ಮಂಗಳೂರು: ಸಾಗರ ಕಣ್ಗಾವಲಿಗೆ ಬಂತು ‘ವರಾಹ’ ಬಲ
ಮಂಗಳೂರು ಸಗಾರ ಭದ್ರತೆಗೆ ಈಗ ಹೆಚ್ಚಿನ ಬಲ ಬಂದಿದೆ. ಸಾಗರದಾಚೆಯಿಂದ ಒಳನುಸುಳುವ ದುಷ್ಕರ್ಮಿಗಳ ಮೇಲೆ ಕಣ್ಗಾವಲು ಇರಿಸಲು ‘ವರಾಹ’ ಹಡಗು ಈಗ ಕರಾವಳಿ ತಟರಕ್ಷಣಾ ಪಡೆಗೆ ಸೇರ್ಪಡೆಯಾಗಿದೆ. ಇದರ ವಿಶೇಷತೆ ಏನು, ಸಮಾರ್ಥ್ಯವೆಷ್ಟು ಎಂಬ ಇಂಟ್ರೆಸ್ಟಿಂಗ್ ಮಾಹಿತಿಗಾಗಿ ಈ ಸುದ್ದಿ ಓದಿ.
ಮಂಗಳೂರು(ಅ.16): ಸಾಗರದಾಚೆಯಿಂದ ಒಳನುಸುಳುವ ದುಷ್ಕರ್ಮಿಗಳ ಮೇಲೆ ಕಣ್ಗಾವಲು ಇರಿಸಲು, ದೇಶದ ಭದ್ರತೆಗಾಗಿ ಅತ್ಯಾಧುನಿಕ ವ್ಯವಸ್ಥೆಗಳನ್ನೊಳಗೊಂಡ ‘ವರಾಹ’ ಹಡಗು ಈಗ ಕರಾವಳಿ ತಟರಕ್ಷಣಾ ಪಡೆಗೆ ಸೇರ್ಪಡೆಯಾಗಿದ್ದು, ಕೋಸ್ಟ್‌ಗಾರ್ಡ್‌ನ ಬಲ ಇನ್ನಷ್ಟುಹೆಚ್ಚಿದೆ.
ಕೋಸ್ಟ್‌ಗಾರ್ಡ್‌ಗೆ ನಿಯೋಜಿಸಲಾದ ಈ ಹಡಗು ಚೆನ್ನೈಯಿಂದ ಅ.4ರಂದು ಪ್ರಯಾಣ ಆರಂಭಿಸಿ ಅ.7ರಂದು ಕೊಚ್ಚಿಗೆ ತಲುಪಿತ್ತು. ಅಲ್ಲಿಂದ ನಾಲ್ಕು ದಿನಗಳ ಕಾಲ ಗಸ್ತಿನ ಬಳಿಕ ಮಂಗಳವಾರ ಮಂಗಳೂರು ಹೊರವಲಯದ ನವಮಂಗಳೂರು ಬಂದರಿಗೆ ಆಗಮಿಸಿದೆ. ‘ವರಾಹ’ಕ್ಕೆ ಕೋಸ್ಟ್‌ಗಾರ್ಡ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿ ಬ್ಯಾಂಡ್ ವಾದ್ಯಗಳೊಂದಿಗೆ ಸ್ವಾಗತ ಕೋರಿದರು.
ಅತ್ಯಾಧುನಿಕ ತಂತ್ರಜ್ಞಾನ:
ನೂತನವಾಗಿ ನಿರ್ಮಿಸಲಾದ ಈ ಹಡಗು ಸಮುದ್ರ ಮಾರ್ಗದಲ್ಲಿ ನಡೆಯುವ ಕಳ್ಳಸಾಗಾಣಿಕೆ, ತೈಲ ಸೋರಿಕೆ, ತಪಾಸಣೆ ಹಾಗೂ ಭದ್ರತಾ ವಿಷಯಕ್ಕೆ ಸಂಬಂಧಿಸಿ ತೀವ್ರ ಕಣ್ಗಾವಲು ಇರಿಸಲಿದೆ. 30 ಎಂಎಂ ಗನ್, 12.7 ಎಂಎಂ ಗನ್, ಅತ್ಯಾಧುನಿಕ ರಾಡಾರ್, ಸೆನ್ಸಾರ್, ಹೈಸ್ಪೀಡ್ ಬೋಟ್‌ಗಳನ್ನು ಇದು ಒಳಗೊಂಡಿದೆ. ತುರ್ತು ಕಾರ್ಯಾಚರಣೆ ಅಗತ್ಯವಿರುವ ಸಂದರ್ಭ ಎರಡು ಎಂಜಿನ್‌ಗಳ ಹೆಲಿಕಾಪ್ಟರ್‌ಗಳನ್ನೂ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ಹಡಗು ಹೊಂದಿದೆ. 14 ಅಧಿಕಾರಿಗಳು ಹಾಗೂ 89 ಸಿಬ್ಬಂದಿ ಈ ಹಡಗಿನಲ್ಲಿ ಕಾರ್ಯಾಚರಣೆ ಕೈಗೊಳ್ಳಲಿದ್ದಾರೆ.
ಕಿರಿದಾದ ಕಾಲುವೆಯಲ್ಲಿ ಬೃಹತ್ ಹಡಗು: ನೋಡೊಮ್ಮೆ ಮಾನವನ ಬುದ್ಧಿಮತ್ತೆಯ ಸೊಬಗು!
