ಸುಮ್ ಸುಮ್ನೆ BPL ಕಾರ್ಡ್ ಇಡ್ಕೊಂಡ್ರೆ ಕ್ರಿಮಿನಲ್ ಕೇಸ್ ಪಕ್ಕಾ..!
ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಬೇಕು ಎಂದು ಹಲವು ಬಾರಿ ಎಚ್ಚರಿಕೆ ನೀಡಿದ್ದು, ಕಾರ್ಡ್ ಹಿಂದಿರುಗಿಸಲು ಗಡುವನ್ನೂ ನೀಡಲಾಗಿದೆ. ಈ ನಂತರದಲ್ಲಿಯೂ ಎಚ್ಚೆತ್ತು ಅನರ್ಹ ಫಲಾನುಭವಿಗಳು ಕಾಡ್ ಹಿಂದಿರುಗಿಸದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಮಂಗಳೂರು(ಅ.17): ಬಡ ಕುಟುಂಬಗಳಿಗೆ ವಿತರಿಸಲಾಗುತ್ತಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸುಳ್ಳು ಮಾಹಿತಿ ನೀಡಿ ಕಾರ್ಡ್ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವವರ ವಿರುದ್ಧ ಐಪಿಸಿ 420 ಅಡಿ ಕ್ರಿಮಿನಲ್ ಕೇಸು ದಾಖಲಿಸಲು ರಾಜ್ಯ ಸರ್ಕಾರದ ಕಂದಾಯ ಪ್ರಧಾನ ಕಾರ್ಯದರ್ಶಿ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಸೂಚಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ.
ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಿ
ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಪಡಿತರ ಕಾರ್ಡ್ ಪಡೆದಿರುವುದು ಅಕ್ಷಮ್ಯ ವಂಚನೆ. ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಿಂದಿರುಗಿಸಲು ಈಗಾಗಲೇ ಗಡುವು ನೀಡಲಾಗಿದೆ. ಆದರೂ ಮತ್ತೊಮ್ಮೆ ಅವಕಾಶ ನೀಡಿ ಕೂಡಲೇ ಅನರ್ಹರು ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಸಂಬಂಧ ಪಟ್ಟಕಚೇರಿಗೆ ಹಿಂದಿರುಗಿಸಬೇಕು. ಇಲ್ಲದಿದ್ದರೆ ಅಂತಹ ಕುಟುಂಬಗಳನ್ನು ಪತ್ತೆ ಮಾಡಿ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಅವರು ಆಹಾರ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಪ್ರವಾಹ ಪುನರ್ವಸತಿ:
ಇದೇ ಸಂದರ್ಭ ಪ್ರವಾಹ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿ, ಬೆಳ್ತಂಗಡಿ ತಾಲೂಕಿನ ಕೆಲವಡೆ ಸಂತ್ರಸ್ತರ ಮನೆ ಪುನರ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ತಕರಾರು ಎತ್ತಿರುವುದಕ್ಕೆ ಅಸಮಾಧಾನ ಸೂಚಿಸಿದರು. ಸಂತ್ರಸ್ತರ ಬದುಕು ಪುನರ್ ನಿರ್ಮಾಣದಲ್ಲಿ ಸರ್ಕಾರ ನಿರಂತರವಾಗಿ ತೊಡಗಿಸಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. ಪ್ರವಾಹ ಹಾವಳಿಯ ಫಲಾನುಭವಿಗಳಿಗೆ ಆದಷ್ಟುಬೇಗ ಪರಿಹಾರ ದೊರಕುವಂತೆ ಕಾರ್ಯ ನಿರ್ವಹಿಸಬೇಕು ಎಂದಿದ್ದಾರೆ.
