ಕಾರವಾರ(ಸೆ.29): ಇಲ್ಲಿನ ವಾಣಿಜ್ಯ ಬಂದರಿಗೆ ಕೊಚ್ಚಿಯ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಾಗರ ಸಂಪದ ಹಡಗು ಶನಿವಾರ ಬಂದಿದ್ದು, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಕಡಲ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. 

ಭಾನುವಾರ ಮಧ್ಯಾಹ್ನ 2  ಗಂಟೆ ವರೆಗೆ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಡಗು ವೀಕ್ಷಣೆಗೆ, ಸ್ವಚ್ಛತೆಯ ಬಗ್ಗೆ ಮಾಹಿತಿ ಪಡೆಯಲು ಅವಕಾಶವಿದೆ. ಈ ಸಾಗರ ಸಂಪದ ಹಡಗು ಕೊಚ್ಚಿಯ ಭೂ ವಿಜ್ಞಾನ ಮಂತ್ರಾಲಯಕ್ಕೆ ಸೇರಿದ್ದು, 1984 ರಲ್ಲಿ ಡೆನ್ಮಾರ್ಕ್‌ನಿಂದ ಖರೀದಿಸಲಾಗಿದೆ. ಮೀನುಗಾರಿಕೆ, ಕಡಲ ವಿಜ್ಞಾನದ ಅಧ್ಯಯನ, ಸಂಶೋಧನೆ ಇದರಲ್ಲಿ ನಡೆಯುತ್ತವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಕಡಲ ಒಳಗೆ 6000ಮೀ. ಆಳಕ್ಕೆ ಹೋಗುವ ಯಂತ್ರೋಪಕರಣಗಳನ್ನು ಹೊಂದಲಾಗಿದೆ. ಸರ್ಕಾರ ನಿರ್ದಿಷ್ಟವಾಗಿ ನೀಡುವ ಯೋಜನೆಗಳಿಗೆ ಬೇಕಾದ ಮಾಹಿತಿಯನ್ನು ಕಲೆಹಾಕಿ ಸಂಶೋಧನೆ ಮಾಡಿ ಸರ್ಕಾರಕ್ಕೆ ಒಪ್ಪಿಸುವ ಕೆಲಸ ಇಲ್ಲಿನ ವಿಜ್ಞಾನಿಗಳು ಮಾಡುತ್ತಾರೆ. 

ಇದರ ಹೊರತಾಗಿ ಶಿಪ್ಪಿಂಗ್ ಕಾರ್ಪೊರೇಷನ್ ಅಧಿಕಾರಿಗಳು ಹಾಗೂ ನಾವಿಕರು ಕೂಡಾ ಇರುತ್ತಾರೆ. ಅರಗಾದ ಕೇಂದ್ರೀಯ ವಿದ್ಯಾಲಯದ ಹಾಗೂ ನಗರದ ಮರೀನ್ ಬಯೋಲಜಿ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿ ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿದುಕೊಂಡರು. ಜತೆಗೆ ಹಡಗು ಕಾರ್ಯನಿರ್ವಹಿಸುವ ಕಾರ್ಯವೈಖರಿ ಬಗ್ಗೆ ಕೂಡಾ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.