Asianet Suvarna News Asianet Suvarna News

ನೆರೆ ಸಂತ್ರಸ್ತರ ಬದುಕು ಕಟ್ಟಿದ ಬದುಕು ಕಟ್ಟೋಣ ಟೀಂ: ಬೆಳ್ತಂಗಡಿಯಲ್ಲಿ 12 ಮನೆ ಗೃಹ ಪ್ರವೇಶ

  • 2019ರಲ್ಲಿ ಪ್ರವಾಹದಿಂದಾಗಿ ಮನೆ ಕಳೆದುಕೊಂಡಿದ್ದ ಹಲವು ಕುಟುಂಬಗಳು
  •  ಬದುಕು ಕಟ್ಟೋಣ ತಂಡದಿಂದ ಪ್ರವಾಸ ಸಂತ್ರಸ್ತರಿಗೆ ಮನೆ ನಿರ್ಮಾಣ
  • ಮತ್ತೆ ಹೊಸತಾಗಿ ಎದ್ದು ನಿಂತ ಕೊಳಂಬೆ ಗ್ರಾಮ
Baduku kattona Team gave life to flood victims In Beltangadi akb
Author
Beltangadi, First Published May 8, 2022, 5:19 PM IST | Last Updated May 8, 2022, 5:19 PM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು: 2019ರ ಆ.9 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿ‌ನ ಜನರಿಗೆ ಎಂದೂ ಮರೆಯದ ದಿನ. ದಿಢೀರನೆ ಅಪ್ಪಳಿಸಿದ ಪ್ರವಾಹ ಬೆಳ್ತಂಗಡಿಯ ಹಲವು ಗ್ರಾಮಗಳನ್ಮ ಮುಳುಗಿಸಿ ಬಿಟ್ಟಿತ್ತು.‌ ಶಾಂತವಾಗಿ ಹರೀತಾ ಇದ್ದ ನದಿಗಳು ಅಬ್ಬರಿಸಿದ ಪರಿಣಾಮ ನೂರಾರು ಜನರ ಬದುಕು ನೀರು ಪಾಲಾಯ್ತು. ಯಾವ ಸಾಕ಼್ಯಗಳೂ ಉಳಿಯದಂತೆ ಅಕ್ಷರಶಃ ನರಕವಾಗಿದ್ದ ಬೆಳ್ತಂಗಡಿಯ(Beltangadi) ಕೊಳಂಬೆ (Kolambe) ಗ್ರಾಮದಲ್ಲಿ ಪ್ರವಾಹದ ಮೂರು ವರ್ಷದ ಬಳಿಕ ಪವಾಡವೊಂದು ನಡೆದಿದೆ. ಮನೆ, ಕೃಷಿ ಭೂಮಿ ಕಳೆದುಕೊಂಡು ಅನಾಥವಾಗಿದ್ದ ಜನರ ಬದುಕನ್ನ ಮತ್ತೆ ಆ ಯುವಕರ ತಂಡ ಕಟ್ಟಿ ಕೊಟ್ಟಿದೆ. ಬೆಳ್ತಂಗಡಿಯ ಉಜಿರೆಯ 'ಬದುಕು ಕಟ್ಟೋಣ' ತಂಡ ಪ್ರವಾಹಕ್ಕೆ ತತ್ತರಿಸಿದ್ದ ಬೆಳ್ತಂಗಡಿಯ ಕೊಳಂಬೆ ಗ್ರಾಮದಲ್ಲಿ 12 ಮನೆಗಳನ್ನ ಮತ್ತೆ ನಿರ್ಮಿಸಿ ಇಂದು ಶಾಸ್ತ್ರೋಕ್ತವಾಗಿ ಗೃಹ ಪ್ರವೇಶ ಮಾಡಿದೆ. 

