Asianet Suvarna News Asianet Suvarna News

ನೀರಿಲ್ಲದ ಜಾಗದಲ್ಲಿ 15 ಎಕರೆ ಕಾಡು ಬೆಳೆಸಿದ ಹೀರೋ!

ಕೊರೆಸಿದ ಬೋರ್‌ವೆಲ್‌ಗಳಲ್ಲಿ ನೀರೇ ಸಿಗದಿದ್ದಾಗ ಸದಾಶಿವ ಮರಿಕೆಯವರಿಗೆ ಆತಂಕ ಶುರುವಾಯಿತು. ನೀರಿಲ್ಲದ ಸ್ಥಿತಿಗೆ ಕಾರಣವೇನು ಎಂದು ಹುಡುಕಿಹೊರಟಾಗ ಕಾಡು ನಾಶವೇ ಇದಕ್ಕೆಲ್ಲಾ ಮೂಲ ಕಾರಣ ಎಂದು ಗೊತ್ತಾಯಿತು. ಅಂದಿನಿಂದ ಇಂದಿನವರೆಗೆ ತಮ್ಮ 15 ಎಕರೆ ಜಾಗದಲ್ಲಿ ಗಿಡ ನೆಡುತ್ತಾ ಬಂದಿದ್ದಾರೆ. ಈಗ ಅದೊಂದು ದಟ್ಟಕಾನನವಾಗಿದೆ. ಅವರ ಭೂಮಿಯಲ್ಲಿ ಕೆಲವೇ ಅಡಿಯಲ್ಲಿ ನೀರು ಸಿಗುತ್ತದೆ. ಅಷ್ಟೇ ಅಲ್ಲ, ಅಕ್ಕಪಕ್ಕದ ಜಮೀನಿನಲ್ಲೂ ನೀರಿನ ಕೊರತೆ ಇಲ್ಲ. ಪರಿಸರ ನಾಶದ ಕುರಿತು ಎಲ್ಲರೂ ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಬಹುದಾದ ಮಾದರಿ ಕತೆ ಸದಾಶಿವ ಮರಿಕೆ ಅವರದು.

puttur farmer sadashiv turns 15 acres barren land into forest
Author
Bangalore, First Published Oct 10, 2019, 10:18 AM IST

ಸಂಶುದ್ದೀನ್‌ ಸಂಪ್ಯ, ಪುತ್ತೂರು

ಎ.ಪಿ. ಸದಾಶಿವ ಮರಿಕೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಮರಿಕೆ ನಿವಾಸಿ. ಪೂರ್ವಜರಿಂದ ಬಂದ 25 ಎಕ್ರೆ ಜಮೀನಿನಲ್ಲಿ 15ಎಕ್ರೆ ಭೂಮಿಯನ್ನು ಅಂತರ್ಜಲ ಹೆಚ್ಚಿಸಲು ಕಾಡು ಬೆಳೆಸಿದ್ದಾರೆ. ಸೆಂಟ್ಸ್‌ ಜಮೀನಿಗೆ ಲಕ್ಷಾಂತರ ಬೆಲೆಬಾಳುವ ಪುತ್ತೂರು ತಾಲೂಕಿನಲ್ಲಿ ಸದಾಶಿವ ಅವರು ಯಾವುದೇ ಫಲಾಪೇಕ್ಷೆಯಿಲ್ಲದೆ ಜಲಮಟ್ಟಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ಜಲಮಟ್ಟಹೆಚ್ಚಿಸಲು ಏಕೈಕ ಕಾಳಜಿ ಕಾಡು ಬೆಳೆಸುವ ಸಾಹಸಕ್ಕೆ ಮುಂದಾಗಿದ್ದು, ಇಂದು ಸದಾಶಿವ ಅವರ ಜಮೀನು ಸೇರಿ ಸುತ್ತಮುತ್ತಲೂ ಅಂತರ್ಜಲ ಮಟ್ಟಹೆಚ್ಚಾಗಿದೆ. ಅಷ್ಟೇ ಅಲ್ಲದೆ ಯಾವುದೇ ಬೋರ್‌ವೆಲ್‌ ಕೊರೆಸದೆ ಸಾಂಪ್ರದಾಯಿಕ ಕೆರೆಯ ನೀರನ್ನೇ ಕೃಷಿಗೆ ಬಳಸಿಕೊಳ್ಳುತ್ತಿದ್ದು, ನೀರಿನ ಒರತೆ ಹೆಚ್ಚಾಗಿದ್ದು, ಮಣ್ಣಿನ ಸವಕಳಿ ನಿಂತಿದೆ. ಈ ಕೆಲಸ ಒಂದೆರಡು ತಿಂಗಳಿಂದ ನಡೆದಿದ್ದಲ್ಲ. ಸುಮಾರು 30 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ.

