ಉತ್ತರ ಪ್ರದೇಶದ ಆಗ್ರಾದಲ್ಲಿ, ಪತಿಯ ಹುಟ್ಟುಹಬ್ಬದ ದಿನವೇ ಪತ್ನಿ ಮತ್ತು ಆಕೆಯ ತಂದೆ ಸೇರಿ ವಿಷ ನೀಡಿ ಹ*ತ್ಯೆ ಮಾಡಿದ್ದಾರೆ. ನಂತರ ಏನೂ ತಿಳಿಯದವರಂತೆ ನಾಟಕವಾಡಿದರೂ, ಎರಡು ತಿಂಗಳ ಬಳಿಕ ಬಂದ ಪೋಸ್ಟ್ ಮಾರ್ಟಂ ವರದಿಯಿಂದ ಸತ್ಯ ಬಯಲಾಗಿದ್ದು, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಂದಲೇ ಬರ್ಬರ ಕೃತ್ಯಗಳು ನಡೆಯುತ್ತಿರುವುದು ವರದಿಯಾಗುತ್ತಿದೆ. ಎಲ್ಲಿ ನೋಡಿದರೂ ಪತಿಯ ಸಾಯಿಸಿದ ಪತ್ನಿ, ವಿಷ ಹಾಕಿದ ಹೆಂಡತಿ, ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ ಪತ್ನಿ, ಹನಿಮೂನ್​ನಲ್ಲಿಯೇ ಮುಹೂರ್ತ ಇಟ್ಟ ಪತ್ನಿ... ಇಂಥ ಭಯಾನಕ ಘಟನೆಗಳೇ ವರದಿಯಾಗುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಇದೀಗ ಅಂಥದ್ದೇ ಇನ್ನೊಂದು ಘಟನೆ ನಡೆದಿದೆ. ಗಂಡನ ಹುಟ್ಟುಹಬ್ಬದ ದಿನವೇ ಆತನಿಗೆ ಸಾವಿನ ಮುಹೂರ್ತ ಫಿಕ್ಸ್​ ಮಾಡಿದ ಪತ್ನಿ, ಕೊನೆಗೆ ಗಂಡನ ಹೆಣದ ಮುಂದೆ ಕುಳಿತು ಬಿಕ್ಕಿಬಿಕ್ಕಿ ಅತ್ತು ನಾಟಕ ಮಾಡಿದ್ದಾಳೆ. ಗಂಡನನ್ನು ಆಕೆಯೇ ಮುಗಿಸಿರುವ ಬಗ್ಗೆ ಯಾವುದೇ ಸೂಚನೆಯನ್ನೂ ಕೊಡದ ರೀತಿಯಲ್ಲಿ ಹೀಗೆ ಮಾಡಿದ್ದಳು. ಆದರೆ ಕೊನೆಗೆ ಏನಾಯ್ತು ನೋಡಿ.

Add Asianetnews Kannada as a Preferred SourcegooglePreferred

ಏನಿದು ಘಟನೆ?

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಆಗ್ರಾದಲ್ಲಿ. ಜಿತೇಂದ್ರ ಎನ್ನುವವರೇ ಪತ್ನಿಯಿಂದ ಹ*ತ್ಯೆಗೆ ಒಳಗಾದವರು. ಮೂರು ವರ್ಷಗಳ ಹಿಂದೆ ಜಿತೇಂದ್ರ ಅವರ ಮದುವೆಯಾಗಿತ್ತು. ಆದರೆ ಕೆಲವು ಕಾರಣಗಳಿಂದ ದಂಪತಿಯ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಈ ಬಗ್ಗೆ ಪತ್ನಿ ತನ್ನ ತವರಿನವರಿಗೂ ವಿಷಯ ತಿಳಿಸಿದ್ದಳು. ಆದ್ದರಿಂದ ಆಕೆಯ ತಂದೆ ಕೂಡ ಅಳಿಯನನ್ನು ಮುಗಿಸುವ ಪ್ಲ್ಯಾನ್​ ರೂಪಿಸಿ, ಮಗಳ ಜೊತೆ ಎಲ್ಲಾ ಸ್ಕೆಚ್​ ತಯಾರಿಸಿದ್ದರು.

