ಕಾನ್ಪುರದಲ್ಲಿ ನಡೆದ 60 ವರ್ಷದ ಔಷಧಿ ವ್ಯಾಪಾರಿ ವಿನೀತ್ ಮನೋಚಾ ಅವರ ಭೀಕರ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಆಸ್ತಿ ಕೈತಪ್ಪುವ ಭೀತಿ ಹಾಗೂ ಐಪಿಎಲ್ ಬೆಟ್ಟಿಂಗ್ ಸಾಲದ ಕಾರಣಕ್ಕಾಗಿ ಮಗ ಸುಬ್ರತ್ 6 ಲಕ್ಷ ರೂ. ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿದ್ದಾನೆ. ಸಿಕ್ಕಿಬಿದ್ದರೆ ಪತ್ನಿಯ ಹೆಸರು ಹೇಳುವಂತೆ ಸುಪಾರಿ ಹಂತಕನಿಗೆ ತರಬೇತಿ ನೀಡಿದ್ದ ವಿಷಯ ತನಿಖೆಯಿಂದ ಬಯಲಾಗಿದೆ.

ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೆಪ್ಟೆಂಬರ್ 5ರಂದು ನಡೆದಿದ್ದ ಪ್ರಸಿದ್ಧ ಔಷಧಿ ವ್ಯಾಪಾರಿ 60 ವರ್ಷದ ವಿನೀತ್ ಮನೋಚಾ ಭೀಕರ ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೊಲೆ ಯಾರು ಮಾಡಿರುವುದು ಎನ್ನುವ ಬಗ್ಗೆ ಸೂಕ್ತ ತನಿಖೆ ನಡೆಸಿದ ಪೊಲೀಸರು ವಿನೀತ್​ ಅವರ ಸುಪುತ್ರ ಸುಬ್ರತ್​ನೇ ತಂದೆಯ ಕೊಲೆಗೆ ಆರು ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ. ಕುತೂಹಲ ಎಂದರೆ, ಸುಪಾರಿ ಹಂತನಿಗೆ ಮೊದಲೇ ಟ್ರೈನಿಂಗ್​ ಕೊಟ್ಟಿದ್ದ ಸುಬ್ರತ್‌, ಒಂದು ವೇಳೆ ನೀನೇನಾದ್ರೂ ಸಿಕ್ಕಿಬಿದ್ದರೆ, ನನ್ನ ಹೆಂಡ್ತಿ ಹೆಸರು ಪೊಲೀಸರಿಗೆ ಹೇಳು. ಅವರು ಆಕೆಯನ್ನು ಅರೆಸ್ಟ್​ ಮಾಡಿಕೊಂಡು ಹೋಗ್ತಾರೆ. ನಾನು ನಿರಾಳ ಆಗಿರ್ತೇನೆ ಎಂದಿದ್ದ ಎನ್ನುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಮೃತ ವಿನೀತ್ ಮನೋಚಾ ಅವರಿಗೆ ಕೆಲವು ಮಹಿಳೆಯರೊಂದಿಗೆ ಸಂಬಂಧವಿತ್ತು ಎನ್ನಲಾಗಿದೆ. ಹಾಗಾಗಿ, ತಂದೆ ತನ್ನೆಲ್ಲಾ ಆಸ್ತಿಯನ್ನು ಪ್ರೇಯಸಿಗೆ ಬರೆದುಬಿಡಬಹುದು ಎಂಬ ತೀವ್ರ ಭೀತಿ ಮಗ ಸುಬ್ರತ್‌ನನ್ನು ಕಾಡುತ್ತಿತ್ತು. ಅದೇ ಇನ್ನೊಂದೆಡೆ, ಐಪಿಎಲ್ ಬೆಟ್ಟಿಂಗ್‌ ಚಟ ಅಂಟಿಸಿಕೊಂಡಿದ್ದ ಸುಬ್ರತ್​ 40 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ತನ್ನಪ್ಪ ಬೇರೆ ಮಹಿಳೆಗೆ ಎಲ್ಲಾ ಆಸ್ತಿ ಬರೆದುಬಿಟ್ಟರೆ, ಈ ಬೃಹತ್​ ಮೊತ್ತದ ಸಾಲ ತೀರಿಸೋದು ಕಷ್ಟ ಎಂದುಕೊಂಡು ಕೊಲೆಗೆ ಸ್ಕೆಚ್​ ಹಾಕಿ, ಅದನ್ನು ನೆರವೇರಿಸಿದ್ದ.