puttur farmer sadashiv turns 15 acres barren land into forest

ಬೋರ್‌ವೆಲ್‌ ಕೊರೆಸಿದರೂ ನೀರು ಸಿಗಲಿಲ್ಲ

ಅದು 1983ರ ಸಮಯ. ಸದಾಶಿವ ಮರಿಕೆ ತಮ್ಮ 25 ಎಕ್ರೆ ಜಮೀನಿನಲ್ಲಿ ಅಡಿಕೆ ತೋಟ ಮಾಡಿಕೊಂಡಿದ್ದರು. ಸಾಂಪ್ರದಾಯಿಕವಾದ ಕೆರೆಗಳು ಬತ್ತಿ ಹೋಗಿ, ಮಳೆ ಇಲ್ಲದೆ ತೀವ್ರ ಬರಗಾಲ ಕಾಣಿಸಿಕೊಂಡಿತು. ಗದ್ದೆ ತೋಟಗಳಿಗೆ ನೀರಿನ ತೊಂದರೆ ಎದುರಾಯಿತು. ಈ ಸಂದರ್ಭದಲ್ಲಿ ಬೋರ್‌ವೆಲ್‌ ಕೊರೆಸಿದರೂ ಎರಡೇ ವರ್ಷಗಳಲ್ಲಿ ಬೋರ್‌ವೆಲ್‌ನಲ್ಲೂ ನೀರು ಬತ್ತಿತು. ಇನ್ನೊಂದು ಬೋರ್‌ವೆಲ್‌ ಕೊರೆಸಿದರು. ಮೊದಲು ಕೊರೆಸಿದ ಬೋರ್‌ವೆಲ್‌ನಲ್ಲಿ 150 ಅಡಿಯಲ್ಲಿ ನೀರು ಸಿಕ್ಕರೆ, ಎರಡನೇ ಬಾರಿ 250 ಅಡಿ ಆಳದಲ್ಲಿ ನೀರು ಸಿಕ್ಕಿತು. ಮತ್ತೆ ಒಂದು ವರ್ಷದಲ್ಲಿ ಬೋರ್‌ವೆಲ್‌ ಬರಡಾಯಿತು. ಆಗ ನೀರಿನ ಹರಿವು ಇನ್ನೂ ಆಳಕ್ಕೆ ಹೋಗಿತ್ತು. ವರ್ಷದಿಂದ ವರ್ಷಕ್ಕೆ ಜಲಮಟ್ಟಕುಸಿಯುತ್ತಾ ಬಂತು. ಈ ನಡುವೆ ಬೋರು ಗುಡ್ಡದಲ್ಲಿ ಅವರು ಗೇರು ಸಸಿ ನೆಟ್ಟು ಬೆಳೆಸಿದರು. ಈ ಸಂದರ್ಭದಲ್ಲಿ ಸದಾಶಿವ ಮರಿಕೆ ಅವರಿಗೆ ನೆರವಾಗಿದ್ದು ಒಂದು ಪತ್ರಿಕೆ.

ಚೆಂಡು ಹೂವು ಬೆಳೆದು ಲಕ್ಷ ಲಕ್ಷ ಎಣಿಸುತ್ತಿರುವ ಚುಂಚನೂರಿನ ಮೇಷ್ಟ್ರು!