ಗಂಟೆಗೆ ಗರಿಷ್ಠ 26 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ವರಾಹ ಹಡಗು ಹೊಂದಿದ್ದು, ಎರಡು 9100 ಕಿಲೋವ್ಯಾಟ್ ಡೀಸೆಲ್ ಎಂಜಿನ್‌ಗಳನ್ನು ಒಳಗೊಂಡಿದೆ. ಹಡಗಿನ ಒಟ್ಟು ಭಾರ 2100 ಟನ್. ಒಮ್ಮೆ ಈ ಹಡಗು ಪ್ರಯಾಣ ಆರಂಭಿಸಿದರೆ ಸಮುದ್ರದಲ್ಲಿ 20 ದಿನಗಳ ಕಾಲ ಸುಮಾರು 5 ಸಾವಿರ ನಾಟಿಕಲ್ ಮೈಲುಗಳನ್ನು ಕ್ರಮಿಸಬಲ್ಲದು.
ಪಶ್ಚಿಮ ಕರಾವಳಿಗೆ ಭದ್ರತೆ:
ಈ ಸಂದರ್ಭ ಮಾತನಾಡಿದ ಕೋಸ್ಟ್ ಗಾರ್ಡ್‌ನ ಕಮಾಂಡರ್, ಡಿಐಜಿ ಎಸ್.ಎಸ್. ದಸೀಲ, ನವ ಮಂಗಳೂರು ಬಂದರನ್ನು ಕೇಂದ್ರವಾಗಿಸಿಕೊಂಡು ವರಾಹ ಹಡಗು ಕಾರ್ಯಾಚರಿಸಲಿದೆ. ವಿಶಾಲವಾದ ಪಶ್ಚಿಮ ಕರಾವಳಿಯ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ಲಕ್ಷದ್ವೀಪಗಳ ರಕ್ಷಣಾ ಕಾರ್ಯದಲ್ಲಿಯೂ ತನ್ನನ್ನು ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದರು.
ಕಾರವಾರಕ್ಕೆ ಬಂದಿದೆ ಸಂಶೋಧನಾ ಹಡಗು: ಇದರ ವಿಶೇಷತೆ ಏನು ಗೊತ್ತಾ
ನೂತನ ಹಡಗು ಮಂಗಳೂರಿಗೆ ಆಗಮಿಸುವ ವೇಳೆ ಹಡಗಿನ ಡೆಪ್ಯುಟಿ ಕಮಾಂಡೆಂಟ್ ಸತೀಶ್ ಕುಮಾರ್, ಕೋಸ್ಟ್‌ಗಾರ್ಡ್‌ನ ಹಿರಿಯ ಅಧಿಕಾರಿಗಳಾದ ರಾಜ್ ಕಮಲ್ ಸಿನ್ಹಾ, ಲಕ್ಷ್ಮೇಕಾಂತ್ ಗಾಜ್‌ಭಿಯೆ, ಸಿಐಎಸ್‌ಎಫ್‌ನ ಅಧಿಕಾರಿ ಅಶುತೋಷ್ ಗೌರ್ ಇದ್ದರು.
ವರಾಹ ವೈಶಿಷ್ಟ್ಯಗಳು
- ಕೋಸ್ಟ್‌ಗಾರ್ಡ್‌ನ ಬಹುತೇಕ ಹಡಗುಗಳು ಸಾಮಾನ್ಯ ಕಾಗದದ ಚಾರ್ಟ್ ಹೊಂದಿದ್ದರೆ, ವರಾಹ ಹಡಗು ಎಲೆಕ್ಟ್ರಾನಿಕ್ ಚಾರ್ಟ್ ಡಿಸ್‌ಪ್ಲೇ ವ್ಯವಸ್ಥೆಯೊಂದಿಗೆ ಕಾರಿನಂತಹ ವೀಲಿಂಗ್ ವ್ಯವಸ್ಥೆಯನ್ನು ಕೂಡ ಹೊಂದಿದೆ.
- ಹಡಗಿನ ಎರಡೂ ಬದಿಗಳಿಂದಲೂ ಕಂಟ್ರೋಲಿಂಗ್ ಮಾಡಬಹುದಾಗಿದೆ.
- ಸಮುದ್ರದಲ್ಲಿರುವ ಬೇರೆ ಹಡಗುಗಳಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದರೆ ತುರ್ತು ಕಾರ್ಯಾಚರಣೆಗೆ ಬಾಹ್ಯ ಅಗ್ನಿ ಶಾಮಕ ವ್ಯವಸ್ಥೆ ಇದೆ.
- 20 ದಿನಗಳ ಕಾಲ ಈ ಹಡಗು ಸಮುದ್ರದಲ್ಲಿ ನಿರಂತರವಾಗಿ ಸಂಚರಿಸಬಲ್ಲದು. ಅಷ್ಟುದಿನಗಳ ಅಗತ್ಯವಾದ ಇಂಧನ ಹಾಗೂ ಆಹಾರ ಸಾಮಗ್ರಿಗಳನ್ನು ಈ ಹಡಗು ಹೊಂದಿರಲಿದೆ.
ಮಂಗಳೂರು: ಅಪೂರ್ವ ತುಳು ಶಾಸನ ಪತ್ತೆ..