ಮಂಗಳೂರು(ಅ.17):  ಕಣ್ಣೂರಿಗೂ ಮಂಗಳೂರಿಗೂ ಇರೋದು ಕೇವಲ 150 ಕಿ.ಮೀ. ಅಂತರ. ಆದರೆ ಕುವೈಟ್‌ನಿಂದ ಕೇರಳದ ಕಣ್ಣೂರಿಗೂ, ಮಂಗಳೂರಿಗೂ ಫ್ಲೈಟ್‌ ಚಾಜ್‌ರ್‍ನಲ್ಲಿ ಮಾತ್ರ ಲಕ್ಷ ರು.ಗೂ ಹೆಚ್ಚು ವ್ಯತ್ಯಾಸ!

ಕುವೈಟ್‌, ಬಹರೈನ್‌ನಲ್ಲಿ ಕರಾವಳಿಯ ಸಾವಿರಾರು ಮಂದಿ ಉದ್ಯೋಗದಲ್ಲಿದ್ದಾರೆ. ಆದರೆ ಬಜೆಟ್‌ ವಿಮಾನವೆಂದೇ ಖ್ಯಾತಿ ಪಡೆದ ಏರ್‌ ಇಂಡಿಯಾದ ಪ್ರಯಾಣ ದರ ಮಾತ್ರ ಇಲ್ಲಿನ ಅನಿವಾಸಿ ಭಾರತೀಯರ ಕೈ ಸುಡುತ್ತಿದೆ. ಹಾಗಾಗಿ ಕರಾವಳಿ ಸೇರಿದಂತೆ ಆಸುಪಾಸಿನ ಜಿಲ್ಲೆಯ ಜನತೆ ಅತಿ ಕಡಿಮೆ ಪ್ರಯಾಣ ದರ ಇರುವ ಕಣ್ಣೂರು ವಿಮಾನ ನಿಲ್ದಾಣ ಮೂಲಕ ಬಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣ ಇವರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಲಕ್ಷ ರು.ಗೂ ಹೆಚ್ಚು ವ್ಯತ್ಯಾಸ:

ಕುವೈಟ್‌ನಲ್ಲಿರುವ ಉಡುಪಿ ಮೂಲದ ಕುಟುಂಬವೊಂದು ಮಂಗಳವಾರ ಟಿಕೆಟ್‌ ಬುಕ್‌ ಮಾಡುವಾಗ ಮಂಗಳೂರಿಗೂ ಕಣ್ಣೂರಿಗೂ ಇರುವ ದರ ವ್ಯತ್ಯಾಸ ನೋಡಿ ಗಾಬರಿಗೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸದಸ್ಯರನ್ನೊಳಗೊಂಡ ಈ ಕುಟುಂಬ ಡಿ.23ಕ್ಕೆ ಎಕಾನಮಿ ಕ್ಲಾಸ್‌ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲು 2,33,680 ರು. ವಿಮಾನ ಟಿಕೆಟ್‌ ದರ ಕಟ್ಟಬೇಕಿತ್ತು.

ಮಂಗಳೂರು: ಜಿಲ್ಲಾದ್ಯಂತ ಬಿಜೆಪಿ ಧ್ವಜ ರಹಿತ ಪಾದಯಾತ್ರೆ

ಅದೇ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬರಲು ಕೇವಲ 92 ಸಾವಿರ ರುಪಾಯಿ! ಬರೋಬ್ಬರಿ 1,30,724 ರು. ವ್ಯತ್ಯಾಸ. ಅಂದರೆ ಒಬ್ಬರ ಮೇಲೆ 32,500 ರು. ಹೆಚ್ಚುವರಿ ಮೊತ್ತ. ಕೊನೆಗೆ ಅವರು ಕಣ್ಣೂರಿಗೆ ಟಿಕೆಟ್‌ ಬುಕ್‌ ಮಾಡಿದ್ದಾರೆ. ಬೇರೆ ಸಮಯದಲ್ಲೂ ಸುಮಾರು 60- 70 ಸಾವಿರ ರು.ಗಳಷ್ಟುದರ ವ್ಯತ್ಯಾಸವಿದೆ ಎನ್ನುತ್ತಾರವರು.