ಸದಾಶಿವ ಮರಿಕೆ ಅವರು ಮಾನವ ಹಸ್ತಕ್ಷೇಪವಿಲ್ಲದೆ ತಮ್ಮ ಜಮೀನಿನಲ್ಲಿ ಅರಣ್ಯ ಬೆಳೆಸಿರುವ ಮೂಲಕ ಜಾಗತಿಕ ತಾಪಮಾನಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬರೂ ಈ ರೀತಿ ಮಾಡಿದಲ್ಲಿ ಮಣ್ಣಿನ ಸವಕಳಿ ತಡೆಯುವುದರ ಜೊತೆಗೆ ಪರಿಸರಕ್ಕೆ ಕೊಡುಗೆ ನೀಡಿದಂತಾಗುತ್ತದೆ.- ನಾ. ಕಾರಂತ ಪೆರಾಜೆ

ಕಾಡು ಬೆಳೆಸಲು ಅಡಿಕೆ ಪತ್ರಿಕೆ ಪ್ರೇರಣೆ

ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟಕುಸಿಯುತ್ತಿದ್ದಾಗ ತೋಟ ಗದ್ದೆಗಳಿಗೆ ನೀರುಣಿಸುವುದು ಕಷ್ಟವಾಗುತ್ತಿತ್ತು. ಆಗ ಅಡಿಕೆ ಪತ್ರಿಕೆ ಸದಾಶಿವ ಅವರಿಗೆ ಕಾಡು ಬೆಳೆಸಲು ಪ್ರೇರಣೆ ನೀಡಿತು. ‘ನೀರು ಉಳಿಸಿ ನೂರು ವಿಧಿ’ ಎಂಬ ಲೇಖನ ಇದಕ್ಕೆ ಕಾರಣ. ಈ ಲೇಖನ ಓದುತ್ತಿರುವಾಗ ದಿನೇ ದಿನೇ ಕಾಡು ಬೆಳೆಸುವ ಆಲೋಚನೆ ಮೂಡಿತು. ಇದಕ್ಕೆ ಪೂರಕವಾಗಿ ತಮ್ಮ ಜಮೀನಿನಲ್ಲೇ ಖಾಲಿ ಬಿದ್ದ ಜಾಗದಲ್ಲಿ ಮೊದಲಿಗೆ ಮಾನವ ನಿರ್ಮಿತ ಇಂಗು ಗುಂಡಿಗಳನ್ನು ಮಾಡಿದರು. ಎತ್ತರದ ಜಾಗದಿಂದ ತಗ್ಗು ಪ್ರದೇಶಕ್ಕೆ ಅಲ್ಲಲ್ಲಿ ಇಂಗು ಗುಂಡಿ ಮಾಡಿದರು. ಇದರಿಂದ ಗುಡ್ಡದಲ್ಲಿ ಮಣ್ಣಿನ ಸವಕಳಿ ತಡೆದು ಅಲ್ಲಲ್ಲಿ ಪಾಚಿ ಬೆಳೆಯಲಾರಂಭಿಸಿದವು.

ಪಾಳು ಭೂಮಿಯಲ್ಲಿ ಹೂವು ಬೆಳೆದ ಲಾಯರ್‌!

ಎಸೆದ ಬೀಜಗಳು ಹೆಮ್ಮರವಾಗಿ ಬೆಳೆದಿವೆ.