ನೆರೆಗೆ ತತ್ತರಿಸಿದ್ದ ಕೊಳಂಬೆ ಗ್ರಾಮ ಮತ್ತೆ ಹೊಸತಾಗಿ ಎದ್ದು ನಿಂತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ (Veerendra Heggade) ಆಶೀರ್ವಾದದೊಂದಿಗೆ ಇಂದು ಮನೆಗಳ ಉದ್ಘಾಟನೆಯನ್ನು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti sulibele) ನೆರವೇರಿಸಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ (Harish Poonja), ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪಸಿಂಹ ನಾಯಕ್ (Pratap Simha Nayak) ಸೇರಿ ಹಲವು ಗಣ್ಯರು ಹಾಗೂ ದಾನಿಗಳ ಉಪಸ್ಥಿತಿಯಲ್ಲಿ ಮನೆ ಶಾಶ್ತ್ರೋಕ್ತವಾಗಿ ಗೃಹ ಪ್ರವೇಶವಾಗಿದೆ. ಹೊಸ ಮನೆಗಳಿಗೆ ಲಹರಿ, ಪ್ರೇರಣಾ, ಓಂಕಾರ, ಚಂದನ, ಸಂಪಿಗೆ, ಕನಸು, ಇಂಚರ, ಐಶ್ವರ್ಯ, ಗೋಕುಲ, ನಕ್ಷತ್ರ, ಭ್ರಾಮರಿ ಮತ್ತು ಸಮೃದ್ಧಿ ಎಂದು ನಾಮಕರಣ ಮಾಡಲಾಗಿದೆ. ರಾಜಪ್ಪ ಪೂಜಾರಿ, ಕಮಲಾ, ಪ್ರೇಮಾ, ನಿಶಾಂತ್, ದಿನೇಶ್, ವೇದಾವತಿ, ಯಶೋದಾ, ಪೂವಪ್ಪ ಗೌಡ, ಸಂಜೀವ ಗೌಡ, ಕಲ್ಯಾಣಿ, ಗಣೇಶ ಗೌಡ ಮತ್ತು ಬೊಮ್ಮಕ್ಕ ಅವರು ನೂತನ ಮನೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಎಜುಕೇಶನ್ ಎಕ್ಸ್‌ಪೋ: ಸೂಲಿಬೆಲೆ ಮಾತು ಕೇಳಲು ಮುಗಿಬಿದ್ದ ವಿದ್ಯಾರ್ಥಿಗಳು

'ಬದುಕು ಕಟ್ಟೋಣ' ತಂಡದ ಮಾನವೀಯ ಕಾರ್ಯ

2019ರ ಆ.9 ರ ಭೀಕರ ಪ್ರವಾಹಕ್ಕೆ ಮೃತ್ಯುಂಜಯ ನದಿ ಉಕ್ಕಿ ಹರಿದ ಪರಿಣಾಮ ಚಾರ್ಮಾಡಿ ಕೊಳಂಬೆಯ ಕೆಲ ಮನೆಗಳನ್ನು ಸಂಪೂರ್ಣ ಜಲಸಮಾಧಿ ಮಾಡಿತ್ತು. ಅಕ್ಕಪಕ್ಕದ 20 ಮನೆಗಳು ಮರಳು ದಿಬ್ಬದೊಳಕ್ಕೆ ಹುದುಗಿದ್ದವು. ಕೃಷಿ ಭೂಮಿ ಮರಳು ಭೂಮಿಯಂತೆ ಕಾಣುತ್ತಿತ್ತು. ಕೊಳಂಬೆ ನಿವಾಸಿಗಳು ಊರೇ ಬಿಟ್ಟು ಹೋಗಿವ ಸ್ಥಿತಿ ನಿರ್ಮಾಣವಾಗಿತ್ತು. ಆಗ ಉಜಿರೆಯ ಬದುಕು ಕಟ್ಟೋಣ ತಂಡ ಕೊಳಂಬೆಯನ್ನು‌ ಮತ್ತೆ ಕಟ್ಟುವ ಕಾರ್ಯಕ್ಕೆ ಮುನ್ನುಡಿ ಬರೆಯಿತು. ಉಜಿರೆಯ ಉದ್ಯಮಿಗಳಾದ ಮೋಹನ್‌ ಕುಮಾರ್‌ (Mohan Kumar)  ಹಾಗೂ ರಾಜೇಶ್‌ ಪೈ (Rajesh Pai) ನೇತೃತ್ವದಲ್ಲಿ ನೂರಕ್ಕೂ ಅಧಿಕ ಯುವಕರ ತಂಡ ಮರಳು ತೆರವುಗೊಳಿಸಿ 20ಕ್ಕೂ ಅಧಿಕ ಕುಟುಂಬಗಳ ಬದುಕು ಕಟ್ಟಲು ಹೆಗಲು ಕೊಟ್ಟು ನಿಂತಿತು. ಈ ಪರಿವರ್ತನೆಗೆ ವಿದ್ಯಾರ್ಥಿಗಳು, ಸಂಘ ಸಂಸ್ಥೆ, ಗ್ರಾಮಾಭಿವೃದ್ಧಿ ಯೋಜನೆ ಸೇರಿ 5,000ಕ್ಕೂ ಅಧಿಕ ಮಂದಿ ಶ್ರಮದಾನದ ಮೂಲಕ ನೆರವಿಗೆ ನಿಂತರು.