ಕಣ್ಣೂರಿನ ಪ್ರಯಾಣ ದರ ಮಂಗಳೂರಲ್ಲೂ ಬರಲಿ:

‘‘ಸರಿಸುಮಾರು ಒಂದೇ ಟಿಕೆಟ್‌ ದರ ಇಡಬೇಕಾದಲ್ಲಿ ಏರ್‌ ಇಂಡಿಯಾ, ಕರಾವಳಿ ಜನರಿಂದ ಹಗಲು ದರೋಡೆ ನಡೆಸುತ್ತಿದೆ. ಹೀಗಾಗಿ ಪ್ರಸ್ತುತ ಕುವೈಟ್‌ನಲ್ಲಿರುವ ಅನಿವಾಸಿ ಭಾರತೀಯರಲ್ಲಿ ಬಹುತೇಕರು ಕಣ್ಣೂರು ಮೂಲಕವೇ ಮಂಗಳೂರಿಗೆ ತೆರಳುತ್ತಿದ್ದಾರೆ. 1.30 ಲಕ್ಷ ರು. ಹೆಚ್ಚು ಹಣ ಕೊಡುವುದಕ್ಕಿಂತ ಕಣ್ಣೂರಿಗೆ ಬಂದು ನಾಲ್ಕೈದು ಸಾವಿರ ರು. ಕೊಟ್ಟು ಟ್ಯಾಕ್ಸಿ ಮೂಲಕ ಮಂಗಳೂರಿಗೆ ತೆರಳಿದರೆ ದುಡಿದ ಗಳಿಕೆಯ ಬಹುತೇಕ ಹಣ ಉಳಿಯುತ್ತದೆ. ಕೂಡಲೇ ಏರ್‌ ಇಂಡಿಯಾ ಕಣ್ಣೂರಿನಂತೆ ಪ್ರಯಾಣದರ ಇಳಿಕೆ ಮಾಡಬೇಕು’’ ಎಂದು ಕುವೈಟ್‌ನಲ್ಲಿ ಎಂಜಿನಿಯರ್‌ ಆಗಿರುವ ಅನಿವಾಸಿ ಭಾರತೀಯ ಮಂಜೇಶ್ವರ ಮೋಹನ್‌ದಾಸ್‌ ಕಾಮತ್‌ ಒತ್ತಾಯಿಸಿದ್ದಾರೆ.

ಪ್ರಯಾಣ ವೇಳೆಯೂ ಸರಿಯಿಲ್ಲ:

ಇನ್ನು ಮಂಗಳೂರಿನಿಂದ ಕುವೈಟ್‌ಗೆ ಹೊರಡುವ ವಿಮಾನದ ಪ್ರಯಾಣ ಸಮಯವನ್ನು ಬದಲಾಯಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಇನ್ನೂ ಈಡೇರಿಲ್ಲ. ಜೆಟ್‌ ಏರ್‌ವೇಸ್‌ ದಿವಾಳಿಯಾದ ನಂತರ ಮಂಗಳೂರಿನಿಂದ ಬಹರೈನ್‌, ಕುವೈಟ್‌ಗೆ ಈಗ ಇರುವುದು ಏರ್‌ ಇಂಡಿಯಾ ವಿಮಾನ ಮಾತ್ರ.

ಮಂಗಳೂರು: ಜಿಲ್ಲೆಯಲ್ಲಿ ಗುಡುಗಿನಬ್ಬರ, ಸಾಧಾರಣ ಮಳೆ

ಈ ವಿಮಾನ ಬಹಹೈನ್‌ ಮೂಲಕ ಕುವೈಟ್‌ಗೆ ವಾರಕ್ಕೆ ಮೂರು ದಿನ ಕಾರ್ಯ ನಿರ್ವಹಿಸುತ್ತದೆ. ಬೆಳಗ್ಗೆ 6.36ಕ್ಕೆ ಮಂಗಳೂರಿನಿಂದ ಹೊರಟು ಬೆಳಗ್ಗೆ 10.30ರ ವೇಳೆಗೆ ಕುವೈಟ್‌ ತಲುಪುತ್ತದೆ. ಇದರಿಂದ ಕೆಲಸಕ್ಕೆ ವರದಿ ಮಾಡುವಾಗ ತಡವಾಗಿ ಇಡೀ ದಿನ ಹಾಳಾಗಿ ಬಿಡುತ್ತದೆ. ಸಮಯ ಬದಲಾಯಿಸುವಂತೆ ಅಲ್ಲಿನ 4 ಸಂಘಟನೆಯವರು ಎರಡು ಬಾರಿ ಸಂಸದ ನಳಿನ್‌ ಕುಮಾರ್‌ ಅವರಿಗೆ ಮನವಿ ನೀಡಿದರೂ ಇನ್ನೂ ಕಾರ್ಯಗತವಾಗಿಲ್ಲ.

‘ಕಣ್ಣೂರಿನಿಂದ ಪ್ರತಿದಿನ ಕುವೈಟ್‌ಗೆ ವಿಮಾನಗಳಿವೆ. ಅದೂ ರಾತ್ರಿ ವಿಮಾನಗಳಾಗಿದ್ದರಿಂದ ಮರುದಿನ ಸಮಯಕ್ಕೆ ಸರಿಯಾಗಿ ಕುವೈಟ್‌ ಕೆಲಸಕ್ಕೆ ವರದಿ ಮಾಡಬಹುದು. ಹಾಗಾಗಿ ಹೆಚ್ಚಿನವರು ಕಣ್ಣೂರು ಮೂಲಕವೇ ಪ್ರಯಾಣಿಸತೊಡಗಿದ್ದಾರೆ. ಇದರಿಂದ ಹಣವೂ, ಸಮಯವೂ ಉಳಿತಾಯವಾಗುತ್ತಿದೆ’ ಎನ್ನುತ್ತಾರೆ ಮೋಹನ್‌ದಾಸ್‌.