ತ್ವರಿತ ಪಿಂಚಣೆಗೆ ಸೂಚನೆ:
ಪಿಂಚಣಿದಾರರಿಗೆ ತಾಂತ್ರಿಕ ಸಮಸ್ಯೆಗಳಿಂದ ಪಿಂಚಣಿ ಸರಿಯಾಗಿ ದೊರಕದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಇವುಗಳನ್ನು ತ್ವರಿತವಾಗಿ ಪರಿಹರಿಸಿ ಕ್ಲಪ್ತವಾಗಿ ಪಿಂಚಣಿ ದೊರಕಿಸಿಕೊಡಲು ಮಂಜುನಾಥ್ ಪ್ರಸಾದ್ ತಿಳಿಸಿದರು. ಪ್ರತಿ ಗ್ರಾಮದಲ್ಲಿ ರುದ್ರಭೂಮಿ ಕಡ್ಡಾಯವಾಗಿ ಇರಬೇಕು, ಇಲ್ಲದ್ದಿದ್ದ ಪಕ್ಷದಲ್ಲಿ ಸಂಬಂಧಪಟ್ಟಅಧಿಕಾರಿಗಳು ಸೂಕ್ತ ಜಾಗವನ್ನು ಗುರುತಿಸಿ ರುದ್ರಭೂಮಿ ನಿರ್ಮಾಣ ಮಾಡುವಂತೆ ಆದೇಶ ನೀಡಿದರು. ಕೃಷಿ ಹಾಗೂ ತೋಟಗಾರಿಕಾ ಬೆಳೆಹಾನಿಗೊಂಡವರಿಗೆ ಸಕಾಲಕ್ಕೆ ವಿಮಾ ಹಣ ದೊರಕದಿರುವ ಬಗ್ಗೆ ವಿಮಾ ಕಂಪೆನಿಗಳ ಅಧಿಕಾರಿಗಳೊಂದಿಗೆ ಕೂಡಲೇ ಚರ್ಚಿಸಲು ಅವರು ಸೂಚಿಸಿದ್ದಾರೆ.
ಭಾರಿ ಗಾಳಿ ಮಳೆ: 500ಕ್ಕೂ ಅಧಿಕ ಅಡಕೆ ಮರ ಧ್ವಂಸ
ಮಂದಾರ ಸಂತ್ರಸ್ತರ ಪುನರ್ವಸತಿ: ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ಕುಸಿತದಿಂದ ಮಂದಾರ ಪ್ರದೇಶದ ಸಂತ್ರಸ್ತರ ಪುನರ್ವಸತಿಗೆ ಸುಮಾರು 20 ಕೋಟಿ ರು. ಅಗತ್ಯವಿದೆ. ರಾಜ್ಯ ಸರ್ಕಾರದಿಂದ ನೇಮಕಗೊಂಡ ತಜ್ಞರ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ಬಯೋ ಮೈನಿಂಗ್ ಮೂಲಕ ಅಲ್ಲಿನ ತ್ಯಾಜ್ಯ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಇದಕ್ಕಾಗಿ ಅಂದಾಜು 50 ಕೋಟಿ ರು. ಅಗತ್ಯವಿದೆ ಎಂದಿದ್ದಾರೆ.
ಫ್ಲೈಟ್ ದರದಲ್ಲಿ ಭಾರೀ ವ್ಯತ್ಯಾಸ, ಕಣ್ಣೂರು ಏರ್‌ಪೋರ್ಟ್‌ನತ್ತ ಕರಾವಳಿಗರ ಚಿತ್ತ
ತುಂಬೆ ವೆಂಟೆಡ್ ಡ್ಯಾಂ ಹೊಂದಿಕೊಂಡ ನದಿ ಬದಿಯ ತಡೆಗೋಡೆ ಇತ್ತೀಚೆಗೆ ಪ್ರವಾಹದಲ್ಲಿ ಕುಸಿದುಬಿದ್ದಿದ್ದು, ಇದರ ಪುನರ್ ನಿರ್ಮಾಣಕ್ಕೆ 8 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆರ್. ಸೆಲ್ವಮಣಿ, ತರಬೇತಿ ಐಎಎಸ್ ಅಧಿಕಾರಿ ರಾಹುಲ್ ಸಿಂಧ್ಯಾ, ಡಿಸಿಪಿ ಅರುಣಾಂಶು ಗಿರಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.
ಮಂಗಳೂರು: ಜಿಲ್ಲಾದ್ಯಂತ ಬಿಜೆಪಿ ಧ್ವಜ ರಹಿತ ಪಾದಯಾತ್ರೆ.