ಹುಟ್ಟುಹಬ್ಬದಂದೇ ಮುಹೂರ್ತ ಫಿಕ್ಸ್​

ಅಂದು ಜಿತೇಂದ್ರ ಅವರ ಹುಟ್ಟುಹಬ್ಬ. ಈ ತಂದೆ-ಮಗಳು ಅಳಿಯನ ಹುಟ್ಟುಹಬ್ಬವನ್ನು ತಮ್ಮ ಮನೆಯಲ್ಲಿಯೇ ಮಾಡುವುದಾಗಿ ಕರೆದಿದ್ದಾರೆ. ಅದಕ್ಕೆ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಭರ್ಜರಿಯಾಗಿ ಅರೇಂಜ್​ ಕೂಡ ಮಾಡಲಾಗಿತ್ತು. ಆದರೆ ಈ ಅರೇಂಜ್​ಮೆಂಟ್​ ಜಿತೇಂದ್ರ ಅವರ ಹುಟ್ಟುಹಬ್ಬದ್ದಲ್ಲ, ಬದಲಿಗೆ ಸಾವಿನ ಬಾಯಿಗೆ ನೂಕುವುದು ಎಂಬ ಸೂಚನೆಯೂ ಅವರಿಗೆ ಸಿಗಲಿಲ್ಲ. ಕೊನೆಗೆ ಪಾನೀಯ ವಿತರಣೆ ಮಾಡಲಾಯಿತು. ಅದರಲ್ಲಿ ಈ ತಂದೆ- ಮಗಳು ಸೇರಿ ವಿಷ ಸೇರಿಸಿದ್ದರು. ಅದನ್ನು ಕುಡಿದ ಬಳಿಕ ಜಿತೇಂದ್ರ ಸಾವನ್ನಪ್ಪಿದ್ದರು.

ಅಪ್ಪ-ಮಗಳ ಹೈ ಡ್ರಾಮಾ

ಬಳಿಕ ಮನೆಯಲ್ಲಿ ನಾಟಕ ಆರಂಭವಾಯಿತು. ಪತ್ನಿ, ಮಾವ ಎಲ್ಲರೂ ಬಿಕ್ಕಿಬಿಕ್ಕಿ ಅತ್ತರು. ಈ ಸಾವಿಗೆ ತಾವೇ ಕಾರಣ ಎನ್ನುವುದು ಪೊಲೀಸರಿಗೆ ತಿಳಿಯಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ಎಲ್ಲಾ ಪ್ಲ್ಯಾನ್ ಫಿಕ್ಸ್ ಆಗಿತ್ತು. ಅದರಂತೆ ಡ್ರಾಮಾ ಕೂಡ ಮಾಡಿದ್ದರು. ಆರಂಭದಲ್ಲಿ ಪೊಲೀಸರಿಗೂ ಇದು ಕೊ*ಲೆ ಎಂದು ತಿಳಿಯದಿದ್ದರೂ ಇಂಥ ಅದೆಷ್ಟೋ ಕೇಸ್​​ ನೋಡಿರುವ ಅವರಿಗೆ ವಾಸನೆಯಂತೂ ಬಂದೇ ಇತ್ತು. ಅದಕ್ಕೆ ತಕ್ಕಂತೆ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ನಲ್ಲಿ ಎರಡು ತಿಂಗಳ ಬಳಿಕ ವಿಷ ಸೇವನೆ ಸಾವಿಗೆ ಕಾರಣ ಎಂದು ದೃಢಪಟ್ಟಿತು. ಕೊನೆಗೆ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಪತ್ನಿ ಮತ್ತು ಆಕೆಯ ಅಪ್ಪ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ಅರೆಸ್ಟ್​ ಮಾಡಲಾಗಿದ್ದು ಜೈಲು ಸೇರಿದ್ದಾರೆ.