ಮಂಗಳೂರು ವಿಮಾನ ನಿಲ್ದಾಣಕ್ಕೆ ಅಸ್ತಿತ್ವ ಭೀತಿ

ಕಳೆದ ಹಲವು ದಶಕಗಳಿಂದ ಅಸ್ತಿತ್ವದಲ್ಲಿರುವ ಮಂಗಳೂರು ವಿಮಾನ ನಿಲ್ದಾಣ ಅವಿಭಜಿತ ದ.ಕ. ಮಾತ್ರವಲ್ಲ, ಸುತ್ತಲಿನ ಐದಾರು ಜಿಲ್ಲೆಗಳ ಜನರ ಪಾಲಿಗೆ ಸಂಚಾರ ನಾಡಿಯೂ ಹೌದು. ಇಷ್ಟುವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ನಿಲ್ದಾಣದಲ್ಲಿ ಸರಿಯಾದ ವಿಮಾನ ವ್ಯವಸ್ಥೆಗಳಿಲ್ಲ ಎನ್ನುವ ದೂರು ಹಲವು ಸಮಯಗಳಿಂದ ಇದೆ. ಇದೀಗ ದರ ಏರಿಕೆಯ ಬಿಸಿ ಬೇರೆ ಸೇರಿಕೊಂಡಿದೆ. ಕಣ್ಣೂರು ವಿಮಾನ ನಿಲ್ದಾಣ ಆರಂಭವಾಗಿ ಕೇವಲ ಒಂದು ವರ್ಷವಷ್ಟೇ ಕಳೆದಿದ್ದರೂ ಸಕಲ ವ್ಯವಸ್ಥೆಗಳೊಂದಿಗೆ ಜನರಿಗೆ ಹತ್ತಿರವಾಗಿದೆ. ಕಣ್ಣೂರು ನಿಲ್ದಾಣ ಆರಂಭವಾಗುವುದಕ್ಕೆ ಮೊದಲೇ ಮಂಗಳೂರು ವಿಮಾನ ನಿಲ್ದಾಣದ ಅಸ್ತಿತ್ವ ನಾಶವಾಗುವ ಕೂಗು ಕೇಳಿಬಂದಿತ್ತು. ಇದೀಗ ಅದು ನಿಜವಾಗುವತ್ತ ಸಾಗಿದೆ.

ಕಾರವಾರದ ರಾಬಿನ್ಸನ್ ಪೂರ್ವಾಪರ ಪತ್ತೆಹಚ್ಚಿದ ಕುವೈತ್ ಅಧಿಕಾರಿಗಳು

ಕುವೈಟ್‌ಗೆ ಮಂಗಳೂರಿನಿಂದ ವಿಮಾನ ಪ್ರಯಾಣ ಸಮಯ ಸರಿಯಿಲ್ಲದಿರುವುದರಿಂದ ಮೊದಲೇ ತೊಂದರೆಗೆ ಒಳಗಾಗಿದ್ದ ಅನಿವಾಸಿ ಭಾರತೀಯರಿಗೆ ಈಗ ಪ್ರಯಾಣ ದರದಲ್ಲೂ ಭಾರಿ ಏರಿಕೆಯಾಗಿದ್ದು ನುಂಗಲಾಗದ ತುತ್ತಾಗಿದೆ. ಕೇವಲ ವರ್ಷದ ಹಿಂದೆ ಆರಂಭವಾದ ಕಣ್ಣೂರಿನಲ್ಲಿ ಸಕಲ ಜನಪರ ವ್ಯವಸ್ಥೆ ಮಾಡಲು ಸಾಧ್ಯವಾಗಿದ್ದರೆ, ಹಲವು ದಶಕಗಳಿಂದ ಕಾರ್ಯಾಚರಿಸುತ್ತಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಏಕೆ ಸಾಧ್ಯವಾಗಿಲ್ಲ? ಕರಾವಳಿ ಸಂಸದರು ಕೂಡಲೆ ಗಮನ ಹರಿಸಿ ಅನಿವಾಸಿ ಭಾರತೀಯರ ಹಿತ ಕಾಪಾಡಬೇಕು ಎಂದು ಅನಿವಾಸಿ ಭಾರತೀಯ ಮಂಜೇಶ್ವರ ಮೋಹನದಾಸ್‌ ಕಾಮತ್‌ ಹೇಳಿದ್ದಾರೆ.

-ಸಂದೀಪ್‌ ವಾಗ್ಲೆ