ಬೆಂಗಳೂರಿನಲ್ಲಿ ರಸ್ತೆ ಮೇಲೆ ಮೊಳೆ ಎಸೆದು ವಾಹನಗಳ ಟೈಯರ್ ಪಂಕ್ಚರ್ ಮಾಡುವ ಮಾಫಿಯಾ ಸಕ್ರಿಯವಾಗಿದೆ. ಬಳಿಕ ಸಮೀಪದಲ್ಲೇ ಪಂಕ್ಚರ್ ಅಂಗಡಿ ಇಟ್ಟುಕೊಂಡು, ಸಂಕಷ್ಟಕ್ಕೆ ಸಿಲುಕಿದವರಿಂದಲೇ ಲಕ್ಷಗಟ್ಟಲೆ ಹಣ ದೋಚುತ್ತಿದ್ದಾರೆ. ಹೆಬ್ಬಾಳದಂತಹ ಪ್ರದೇಶಗಳಲ್ಲಿ ಇದು ಅವ್ಯಾಹತವಾಗಿದ್ದರೂ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ರಮ ಕೈಗೊಳ್ಳುವುದು ಕಷ್ಟಕರವಾಗಿದೆ.
ದುಡ್ಡು ಮಾಡುವವರಿಗೆ ದಾರಿ ಹಲವು. ಕೆಲವರು ಒಳ್ಳೆಯ ಮಾರ್ಗದಿಂದ ಸಂಪಾದನೆ ಮಾಡಿದರೆ, ಮತ್ತೆ ಕೆಲವರಿಗೆ ಬೇರೆಯವರನ್ನು ದೋಚಿಯೇ ಸಂಪಾದನೆ ಮಾಡುವಲ್ಲಿ ನಿಸ್ಸೀಮರು. ಕೆಲವು ಕ್ಷೇತ್ರದವರು ಜನರನ್ನು ಲೂಟಿ ಲೂಟಿ ಮಾಡಿ ಕೋಟಿಗಟ್ಟಲೆ ಹಣ ಬಾಚಿ, ತಮ್ಮ ನಾಲ್ಕೈದು ಪೀಳಿಗೆಯವರು ಕುಳಿತು ಊಟ ಮಾಡುವ ವ್ಯವಸ್ಥೆ ಮಾಡಿದರೆ, ಮತ್ತೆ ಕೆಲವರಿಗೆ, ಮೋಸದಿಂದಲೇ ಒಂದಿಷ್ಟು ಸಂಪಾದನೆ ಮಾಡುವ ಆಸೆ, ಅದು ಹುಟ್ಟುಗುಣ ಕೂಡ. ಅಂಥದ್ದೇ ಒಂದು ಮಾಫಿಯಾ ಬಹಳ ವರ್ಷಗಳಿಂದಲೂ ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳಲ್ಲಿ ಚಾಲ್ತಿಯಲ್ಲಿ ಇದೆ. ಆದರೆ ಇದುವರೆಗೂ ಅವರು ನೆಮ್ಮದಿಯಿಂದ ತಮ್ಮ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ.
ಮೊಳೆ ಎಸೆದು ಲಕ್ಷ ಲಕ್ಷ ಸಂಪಾದನೆ
ಅಷ್ಟಕ್ಕೂ ಏನಿದು ಎಂದು ನೋಡುವುದಾದರೆ, ರಸ್ತೆಯ ಮೇಲೆ ಮೊಳೆಯನ್ನು ಎಸೆದೇ ಲಕ್ಷ ಲಕ್ಷ ಸಂಪಾದನೆ ಮಾಡುವ ಕಾಯಕ ಇವರದ್ದು. ಇದನ್ನು ಅನುಭವಿಸಿದವರ ಪಾಡು ಮಾತ್ರ ಹೇಳತೀರದು. ಕೆಲವೊಂದು ಏರಿಯಾಗಳಲ್ಲಿ ಈ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ರಸ್ತೆಯ ಮೇಲೆ ಮೊಳೆ ಹಾಕಿ ವಾಹನಗಳ ಟೈಯರ್ ಪಂಕ್ಚರ್ ಮಾಡುವುದು ಇವರ ಕಾಯಕ. ಸಮೀಪದಲ್ಲಿಯೇ ಇವರ ಪಂಕ್ಚರ್ ಅಂಗಡಿ ಇರುತ್ತದೆ. ತಾವು ಮೋಸ ಹೋಗಿರುವುದು ತಿಳಿಯದ ವಾಹನ ಸವಾರರು, ಸಮೀಪದಲ್ಲಿಯೇ ಅಂಗಡಿ ಇದ್ದುದನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟು ದೇವರೇ ನಮಗೆ ಕರುಣೆ ತೋರಿದ ಎಂದು ಖುಷಿಯಿಂದ ಆ ಅಂಗಡಿಗೆ ಹೋಗಿ ಟೈಯರ್ ರಿಪೇರಿ ಮಾಡಿಸಿಕೊಂಡು ಬರುತ್ತಿದ್ದಾರೆ.