Raichur: ಮಂತ್ರಾಲಯದಲ್ಲಿ ಯುವ ಬ್ರಿಗೇಡ್‌ನಿಂದ ತುಂಗಾನದಿ ಸ್ವಚ್ಛತಾ ಕಾರ್ಯ

ಕೊನೆಗೆ ಕೊಳಂಬೆಯಲ್ಲಿ ಸಂಪೂರ್ಣ ನಾಶವಾಗಿದ್ದ 12 ಮನೆಗಳನ್ನು ಗುರುತಿಸಿ ಕಂದಾಯ ಇಲಾಖೆ ನೀಡಿದ ವರದಿಯನುಸಾರ ಬದುಕು ಕಟ್ಟೋಣ ಟೀಂ ಫೀಲ್ಡಿಗಿಳಿಯಿತು. ಬದುಕು ಕಟ್ಟೋಣ ತಂಡ ಎರಡು ವರ್ಷಗಳಿಂದ 20 ಮನೆಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹರ್ಷೇಂದ್ರ ಹೆಗ್ಗಡೆ ಸಹಕಾರದೊಂದಿಗೆ ದಾನಿ ಗಳ ಸಹಕಾರದಿಂದ ನೆರವು ಪಡೆಯಿತು. ಕೊಳಂಬೆಯಲ್ಲಿ 20 ಕುಟುಂಬದ ಒಟ್ಟು 40 ಎಕ್ರೆ ಸ್ಥಳವಿದ್ದು, ಎರಡು ವರ್ಷಗಳಲ್ಲಿ ಸಂಪೂರ್ಣ ಕೃಷಿ ಚಟುವಟಿಕೆ ಮರುಸ್ಥಾಪನೆ ಮಾಡಲಾಗಿದೆ. ಸುಮಾರು 5 ಎಕ್ರೆಯಷ್ಟು ವಿಸ್ತಾರದ ಗದ್ದೆಯ ಮರಳು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡವರಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S. Yadiyurappa) 5 ಲಕ್ಷ ರೂ. ಘೋಷಣೆ ಮಾಡಿದ್ದರು. 12 ಮನೆಗಳಿಗೆ ಸರಕಾರದಿಂದ ಬಂದ ತಲಾ 5 ಲಕ್ಷ ರೂ., ಶಾಸಕ ಹರೀಶ್‌ ಪೂಂಜ ಅವರ ಕಾಳಜಿ ಫಂಡ್‌ ರಿಲೀಫ್‌ ಫಂಡ್‌ ನಿಂದ ತಲಾ 1 ಲಕ್ಷ ರೂ., ಫಲಾನುಭವಿಗಳಿಂದ ತಲಾ 2 ಲಕ್ಷ ರೂ., ಉಳಿದ ಮೊತ್ತವನ್ನು ಬದುಕು ಕಟ್ಟೋಣ ತಂಡವೇ ಭರಿಸಿ ತಲಾ 13.50 ಲಕ್ಷ ರೂ. ನಲ್ಲಿ ಪ್ರತೀ ಮನೆ ನಿರ್ಮಿಸಲಾಗಿದೆ. ವಾಸ್ತು ಪ್ರಕಾರವೇ ಅಚ್ಚುಕಟ್ಟಾಗಿ ಮನೆ ನಿರ್ಮಿಸಲಾಗಿದೆ. ಭವಿಷ್ಯದಲ್ಲಿ ನೆರೆ ಸಂಭವಿಸಿದರೂ ಹಾನಿಯಾಗದಂತೆ ಎಂಜಿನಿಯರ್‌ ಮಾರ್ಗದರ್ಶನದಲ್ಲಿ ಕಾಂಕ್ರಿಟ್‌ ಪಿಲ್ಲರ್‌ ಅಳವಡಿಸಿ ಅಡಿಪಾಯ ನಿರ್ಮಿಸಲಾಗಿದೆ. 