ಇಂಗು ಗುಂಡಿ ಮಾಡಿದ ಮೇಲೆ ಅಲ್ಲಲ್ಲಿ ಪಾಚಿ, ಹುಲ್ಲು ಬೆಳೆದವು. ಈ ಹುಲ್ಲುಗಳ ಮೇಲೆ ವೈವಿಧ್ಯಮಯವಾದ ಗಿಡಗಳನ್ನು ಸರ್ಕಾರಿ ನರ್ಸರಿಗಳಿಂದ ತಂದು ಅಲ್ಲಲ್ಲಿ ನೆಟ್ಟರು. ಜೊತೆಗೆ ಕಾಡಿನಲ್ಲಿ ಸಿಗುವ ವಿವಿಧ ಕಾಡು ಗಿಡಗಳ ಬೀಜಗಳನ್ನು ತಂದು ಎಸೆದರು. ಸದಾಶಿವ ಈ ಕೆಲಸ ಮಾಡುತ್ತಿದ್ದದ್ದು ಮಳೆಗಾಲದಲ್ಲಿ ಮಾತ್ರ. ಹೀಗೆ ಎಸೆದ ಬೀಜಗಳು ಮೊಳಕೆಯೊಡೆದು ಗಿಡಗಳಾಗಿ ಇಂದು ದೊಡ್ಡ ಮರಗಳಾಗಿ ನಿಂತಿವೆ. ಈ ಕಾಡಿನಲ್ಲಿ ಇಂದು ಹಲವು ರೀತಿಯ ಹಕ್ಕಿಗಳಿವೆ. ಹಕ್ಕಿಗಳು ತಂದು ಹಾಕುವ ಕಾಡು ಹಣ್ಣುಗಳ ಬೀಜಗಳಿಂದ ಹಲವು ಬಗೆಯ ಗಿಡಗಳು, ಮರಗಳು ಈ ಜಾಗದಲ್ಲಿ ಕಾಣಬಹುದು. ಏನಿಲ್ಲವೆಂದರೂ 1500ಕ್ಕೂ ಹೆಚ್ಚಿನ ವಿವಿಧ ಬಗೆಯ ಕಾಡು ಮರಗಳು ಸದಾಶಿವ ಅವರು ಬೆಳೆಸಿದ ದಟ್ಟಕಾಡಿನಲ್ಲಿ ಕಾಣಬಹುದು.

ಮಣ್ಣಿನಲ್ಲಿ ತೇವಾಂಶ ಹಿಡಿದಿಡುವ ಮರಗಳು

ಅರಣ್ಯ ಬೆಳೆಸಿದ ಕಾರಣದಿಂದ ಸದಾಶಿವ ಅವರ ಜಮೀನಿನಲ್ಲಿ ನೀರಿನ ಒರತೆ ಹೆಚ್ಚಾಗಿರುವ ಜೊತೆಗೆ, ಗುಡ್ಡ ಭಾಗದಲ್ಲಿ ಮಣ್ಣಿನ ಸವಕಳಿ ನಿಂತಿದೆ. ಮಳೆಗಾಲದಲ್ಲಿ ಮಣ್ಣು ಕೊಚ್ಚಿಕೊಂಡು ಹೋಗುವುದಿಲ್ಲ. ಅಲ್ಲದೆ ಕಾಡಿನಲ್ಲಿ ತರಗೆಲೆಗಳು ಬಿದ್ದು ಬೆಡ್‌ ನಿರ್ಮಾಣಗೊಂಡಿರುವುದರಿಂದ ನೀರು ಸರಾಗವಾಗಿ ಇಂಗುತ್ತಿದೆ. ತಗ್ಗು ಪ್ರದೇಶದಲ್ಲಿ ನೀರಿನ ಮಟ್ಟಹೆಚ್ಚಾಗಿದೆ. ಕಾಡಿನಲ್ಲಿ ನೀರಿನ ತೇವಾಂಶ ನಿರಂತರವಾಗಿರುವುದರಿಂದ ಮರದ ಬೇರುಗಳು ಎಲ್ಲೆಡೆ ಹರಡಿಕೊಂಡು ಮಣ್ಣು ಕುಸಿತಕ್ಕೂ ತಡೆಯೊಡ್ಡಿದೆ.

