ಅಥೆನ್ಸ್(ಅ.15): ಪ್ರಕೃತಿಯನ್ನು ಗೆಲ್ಲವುದು ಮಾನವನ ಮೂಲ ಹಠ. ಸಹಸ್ರಾರು ವರ್ಷಗಳಿಂದ ಪ್ರಕೃತಿಯ ಮೇಲೆ ಹತೋಟಿ ಸಾಧಿಸಲು ಮಾನವ ಪ್ರಯತ್ನಿಸುತ್ತಲೇ ಬಂದಿದ್ದಾನೆ. ಆಕಾಶ ಸೀಳುವ, ಭುಮಿ ಬಗೆಯುವ, ಸಮುದ್ರದ ಆಳಕ್ಕಿಳಿದು ನೋಡುವ ಮಾನವನ ಹಂಬಲಕ್ಕೆ ಮಿತಿ ಎಂಬುದೇ ಇಲ್ಲ.

ಪ್ರಕೃತಿ-ಮಾನವನ ನಡುವಿನ ಈ ಸಂಘರ್ಷದಲ್ಲಿ ಕೆಲವೊಮ್ಮೆ ಮಾನವನ ಕೈ ಮೇಲಾದರೆ, ಇನ್ನೂ ಕೆಲವೊಮ್ಮೆ ಪ್ರಕೃತಿ ಮಾನವನ ಕೈ(ಸೊಕ್ಕು) ಮುರಿದಿರುತ್ತದೆ.

ಆದರೆ ಆಧುನಿಕ ಮಾನವ ತನ್ನ ಯಾಂತ್ರಿಕ ಬುದ್ಧಿಮತ್ತೆಯಿಂದ ಪ್ರಕೃತಿ ಮೇಲೆ ಹತೋಟಿ ಸಾಧಿಸಲು ಯಶಸ್ವಿಯಾಗಿದ್ದು, ಆಗಸ, ಭೂಮಿ, ಸಮುದ್ರಗಳ ಮೇಲೆ ವಿಜಯ ಸಾಧಿಸಿದ್ದಾನೆ.

ತನ್ನ ತಾಂತ್ರಿಕ ಮತ್ತು ಯಾಂತ್ರಿಕ ಕೌಶಲ್ಯದಿಂದಲೆ ಪ್ರಕೃತಿಯೊಡ್ಡುವ ಸವಾಲುಗಳನ್ನು ಮಾನವ ಯಶಸ್ವಿಯಾಗಿ ಎದುರಿಸಿದ್ದಾನೆ. ಇದಕ್ಕೆ ಉದಾಹರಣೆ ಎಂಬಂತೆ ಗ್ರೀಸ್‌ನಲ್ಲಿರುವ ವಿಶ್ವದ ಅತ್ಯಂತ ಕಡಿದಾದ ಕಾಲುವೆಯಲ್ಲಿ ಬೃಹತ್ ಪ್ರಯಾಣಿಕ ಹಡಗೊಂದು ಯಶಸ್ವಿಯಾಗಿ ಪ್ರಯಾಣಿಸಿರುವುದು.

ಹೌದು, ಗ್ರೀಸ್‌ನಲ್ಲಿರುವ ಅತ್ಯಂತ ಕಿರಿದಾದ ಕೊರಿಂತ್ ಕಾಲುವೆಯನ್ನು ಫ್ರೆಡ್ ಓಲ್ಸೆನ್ ಕ್ರೂಸ್ ಲೈನ್‌ ಕಂಪನಿಗೆ ಸೇರಿದ  ಬ್ರೈಮರ್ ಕ್ರೂಸ್ ಲೈನರ್ ಪ್ರಯಾಣಿಕ ಹಡಗೊಂದು ಅತ್ಯಂತ ಯಶಸ್ವಿಯಾಗಿ ಹಾದು ಹೋಗಿದೆ.

ಪೆಲೊಪೊನಿಸಸ್ ಪ್ರದೇಶವನ್ನು ಗ್ರೀಸ್‌ನಿಂದ ಬೇರ್ಪಡಿಸುವ ಸೆರೊನಿಕ್ ಗಲ್ಫ್ ಪ್ರದೇಶವನ್ನು ಕೊರಿಂತ್ ಗಲ್ಫ್ ಪ್ರದೇಶದೊಂದಿಗೆ ಬೆಸೆಯುವ ಈ ಕೊರಿಂತ್ ಕಾಲುವೆ ಬರೋಬ್ಬರಿ 6.3 ಕಿ.ಮೀ ಉದ್ದವಿದ್ದು, ಇದರ ಅತ್ಯಂತ ಕಿರಿದಾದ ಸಾಗುಹಾದಿ ಕೇವಲ 24 ಮೀಟರ್ ಅಗಲವಾಗಿದೆ.

ಇಷ್ಟು ಕಿರಿದಾದ ಪ್ರದೇಶದಲ್ಲಿ ಬ್ರೈಮರ್ ಕ್ರೂಸರ್ ಇದೀಗ ಹಾದು ಹೋಗಿದ್ದು, ಕೊರಿಂತ್ ಕಾಲುವೆಯಲ್ಲಿ ಹಾದು ಹೋದ ವಿಶ್ವದ ಮೊದಲ ಬೃಹತ್ ಪರಯಾಣಿಕ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂದಹಾಗೆ ಬ್ರೈಮರ್ ಕ್ರೂಸ್ ಕೊರಿಂತ್ ಕಾಳುವೆಯಲ್ಲಿ ಸಾಗುವಾಗ ಹಡಗಿನಲ್ಲಿ ಸುಮಾರು 1,200 ಕ್ಕೂ ಹೆಚ್ಚು ಪ್ರಯಾಣಿಕರಿದ್ದುದು ವಿಶೇಷ. ಕಂಪನಿ ತನ್ನ ಹಡಗು ಕೊರಿಂತ್ ಕಾಲುವೆಯನ್ನು ಹಾದು ಹೋಗುವ ವಿಡಿಯೋ ಬಿಡುಗಡೆ ಮಾಡಿದ್ದು, ಇದನ್ನು ಸುಮಾರು ಏಳು ಲಕ್ಷಕ್ಕು ಆಧಿಕ ಜನ ವಿಕ್ಷೀಸಿದ್ದಾರೆ.