೂ ಅನಾರೋಗ್ಯ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಸಾವಿನ ಅಸಲಿ ಸತ್ಯ ಬಯಲಾಗಲಿದೆ. ಪೋಷಕರು ಅಂತ್ಯಕ್ರಿಯೆಯನ್ನು ರಹಸ್ಯವಾಗಿ ಮಾಡಿದ್ದೇಕೆ ಎಂಬ ಬಗ್ಗೆಯೂ ಪೊಲೀಸರು ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ಒಂದು ರಾತ್ರಿಯ ಊಟ ಇಡೀ ಕುಟುಂಬದ ಮೂವರು ಕುಡಿಗಳನ್ನು ಬಲಿಪಡೆದಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.