ಕೃಷಿಗೆ ಕೆರೆ ನೀರು

ಜಮೀನಿನ ಸುತ್ತ 200ಕ್ಕೂ ಅಧಿಕ ಬೋರ್‌ವೆಲ್‌ಗಳಿವೆಯಂತೆ. ಇದರಿಂದ ಅವರಿಗೆ ಯಾವುದೇ ತೊಂದರೆಯಾಗಿಲ್ಲ. ಕಳೆದು ಏಳೆಂಟು ವರ್ಷಗಳಿಂದ ಜಮೀನಿನಲ್ಲಿ ಸಾಕಷ್ಟುನೀರು ಸಿಗುತ್ತಿದೆ. ಆದರೂ ಕೃಷಿಗೆ ಅವರು ಕೆರೆಯ ನೀರನ್ನು ಸ್ಟ್ರಿಂಕ್ಲರ್‌ ಮೂಲಕ ಅಡಿಕೆ ತೋಟಗಳಿಗೆಲ್ಲ ಬಳಸುತ್ತಿದ್ದಾರೆ. ಇದರಿಂದ ನೀರಿನ ಸಮಸ್ಯೆ ಎಂದೂ ಕಾಡುತ್ತಿಲ್ಲ. 24*7 ನೀರು ಸಿಗುತ್ತಿದೆ. ಕೃಷಿ ಬಿಟ್ಟು ಬೇರೆ ಯಾವ ಕೆಲಸವಿಲ್ಲ. ಕೃಷಿಯಿಂದ ನೆಮ್ಮದಿ ಇದೆ. ಯಾವ ಸಾಲವೂ ಇಲ್ಲ. ಕಾಡು ಬೆಳೆಸಲು ಆರಂಭಿಸಿದಾಗಿನಿಂದ ಬೆಳೆ ನಷ್ಟಕಂಡುಬಂದಿಲ್ಲ ಎನ್ನುತ್ತಾರೆ ಸದಾಶಿವ ಅವರು.

ಬೇಕಾಬಿಟ್ಟಿ ನೆಟ್ಟ ಗಿಡದಿಂದ ವಾರಕ್ಕೆ 2000 ರು. ಆದಾಯ

ನೀರಿನ ಮೂಲ ಇರುವ ಕೃಷಿಕರು ತಮ್ಮ ಖಾಲಿ ಜಮೀನುಗಳನ್ನು ಹಾಗೆ ಬಿಟ್ಟು ಬಿಡದೆ ಅಲ್ಲಿ ಕಾಡು ಬೆಳೆಸಬೇಕು. ಗುಡ್ಡ ಪ್ರದೇಶಗಳಲ್ಲಿ ಅಸಾಂಪ್ರದಾಯಿಕ ಕೃಷಿ ಮಾಡಲೇಬಾರದು. ಅಲ್ಲಿ ಕಾಡು ಬೆಳೆಸಬೇಕು. ಇದರಿಂದಾಗಿ ಇರುವ ಕೃಷಿ ಭೂಮಿಯನ್ನು ಉತ್ತಮ ಪಡಿಸಲು ಸಾಧ್ಯವಿದೆ. ನೀರಾವರಿ ವ್ಯವಸ್ಥೆ ಇಲ್ಲದ ರೈತರು ಅಂತಹ ಜಾಗದಲ್ಲಿ ರಬ್ಬರ್‌ ಅಥವಾ ಗೇರು ಗಿಡ ಬೆಳೆಸುವುದು ತಪ್ಪಲ್ಲ. ಇದರೊಂದಿಗೆ ಪ್ರತಿಯೊಬ್ಬ ಕೃಷಿಕರೂ ತಮ್ಮ ಜಮೀನಿನಲ್ಲಿ ಮೂರನೇ ಒಂದು ಭಾಗ ಕಾಡು ಬೆಳೆಸಬೇಕು. ಇದರಿಂದ ಭೂಮಿಗೆ ಸೂರ್ಯನ ಕಿರಣ ಹೆಚ್ಚಾಗಿ ಬೀಳದೆ ಭೂಮಿಯನ್ನು ತಂಪಾಗಿರುವಂತೆ ನೋಡಿಕೊಳ್ಳುತ್ತೆ. ಸಣ್ಣ ಸ್ಥಳದಲ್ಲಿದ್ದವರು ಮಾವು, ಹಲಸು, ಇನ್ನಿತರೆ ಹಣ್ಣು ಹಂಪಲುಗಳ ಗಿಡಗಳನ್ನಾದರೂ ಬೆಳೆಸಿದರೆ ಮಾತ್ರ ನಮ್ಮ ಪರಿಸರ ಸಮತೋಲನದೊಂದಿಗೆ ಉಳಿಯಲು ಸಾಧ್ಯವಿದೆ.-ಎ.ಪಿ.ಸದಾಶಿವ ಮರಿಕೆ, ಕೃಷಿಕ

 

Follow Us:
Download App:
  • android
  • ios