ಕಲಬುರ್ಗಿಯ ಅಡ್ವೊಕೇಟ್ ಕಾಲನಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ, 1.37 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಮೊಹಮ್ಮದ್ ಶೇಖ್‌ನನ್ನು ಬಂಧಿಸಿ, ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಲಬುರ್ಗಿಯಲ್ಲಿ ಈಚೆಗೆ ನಡೆದಿದ್ದ ಅಡ್ವೊಕೇಟ್ ಕಾಲನಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಸುಮಾರು 1.37 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಖದೀಮ ಪರಾರಿಯಾಗಿದ್ದ. ಇದಕ್ಕೂ ಮುನ್ನ ಕೆಲವು ದೇವಸ್ಥಾನದಲ್ಲಿ ಇದೇ ರೀತಿ ಕಳ್ಳತನವಾಗಿದ್ದರೂ ಕಳ್ಳನ ಸುಳಿವು ಸಿಕ್ಕಿರಲಿಲ್ಲ. ಇದೀಗ ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ನೋಡಿ ಪೊಲೀಸರು ಬೆನ್ನತ್ತಿದ್ದರು. ದೇವಿಯ ಮುಖವಾಡ, ತಾಳಿ ಸೇರಿದಂತೆ ಸುಮಾರು 1.37 ಲಕ್ಷ ಮೌಲ್ಯದ ಆಭರಣಗಳನ್ನು ಈತ ಕದ್ದು ಪರಾರಿಯಾಗಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಸಿಸಿಟಿವಿಯಲ್ಲಿ ಈತನ ದೃಶ್ಯ ಸೆರೆಯಾಗಿತ್ತು. ಮಾಸ್ಕ್​ ಧರಿಸಿ ಬಂದಿದ್ದ ಈತ, ಅಲ್ಲಿ ಸಿಸಿಟಿವಿ ಇರುವುದನ್ನು ಗಮನಿಸದೇ (ಗಮನಿಸಿದರೂ ಹಿಂದೆ ಸಿಕ್ಕಿಬಿದಿಲ್ಲ ಎನ್ನುವ ಧೈರ್ಯದಿಂದಲೋ ಏನೋ) ಆರಾಮಾಗಿ ಒಳಗೆ ನುಗ್ಗಿದ್ದ. ದೇವಾಲಯದ ಪುರೋಹಿತರು ಹಿಂದಿನ ರಾತ್ರಿ ದೇವಸ್ಥಾನಕ್ಕೆ ಬೀಗ ಹಾಕಿ ಹೋಗಿದ್ದರು. ಮಾರನೆಯ ದಿನ ಬಂದಾಗ ಬಾಗಿಲು ಒಡೆದದ್ದು ಕಂಡು ಗಾಬರಿಯಾದರು. ಒಳಗೆ ಹೋಗಿ ನೋಡಿದರೆ ಆಭರಣಗಳೆಲ್ಲಾ ಕಾಣೆಯಾಗಿದ್ದವು. ಕೊನೆಗೆ ಅವರು ಪೊಲೀಸರಿಗೆ ದೂರು ನೀಡಿದರು.

ಕೊನೆಗೂ ಸಿಕ್ಕಿಬಿದ್ದ

ಈ ಹಿಂದೆ ದೇವಸ್ಥಾನಗಳ ಕಳ್ಳತನ ಮಾಡಿ ಸಿಗದೇ ಪರಾರಿಯಾದ್ದ ಖದೀಮ ಕೊನೆಗೂ ಸಿಕ್ಕ. ಅವನ ಹೆಸರು ಮೊಹಮ್ಮದ್​ ಶೇಖ್​. ಅಫಜಲಪಟ್ಟಣದ ನಿವಾಸಿ. ಆತನಿಂದ ಪೊಲೀಸರು 1.37 ಲಕ್ಷ ಮೌಲ್ಯದ 9 ಗ್ರಾಂ ಚಿನ್ನಾಭರಣ ಮತ್ತು 100 ಗ್ರಾಂನಷ್ಟು ಇರುವ ಬೆಳ್ಳಿಯ ದೇವಿಯ ಮುಖವಾಡ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್​ ಕಮಿಷನರ್​ ಶರಣಪ್ಪ ಎಸ್​.ಡಿ. ಮಾಹಿತಿ ನೀಡಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಕೆಲವು ದೇವಾಲಯಗಳ ಕಳ್ಳತನವನ್ನು ಈತ ಮಾಡಿದ್ದು, ಈತನ ವಿರುದ್ಧ ಆರೋಪಗಳಿವೆ ಎಂದರು. ಸದ್ಯ ಪೊಲೀಸರು ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಜನರು ಕಾಯುತ್ತಿದ್ದಾರೆ.