ಆರಂಭದಲ್ಲಿ ಪೊಲೀಸರು ಈ ಕೊಲೆಯ ಮಾಸ್ಟರ್‌ಮೈಂಡ್ ಸೊಸೆ ಶಾಲು ಮನೋಚಾ ಎಂದು ಭಾವಿಸಿ ಆಕೆಯನ್ನು ಬಂಧಿಸಿದ್ದರು. ಆದರೆ ಈಗ ಸೈಂಟಿಫಿಕ್ ಮತ್ತು ಡಿಜಿಟಲ್ ಪುರಾವೆಗಳ ಆಧಾರದ ಮೇಲೆ ಮಗ ಸುಬ್ರತ್ ಮನೋಚಾ ನನ್ನು ಪೊಲೀಸರು ಪ್ರಮುಖ ಆರೋಪಿಯನ್ನಾಗಿ ಬಂಧಿಸಿದ್ದಾರೆ. ಸುಬ್ರತ್ ಐಪಿಎಲ್ ಬೆಟ್ಟಿಂಗ್ ಹಾಗೂ ಜೂಜಿನಿಂದಾಗಿ ಸುಮಾರು 40 ಲಕ್ಷ ರೂಗೂ ಹೆಚ್ಚು ಸಾಲ ಮಾಡಿಕೊಂಡಿದ್ದನು. ಆತನಿಗೆ ಬ್ಯಾಂಕ್ ಸಾಲದ ಕಂತು ಕಟ್ಟಲು ತಿಂಗಳಿಗೆ 55 ಸಾವಿರ ರೂ. ಬೇಕಾಗುತ್ತಿತ್ತು, ಆದರೆ ತಂದೆ ಆತನಿಗೆ ಖರ್ಚಿಗೆ ಕೇವಲ 40,000 ರೂಪಾಯಿ ಮಾತ್ರ ನೀಡುತ್ತಿದ್ದರು. ಈ ಹಣಕಾಸಿನ ತೊಂದರೆಯೂ ಕೊಲೆಗೆ ಪ್ರಚೋದನೆ ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿಕ್ಕಿಬಿದ್ದದ್ದು ಹೇಗೆ?

ಸುಬ್ರತ್ ತನ್ನ ಹಳೆಯ ಉದ್ಯೋಗಿ ವಿಶಾಲ್ ಗೌತಮ್‌ಗೆ ತಂದೆಯನ್ನು ಮುಗಿಸಲು 6 ಲಕ್ಷ ರೂಪಾಯಿ ಸುಪಾರಿ ನೀಡಿದ್ದ. ಅದರಂತೆ, ಸೆಪ್ಟೆಂಬರ್ 5ರ ರಾತ್ರಿ ಸುಬ್ರತ್ ತನ್ನ ಪತ್ನಿ ಮತ್ತು ಮಗನನ್ನು ಕರೆದುಕೊಂಡು ಮುಂಜಾಗ್ರತೆಯಾಗಿ ಪಾರ್ಟಿಗೆ ತೆರಳಿದ್ದ. ಈ ಗ್ಯಾಪ್‌ನಲ್ಲಿ ಸುಪಾರಿ ಕಿಲ್ಲರ್ಸ್ ಮನೆಗೆ ನುಗ್ಗಿ ವಿನೀತ್ ಅವರ ಕುತ್ತಿಗೆ ಸೀಳಿ, 26 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿದ್ದರು. ಕೊಲೆ ನಡೆದ ರಾತ್ರಿ ಸುಪಾರಿ ಕಿಲ್ಲರ್ ಹೊಸ ಸಿಮ್ ಕಾರ್ಡ್ ಬಳಸಿ ಸುಬ್ರತ್‌ಗೆ 6 ಬಾರಿ ಕರೆ ಮಾಡಿದ್ದ. ಪೊಲೀಸರು ಆ ಕಾಲ್ ಡಿಟೇಲ್ಸ್, ಡಿಲೀಟ್ ಆಗಿದ್ದ ವಾಟ್ಸ್​ಆ್ಯಪ್​ ಚಾಟ್‌ಗಳು ಹಾಗೂ ಐಎಂಇಐ ನಂಬರ್ ಟ್ರ್ಯಾಕ್ ಮಾಡಿದಾಗ ಮಗನ ಸಂಪೂರ್ಣ ವಿಷಯ ಬಹಿರಂಗಗೊಂಡಿದೆ.

ಕಾನ್ಪುರ ಪೊಲೀಸ್ ಕಮಿಷನರ್ ರಘುಬೀರ್ ಲಾಲ್ ಅವರ ನೇತೃತ್ವದ ತಂಡ ಆರೋಪಿ ಸುಬ್ರತ್ ಮತ್ತು ಸುಪಾರಿ ಕಿಲ್ಲರ್ಸ್ ಸೇರಿದಂತೆ ಎಲ್ಲರನ್ನೂ ಜೈಲಿಗಟ್ಟಿದೆ. ಇನ್ನು ಆರಂಭದಲ್ಲಿ ಜೈಲು ಪಾಲಾಗಿದ್ದ ಸೊಸೆ ಶಾಲುಗೆ ಸದ್ಯಕ್ಕೆ ಸಂಪೂರ್ಣ ಕ್ಲೀನ್ ಚೀಟ್ ಸಿಕ್ಕಿಲ್ಲವಾದರೂ, ಆಕೆಯನ್ನು ದಾಳವಾಗಿ ಬಳಸಿಕೊಳ್ಳಲಾಗಿತ್ತು ಎಂಬುದು ಸಾಬೀತಾಗಿದೆ.