ಮಂಗಳೂರು(ಅ.11): ಭಾರತದ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಪದ್ಮಶ್ರೀ ಕದ್ರಿ ಗೋಪಾಲನಾಥ್ ಶನಿವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಗೋಪಾಲನಾಥ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಕುವೈತ್‌ನಲ್ಲಿರುವ ಪುತ್ರ ಭಾರತಕ್ಕೆ ಮರಳಿದ ಮೇಲೆ ಕದ್ರಿ ಗೋಪಾಲನಾಥ್ ಅಂತಿಮ ಸಂಸ್ಕಾರ ನಡೆಯಲಿದೆ. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕರಾಗಿದ್ದ ಗೋಪಾಲನಾಥ್ ಭಾರತದ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಎಂದೇ ಗುರುತಿಸಲ್ಪಟ್ಟಿದ್ದಾರೆ.

ಆಕಾಶವಾಣಿಯ ರವೀಂದ್ರಕುಮಾರ್‌ ಇನ್ನಿಲ್ಲ

ಡಿಸೆಂಬರ್ 11, 1949ರಲ್ಲಿ ದ.ಕ ಜಿಲ್ಲೆಯ ಸಜಿಪಮೂಡದಲ್ಲಿ ಜನಿಸಿದ ಗೋಪಾಲನಾಥ್ ಜಗತ್ತಿನಾದ್ಯಂತ ಸಾವಿರಾರು ಸಂಗೀತ ಕಚೇರಿ ನೀಡಿದ್ದಾರೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾಶ್ರೀ, ಸ್ಯಾಕ್ಸೊಫೋನ್ ಚಕ್ರವರ್ತಿ ಸೇರಿ ನೂರಾರು ಗೌರವ, ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. 2004ರಲ್ಲಿ ಆಗಿನ ರಾಷ್ಟ್ರಪತಿ ಎ. ಪಿ. ಜೆ ಅಬ್ದುಲ್ ಕಲಾಂ ಅವರಿಂದ ಪದ್ಮಶ್ರೀ ಪುರಸ್ಕಾರವನ್ನೂ ಪಡೆದಿದ್ದಾರೆ. ಅವರ ತಂದೆ ತನಿಯಪ್ಪ ಅವರೂ ಪ್ರಸಿದ್ಧ ನಾದಸ್ವರ ವಾದಕರಾಗಿದ್ದರು. 

ಮೈಸೂರು ಅರಮನೆಯ ಬ್ಯಾಂಡ್‌ ಸೆಟ್‌ನಲ್ಲಿ ಸ್ಯಾಕ್ಸೊಫೋನ್ ನೋಡಿದ್ದರು:

ಮೈಸೂರು ಅರಮನೆಯ ಬ್ಯಾಂಡ್‌ ಸೆಟ್‌ನಲ್ಲಿ ಸ್ಯಾಕ್ಸೊಫೋನ್ ನೋಡಿ ಪ್ರಭಾವಿತರಾಗಿದ್ದ ಅವರು ಸ್ಯಾಕ್ಸೊಫೋನ್ ಕಲಿಯಲು ನಿರ್ಧರಿಸಿದ್ದರು. ಅಲ್ಲಿಂದ ಆರಂಭಿಸಿ 20 ವರ್ಷಗಳ ಕಠಿಣ ಅಭ್ಯಾಸದಿಂದ ಪ್ರಸಿದ್ಧ ಸ್ಯಾಕ್ಸೋಫೋನ್ ವಾದಕರಾಗಿ ಹೊರಹೊಮ್ಮಿದರು. ಖ್ಯಾತ ಸಂಗೀತ ನಿರ್ದೇಶಕರಾಗಿರುವ ಮಣಿಕಾಂತ್ ಕದ್ರಿ ಗೋಪಾಲ್‌ನಾಥ್ ಅವರ ಪುತ್ರ.

ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ!

ನಿರ್ದೇಶಕ ಕೆ. ಬಾಲಚಂದ್ರ ನಿರ್ದೇಶನದ ಡ್ಯುಯೆಟ್ ತಮಿಳು ಚಿತ್ರದಲ್ಲಿ ರಹಮಾನ್‌ ಅವರ ಜೊತೆ ಸ್ಯಾಕ್ಸೊಫೋನ್ ವಾದಿಸಿದ ನಂತರದಲ್ಲಿ ಕದ್ರಿ ಗೋಪಾಲ್‌ನಾಥ್‌ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದರು. ಗೋಪಾಲ್‌ನಾಥ್ ನಿಧನಕ್ಕೆ ಎ. ಆರ್ ರೆಹಮಾನ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಕದ್ರಿ ಗೋಪಾಲ್‌ನಾಥ್ ಅವರ ನಿಧನಕ್ಕೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.