ಮಧ್ಯಪ್ರದೇಶದ ಯೂಟ್ಯೂಬರ್ ರಚನಾ ಗುರ್ಜರ್, ತಮ್ಮ ಮನೆಯ ಹೋಮ್ ಟೂರ್ ವಿಡಿಯೋ ಮಾಡಿ ಆಭರಣಗಳನ್ನು ಪ್ರದರ್ಶಿಸಿದ್ದರು. ಇದೇ ವಿಡಿಯೋವನ್ನು ನೋಡಿದ ಕಳ್ಳರು ಮನೆಗೆ ನುಗ್ಗಿ, ಕುಟುಂಬವನ್ನು ಕೋಣೆಯಲ್ಲಿ ಬಂಧಿಸಿ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿದ್ದಾರೆ.

ಸೆಲೆಬ್ರಿಟಿಗಳು ತಮ್ಮ ಮನೆಯ ಹೋಂಟೂರ್​ ಮಾಡಿಸುವುದು, ತಮ್ಮ ಪರ್ಸ್​ನಲ್ಲಿ ಏನೇನಿದೆ ಎಂದು ತೋರಿಸುವುದು... ಇಂಥವುಗಳೆಲ್ಲಾ ಮಾಮೂಲು. ಅವರಿಗೆ ಅಸಂಖ್ಯ ಅಭಿಮಾನಿಗಳು ಇರುವ ಕಾರಣ, ಅವರ ವೈಯಕ್ತಿಕ ಜೀವನ ಎಂದರೆ ಎಲ್ಲರಿಗೂ ಬಹಳ ಖುಷಿ. ಅದಕ್ಕಾಗಿಯೇ ಲಕ್ಷ ಲಕ್ಷ ವ್ಯೂವ್ಸ್​ ಇಂಥ ವಿಡಿಯೋಗಳಿಗೇ ಬರುವುದು ಉಂಟು. ಇದನ್ನೇ ನಂಬಿಕೊಂಡ ಯುಟ್ಯೂಬರ್​ ಆಗಿರೋ ಮಹಿಳೆಯೊಬ್ಬಳು ತಮ್ಮ ಮನೆಯ ಹೋಮ್​ಟೂರ್ ಮಾಡಿಸಿ ಸುಮಾರು 10 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗಿದ್ದೇನು?

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೋಹಾನಿ ಹಳ್ಳಿಯಲ್ಲಿರುವ ಯೂಟ್ಯೂಬರ್ ರಚನಾ ಗುರ್ಜರ್ ಸೋಷಿಯಲ್​ ಮೀಡಿಯಾದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾಳೆ. ಈಕೆ ಈಚೆಗೆ, ತಮ್ಮ ಮನೆ, ಆಭರಣ, ನಗದು ಮತ್ತು ಜೀವನಶೈಲಿಯನ್ನು ತೋರಿಸುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ, ಮನೆಯ ಪ್ರವೇಶದ್ವಾರದಿಂದ ಕೋಣೆಗಳವರೆಗೆ ವಿವಿಧ ಭಾಗಗಳನ್ನು ರೆಕಾರ್ಡ್ ಮಾಡಿದ್ದಳು. ತಾನು ಎಷ್ಟು ಶ್ರೀಮಂತೆ ಎಂದು ತೋರಿಸುವುದಕ್ಕಾಗಿಯೋ ಏನೋ, ತನ್ನ ಮನೆಯಲ್ಲಿ ಇರುವ ಆಭರಣ ಮತ್ತು ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಮೇಜಿನ ಮೇಲೆ ಇರಿಸಿ ಅವುಗಳ ವಿಡಿಯೋ ಕೂಡ ಮಾಡಿದ್ದಳು.

ಕಳ್ಳರಿಗೆ ಸುಳಿವು ಕೊಟ್ಟ ಲೇಡಿ

ಕಳ್ಳರಿಗೆ ಇನ್ನೇನು ಬೇಕು? ಎಲ್ಲವೂ ವಿಡಿಯೋದಲ್ಲಿಯೇ ದಾಖಲಾಗಿತ್ತು. ಮನೆಯ ಸಂಪೂರ್ಣ ಚಿತ್ರಣ ವಿಡಿಯೋದಲ್ಲಿಯೇ ಸಿಕ್ಕಿತ್ತು. ರಾತ್ರಿಯ ವೇಳೆ ನುಗ್ಗಿದ ಕಳ್ಳರು, ಮಹಿಳೆ ಮತ್ತು ಅವರ ಕುಟುಂಬವನ್ನು ಕೋಣೆಯೊಳಗೆ ಬಂಧಿಸಿ, ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಮತ್ತು ಎನರ್ಜಿ ಡ್ರಿಂಕ್‌ನ ಪೆಟ್ಟಿಗೆಯೊಂದಿಗೆ ಪರಾರಿಯಾಗಿದ್ದಾರೆ. ಕದ್ದ ವಸ್ತುಗಳ ಒಟ್ಟು ಮೌಲ್ಯ 8 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಗುರ್ಜರ್ ಪ್ರಕಾರ, ಕುಟುಂಬವು ಮಲಗಿದ್ದಾಗ ಕಳ್ಳರು ಮನೆಗೆ ಪ್ರವೇಶಿಸಿದರು. ಬಳಿಕ ಎಲ್ಲರನ್ನೂ ಕೋಣೆಯಲ್ಲಿ ಲಾಕ್​ ಮಾಡಿದರು. ಬಳಿಕ ಚಿನ್ನಾಭರಣ, ನಗದು ಸೇರಿದಂತೆ ಎಲ್ಲವನ್ನೂ ಹೊತ್ತು ಒಯ್ದಿದ್ದಾರೆ. ಮುಖಗಳನ್ನು ಮರೆಮಾಚುವ ಸಂಬಂಧ ಸಿಸಿಟಿವಿ ಕ್ಯಾಮೆರಾಗಳ ದಿಕ್ಕನ್ನು ಬದಲಿಸಿದ್ದಾರೆ.

ದಾಖಲಾದ ಕೇಸ್​

ಕೇಸ್​​ ದಾಖಲಾಗಿದೆ. ಪೊಲೀಸ್ ತಂಡಗಳು ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಕೆಲಸ ಮಾಡುತ್ತಿವೆ. ತನಿಖಾಧಿಕಾರಿಗಳು ಈಗ ಮನೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಒಂದು ಕ್ಲಿಪ್‌ನಲ್ಲಿ ಮುಸುಕುಧಾರಿ ಕಳ್ಳನೊಬ್ಬ ತನ್ನ ಗುರುತನ್ನು ಮರೆಮಾಡಲು ಸಿಸಿಟಿವಿ ಕ್ಯಾಮೆರಾದ ಕೋನವನ್ನು ಬದಲಾಯಿಸಲು ಲಾಠಿ ಬಳಸುತ್ತಿರುವುದನ್ನು ತೋರಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಆರೋಪಿಯು ಅದೇ ಹಳ್ಳಿ ಅಥವಾ ಹತ್ತಿರದ ಪ್ರದೇಶದವನಾಗಿರಬಹುದು ಮತ್ತು ಮನೆ ಮತ್ತು ಕುಟುಂಬದ ಚಟುವಟಿಕೆಗಳ ಬಗ್ಗೆ ಅವನಿಗೆ ಪರಿಚಿತನಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಯುಟ್ಯೂಬ್​ ಮಾಡುವವರಿಗೆ ಇದೇ ವೇಳೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.