ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೇರಿತಲೆ' ಎಂಬ ಭವಿಷ್ಯವಾಣಿ ನುಡಿಯಲಾಗಿದೆ. ಇದು ಮಳೆ ಕೊರತೆ ಹಾಗೂ ಆಹಾರಧಾನ್ಯಗಳ ಬೆಲೆ ಏರಿಕೆಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿದೆ.

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಗರುಡ ಪಂಚಮಿಯಂದು ಸಂಭ್ರಮದ ಕಾರ್ಣಿಕೋತ್ಸವ ನಡೆಯಿತು. ಕುಂಬಳೂರಿನ ಗಣಮಗ ದುಂಡ್ಯಪ್ಪ 'ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ' ಎಂಬ ಭವಿಷ್ಯವಾಣಿಯನ್ನು ನುಡಿದರು.

ಕಮ್ಮಾರಗಟ್ಟೆಯಲ್ಲಿ ಸಂಭ್ರಮದ ಕಾರ್ಣಿಕೋತ್ಸವ

ಹೆಳವನಕಟ್ಟೆ ಗಿರಿಯಮ್ಮನ ಸಾನಿಧ್ಯದಲ್ಲಿ ಕಮ್ಮಾರಗಟ್ಟೆಯ ಮತ್ತು ಕುಂಬಳೂರಿನ ಆಂಜನೇಯ ಸ್ವಾಮಿಯ ನೇತೃತ್ವದಲ್ಲಿ, ಸುತ್ತಮುತ್ತಲ ಗ್ರಾಮಗಳ ದೇವಾನುದೇವತೆಗಳು ಸಮ್ಮುಖದಲ್ಲಿ ಅದ್ಧೂರಿ ಜಾತ್ರೆಯು ನಡೆಯಿತು. ಸುತ್ತಮುತ್ತಲಿನ ಗ್ರಾಮಗಳ ನವದಂಪತಿಗಳು ಬುಡಮೇಲಾದ ಹುಣಸೆಮರಕ್ಕೆ ಮಂಡಕ್ಕಿ ಎರಚಿ, ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಜಾತ್ರೆಯಲ್ಲಿ ತಮಗೆ ಇಷ್ಟವಾದ ತಿಂಡಿ, ತಿನಿಸು ಖರಿದೀಸಿದರು. ಮಳೆ ಬಿಡುವು ನೀಡಿದ್ದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಬೆಲೆ ಏರಿಕೆ ಮುನ್ಸೂಚನೆ ನೀಡಿತಾ ಭವಿಷ್ಯವಾಣಿ?

ಕಮ್ಮಾರಗಟ್ಟೆಯ ಕಾರ್ಣಿಕೋತ್ಸವದಲ್ಲಿ ಕಾರ್ಣಿಕದ ಭವಿಷ್ಯವಾಣಿಗಾಗಿ ಮೈಸೂರಿನ ಅರಸರು ಕಾಯುತ್ತಿದ್ದರು ಎಂಬ ಪ್ರತೀತಿ ಇದೆ. ಹೀಗಾಗಿ ಇದು ಮಹತ್ವವನ್ನು ಪಡೆದಿದೆ ಎನ್ನುತ್ತಾರೆ ಭಕ್ತರು.

'ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ' ಅಂದರೆ ಅಶ್ವಿನಿ ಮಳೆ ಮಾಯವಾಗಿ ಮಳೆ ಕೊರತೆ ಆಗಿದ್ದು ಆಹಾರಧಾನ್ಯಗಳು ಗಗನಕ್ಕೇರುತ್ತೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತೆ ಎಂಬ ಭವಿಷ್ಯವಾಣಿ ಇದಾಗಿದೆ ಅಂತಾ ಭಕ್ತರು ವಿಶ್ಲೇಷಿಸುತ್ತಿದ್ದಾರೆ.

ಅದ್ಧೂರಿ ನಗರ ಪಂಚಮಿ ಹಬ್ಬ

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಗ ಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಕಾರವಾರ ಸೇರಿ ವಿವಿಧ ಕಡೆ ನಾಗ ದೇವಾಲಯಕ್ಕೆ ತೆರಳಿದ ಭಕ್ತರು ನಾಗರ ವಿಗ್ರಹಕ್ಕೆ ಹಾಲು ಹಾಕಿ ಪುನೀತರಾದರು. ಕಾರವಾರದ ಪ್ರತಿಷ್ಠಿತ ನಾಗನಾಥ ದೇವಾಲಯದಲ್ಲಿ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ನಾಗರ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಿದರು. ದೇವಾಲಯ‌ ಆಡಳಿತ ಸಮೀತಿಯಿಂದ ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿತ್ತು.

ಹಾಲಿನ ಅಭಿಷೇಕ, ವಿವಿಧ ನೈವೇದ್ಯ

ಆಚರಿಸಲಾಯಿತು. ಭಕ್ತರು ನಾಗದೇವರಿಗೆ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ ಮತ್ತು ವಿವಿಧ ನೈವೇದ್ಯಗಳನ್ನು ಅರ್ಪಿಸಿದರು ದೇವಾಲಯದ ಮುಂಭಾಗದ ನಾಗರಕಟ್ಟೆಗೆ ಭಕ್ತರು ಕುಟುಂಬ ಸಮೇತರಾಗಿ ಬಂದು ನಾಗ ದೇವರಿಗೆ ಪೂಜೆ ಮಾಡಿದರು. ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹಾಲಿನ ಅಭಿಷೇಕ ಮಾಡಿ, ವಿವಿಧ ರೀತಿಯ ನೈವೇದ್ಯಗಳನ್ನು ಅರ್ಪಿಸುವುದರಿಂದ ದೇವರು ಪ್ರಸನ್ನನಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬಿಕೆ ಮನೆ ಮಾಡಿದೆ.