ಮಾಫಿಯಾ ಎಂದು ತಿಳಿದರೂ ಏನೂ ಮಾಡಲು ಆಗ್ತಿಲ್ಲ
ಆದರೆ, ದಿನನಿತ್ಯ ಈ ಭಾಗಗಳಲ್ಲಿ ಸಂಚಾರ ಮಾಡುವವರಿಗೆ ಮಾತ್ರ ಇದು ದೊಡ್ಡ ಮಾಫಿಯಾ ಎನ್ನುವುದು ತಿಳಿದಿದೆ. ಬೆಂಗಳೂರಿನ ಹೆಬ್ಬಾಳ ಸೇರಿದಂತೆ ಕೆಲವೆಡೆಗಳಲ್ಲಿ ಇದು ಅವ್ಯಾಹತವಾಗಿ ನಡೆಯುತ್ತಿರುವುದಾಗಿ ವಾಹನ ಸವಾರರು ಹೇಳುತ್ತಾರೆ. ಆದರೆ ದೂರು ಕೊಟ್ಟರೆ ಕೇಳುವವರು ಯಾರು ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ. ಮೊಳೆ ಹಾಕಿರುವುದು ಇಂಥವರೇ ಎನ್ನುವುದು ಪೊಲೀಸರಿಗೆ ಏನೂ ತಿಳಿಯದ ವಿಷಯವಲ್ಲ ಬಿಡಿ. ಆದರೆ ದೂರು ಕೊಡಲು ಹೋಗುವ ಬಡಪಾಯಿಗಳಿಗೆ ಸಾಕ್ಷಿ ಕೇಳಿದರೆ ಅವರು ಎಲ್ಲಿಂದ ತಂದಾರು?
ಬೆಂಕಿಗೆ ಗಂಟೆ ಕಟ್ಟಿದ್ರೂ...
ಇದಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಹಲವಾರು ವರ್ಷಗಳಿಂದ ಕೆಲವರು ಇದರ ವಿಡಿಯೋ ಮಾಡುತ್ತಲೇ ಬಂದಿದ್ದಾರೆ. ನಮ್ಮ ಸರ್ಕಾರದ ಗಮನಕ್ಕೂ ತಂದಿದ್ದಾರೆ (?). ಆದರೆ ಇವರದ್ದು ಅರಣ್ಯರೋಧನ. ಕಚೇರಿಗೋ, ಇನ್ನೆಲ್ಲಿಗೋ ಹೋಗುವ ಸಮಯದಲ್ಲಿ ಪದೇ ಪದೇ ಇದೇ ರೀತಿ ಟೈಯರ್ ಪಂಕ್ಚರ್ ಆಗುತ್ತಾ ಇದ್ದರೆ, ವಾಹನ ಸವಾರರ ಪಾಡು ಹೇಗಿರಬೇಡ? ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು, ಹಾಗೊಮ್ಮೆ ಗಂಟೆ ಕಟ್ಟಿದರೂ ಮುಂದೆ ಆ ಗಂಟೆ ಬಾರಿಸುತ್ತದೆಯೇ ಎನ್ನುವ ಅನುಮಾನ ಎನ್ನುವಂಥ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. Karnataka Portfolio ಎನ್ನುವ ಎಕ್ಸ್ ಖಾತೆಯಲ್ಲಿ ಇದರ ವಿಡಿಯೋ ಮಾಡಿದ್ದಾರೆ ನೋಡಿ.