ಸಂತ್ರಸ್ತರಿಗೆ ಅಕ್ಕಿ ಕೊಡಲು ಹೋದವರು ಬದುಕು ಕೊಟ್ಟರು!

2019ರಲ್ಲಿ ನೆರೆ ಬಂದು ಬೆಳ್ತಂಗಡಿ ಮುಳುಗಿ ಹೋಗಿದ್ದ ಹೊತ್ತಲ್ಲಿ ಮಳೆ ನಿಂತ ಮೇಲೆ ಆ ಗ್ರಾಮದ ಜನರಿಗೆ ಆಹಾರ, ಅಕ್ಕಿ ಅಂತ ಒಂದಷ್ಟು ಪರಿಹಾರ ಒದಗಿ ಬಂದಿತ್ತು. ಅದೇ ಹೊತ್ತಲ್ಲಿ ಉಜಿರೆಯ ಉದ್ಯಮಿಗಳಾದ ಮೋಹನ್ ಕುಮಾರ್ ಮತ್ತು ಅವರ ಮಿತ್ರ ರಾಜೇಶ್ ಪೈ ಅವರು ಎಲ್ಲರಂತೆ ಘಟನಾ ಸ್ಥಳ ವೀಕ್ಷಣೆಗೆ ಹೋಗಿದ್ದರು. ಹೊರಡುವಾಗ ಅಲ್ಲಿನ‌ ಸಂಕಷ್ಟ ಪೀಡಿತರಿಗೆ ತಲಾ 50 ಕೆ.ಜಿ ಅಕ್ಕಿ ಕೊಡಬೇಕೆಂದು ಅಂದುಕೊಂಡಿದ್ದರಂತೆ. ಆದರೆ ಅಲ್ಲಿ ಹೋಗಿ ನೋಡುವಾಗ ಅಲ್ಲಿನ ಪರಿಸ್ಥಿತಿ ಅಯೋಮಯವಾಗಿತ್ತು. ಕೆಸರು ತುಂಬಿದ ಅಲ್ಲಿನ ಭೂಮಿಯಲ್ಲಿ ಒಂದು ಹೆಜ್ಜೆ ತೆಗೆದು ಇನ್ನೊಂದು ಹೆಜ್ಜೆ ಇಡಲು ಜಾಗ ಇರಲಿಲ್ಲಿ. ಕೆಲವರ ವಾಸದ ಮನೆ ಕುಸಿದುಹೋಗಿದ್ದರೆ ಇನ್ನೂ ಕೆಲವು ಭಾಗಶಃ ಹಾನಿಯಾಗಿದ್ದವು. ಉಳಿದ ಕೆಲವು ಮನೆಗಳು, ‌ಕುಡಿಯುವ ನೀರಿನ ಬಾವಿ ಸಂಪೂರ್ಣ ಕೆಸರುಮಯವಾಗಿ ಬದುಕೇ ಅಸಾಧ್ಯ ಎಂಬಂತಿತ್ತು. ಅಲ್ಲಿನ ಜನ ನಾವು ಇಲ್ಲಿ ಇನ್ನು ವಾಸಿಸುವುದಿಲ್ಲ. ನಮಗೆ ಐದು ಸೆಂಟ್ಸ್ ಭೂಮಿ ಎಲ್ಲಾದರೂ ತೆಗೆಸಿಕೊಡಿ ಎಂದು ಗೋಗರೆದಿದ್ದರು. ಅದನ್ನೆಲ್ಲ ನೋಡಿ ಅಂದೇ ಆ ಪ್ರದೇಶಕ್ಕೆ ಏನಾದರೊಂದು ಸೇವೆ ಮಾಡಬೇಕೆಂದು ಸಂಕಲ್ಪಿಸಿ ಹೆಜ್ಜೆ ಇಟ್ಟವರು ಎರಡೂವರೆ ವರ್ಷದಲ್ಲಿ ಇಂದು ಈ ಮಟ್ಟಕ್ಕೆ ಅವರ ಬದುಕನ್ನು ಕಟ್ಟಿಕೊಡಲು ಶ್ರಮಿಸಿದ್ದಾರೆ. ಅದರ ಫಲವಾಗಿ ಹುಟ್ಟಿಕೊಂಡ ಬದುಕು ಕಟ್ಟೋಣ ತಂಡ ಇಂದು ಅಕ್ಷರಶಃ ಕ್ರಾಂತಿ‌ ಮಾಡಿದೆ. 

ಎಲ್ಲರೂ ಅಯ್ಯೋ, ಪಾಪ ಅಂದರು, ಇವರು ಅವರ ಬದುಕು ಕಟ್ಟಿದರು: ಡಾ.ಡಿ.ವೀರೇಂದ್ರ ಹೆಗ್ಗಡೆ

2019ರಲ್ಲಿ ನೆರೆ ಬಂದು ಊರು ಮುಳುಗಿದಾಗ ಎಲ್ಲರೂ ಅಲ್ಲಿನ ಪರಿಸ್ಥಿತಿ ಕಂಡು ಅಯ್ಯೋ ಪಾಪ ಅಂದರು. ಆದರೆ ಇದರ ಮಧ್ಯೆ ಇಬ್ಬರು ಸ್ನೇಹಿತರು ಸೇರಿ ಸಾಂತ್ವನದ ಬದಲು ಅವರಿಗೆ ಮನೆ ಕಟ್ಟಿ ಕೊಡುವ ಪ್ರತಿಜ್ಞೆ ಮಾಡಿದ್ರು. ರಾಜೇಶ್ ಪೈ ಮತ್ತು ಮೋಹನ್ ಕುಮಾರ್ ಸೇರಿ ಅವರಿಗೆ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ಆವತ್ತು ನಾನು ಅಲ್ಲಿಗೆ ಹೋಗಿ ನಿರಾಸೆ ಪಡಬೇಡಿ, ಹೊಸ ಬದುಕು ಕಟ್ಟಿ ಅಂತ ಹೇಳಿದ್ದೆ. ಆದರೆ ನನ್ನ ಸಂದೇಶವನ್ನು ಸತ್ಯ ಮಾಡಿದವರು ಮೋಹನ್ ‌ಮತ್ತು ರಾಜೇಶ್. ಇವತ್ತು ದಾನಿಗಳ ನೆರವಿನಿಂದ ಅವರಿಗೆ ಮನೆ ಕಟ್ಟಿ ಕೊಟ್ಟಿದ್ದಾರೆ. ಅವರ ಕಣ್ಣೀರು ಒರೆಸಿ ಸಂತೋಷದ ಕಣ್ಣೀರು ಬರುವಂತೆ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ನಾನು ಅತೀವ ಸಂತೋಷ ಮತ್ತು ಹೆಮ್ಮೆ ಪಟ್ಟಿದ್ದೇನೆ. ಇವರಿಗೆ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ಅನುಗ್ರಹ ಇರಲಿ.

Latest Videos
Follow Us:
Download App:
  • android
  • ios