ಲೋನಾವಾಲಾದ ಲೋಹಗಢ ಕೋಟೆಯಲ್ಲಿ ಯುವ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದಾಳೆ. ಮದುವೆ ಇಷ್ಟವಿಲ್ಲದಿದ್ದರೆ ಹೇಳಬಹುದಿತ್ತು, ಹೀಗೆ ಕೊಲೆ ಮಾಡುವ ಬದಲು ಮದುವೆ ನಿಲ್ಲಿಸಬಹುದಿತ್ತು ಎಂದು ಮೃತನ ಕುಟುಂಬ ಕಣ್ಣೀರು ಹಾಕುತ್ತಿದೆ.

'ನಾವು ಅವಳನ್ನು ಮಗಳಂತೆ ಕಂಡೆ. ಅವಳನ್ನು ಚೆನ್ನಾಗಿ ನೋಡಿಕೋ, ಸ್ವಲ್ಪವೂ ದುಃಖ ಅವಳಲ್ಲಿ ಬರದಂತೆ ಅವಳ ಜೊತೆ ಸಂಸಾರ ಮಾಡಬೇಕು ಎಂದು ಪದೇ ಪದೇ ಮಗ ಕೇತನ್​ಗೆ ಹೇಳುತ್ತಿದ್ದೆ. ಅವನೂ ತುಂಬಾ ಒಳ್ಳೆಯವ. ಭಾವಿ ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದ. ಆದರೆ ಅವಳು ಇಂಥ ಕ್ರೂರಿ ಎನ್ನುವುದು ತಿಳಿಯದೇ ಹೋಯಿತು. ನನ್ನ ಮಗ ಯಾವ ತಪ್ಪೂ ಮಾಡದೇ ಜೀವ ಕಳೆದುಕೊಂಡ. ಮದುವೆ ಇಷ್ಟ ಇಲ್ಲ ಎಂದಿದ್ದರೆ ಅವಳು ಹೇಳಬಹುದಿತ್ತು. ಅದನ್ನೂ ಮಾಡಲಿಲ್ಲ. ಮನಸ್ಸಿನಲ್ಲಿ ಕೊಲೆ ಮಾಡುವ ಸಂಚು ರೂಪಿಸುತ್ತಿದ್ದರೂ ಏನೂ ತಿಳಿಯದವಳಂತೆ ನಗುನಗುತ್ತಾ ಇದ್ದೇ ನನ್ನ ಮಗನನ್ನು ಕೊಂದು ಬಿಟ್ಟಳು. ಇನ್ನು ನಮಗ್ಯಾರು ದಿಕ್ಕು? ನನ್ನ ಮಗ ಏನು ತಪ್ಪು ಮಾಡಿದ್ದ, ಅವನಿಗೆ ಇದೆಂಥ ಶಿಕ್ಷೆ....'...

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರದ ಲೋನಾವಾಲಾ ಸಮೀಪದ ಪ್ರಸಿದ್ಧ ಪ್ರವಾಸಿ ತಾಣ ಲೋಹಗಢ ಕೋಟೆಯಲ್ಲಿ (Lohagad Fort) ಜೂನ್ 18 ರಂದು ನಡೆದಿದ್ದ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Vishal Agarwal) ಅವರನ್ನು ನೆನದು ಕಣ್ಣೀರಿಡುತ್ತಿರುವ ಆ ತಾಯಿಯ ನೋವನ್ನು ನೋಡಲಾಗುತ್ತಿಲ್ಲ. ಮದುವೆ ಇಷ್ಟವಿಲ್ಲ ಎಂದು ಹೇಳುವ ಬದಲು ಅದ್ಯಾವ ಕಾರಣಕ್ಕೋ ಏನೋ, ಅವರನ್ನು ಕೊಲೆ ಮಾಡಿದ್ದಾಳೆ ಭಾವಿ ಪತ್ನಿ ಸಿಯಾ ಗೋಯಲ್. ತನ್ನ ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಈ ಸಂಚು ರೂಪಿಸಿ ಒಂದು ಜೀವವನ್ನು ಬಲಿ ಪಡೆದಿದ್ದಾಳೆ.

ಫೋಟೋ ಕಳಿಸಿದ್ರೂ ಸಾಕಿತ್ತು

'ಅವಳು ಮದುವೆ ಇಷ್ಟ ಇಲ್ಲ ಎಂದು ನೇರವಾಗಿ ಹೇಳದಿದ್ದರೂ ಪರವಾಗಿರಲಿಲ್ಲ. ಲವರ್ ಜೊತೆಗಿನ ಒಂದೇ ಒಂದು ಫೋಟೋ ನಮಗೆ ಕಳುಹಿಸಿದ್ದರೂ ಸಾಕಿತ್ತು. ನಾವು ಮದುವೆ ಕ್ಯಾನ್ಸಲ್​ ಮಾಡ್ತಿದ್ವಿ. ನಾವೇನೂ ಮದುವೆಗೆ ಒತ್ತಾಯ ಮಾಡಿರಲಿಲ್ಲ. ಆಕೆಯೂ ತುಂಬಾ ನಗುಮೊಗದಿಂದ ಮದುವೆಗೆ ಒಪ್ಪಿಕೊಂಡಿದ್ದಳು. ಕೊನೆಯ ಹಂತದವರೆಗೂ ನನ್ನ ಮಗನ ಜೊತೆ ಖುಷಿಖುಷಿಯಾಗಿಯೇ ಇರುವಂತೆ ನಾಟಕ ಮಾಡಿ ಬೆನ್ನಿಗೆ ಚೂರಿ ಹಾಕಿದಳು. ನನ್ನ ಮಗನನ್ನು ವಾಪಸ್​ ತಂದುಕೊಡಿ' ಎಂದು ಕಣ್ಣೀರಿಡುತ್ತಿದ್ದಾರೆ ಕೇತನ್​ ಅವರ ಅಪ್ಪ.

ನಿಜಕ್ಕೂ ಏನಾಯ್ತು

ಈ ಪ್ರಕರಣದ ತನಿಖೆ ನಡೆಯುತ್ತಿದೆ. ತನಗೆ ಮದುವೆ ಇಷ್ಟ ಇಲ್ಲ ಎಂದು ಆಕೆ ಹೇಳದೇ ಇರಲು ಕಾರಣವೇನು? 17 ಕೋಟಿ ರೂಪಾಯಿಗಳ ಅದ್ಧೂರಿ ಮದುವೆಗೆ ಅರಮನೆಯನ್ನು ಬುಕ್​ ಮಾಡುವವರೆಗೂ ಸುಮ್ಮನಿದ್ದುದು ಯಾಕೆ? ಅವಳ ಉದ್ದೇಶ ಏನಾಗಿತ್ತು? ಭಾವಿ ಪತಿ ಹುಟ್ಟುಹಬ್ಬದ ಸರ್​ಪ್ರೈಸ್​ ನೀಡುವ ಸಂದರ್ಭದಲ್ಲಿ ಮುಖದ ಮೇಲೆ ಇನಿತೂ ಅಳುಕು ಇಲ್ಲದೇ, ಕೊಲೆ ಮಾಡುವ ಒಂದೇ ಒಂದು ಮುನ್ಸೂಚನೆಯೂ ಇಲ್ಲದೇ ವೃತ್ತಿಪರ ಕೊಲೆಗಾತಿಯಂತೆ ನಾಟಕ ಮಾಡಿದ್ಯಾಕೆ? ಕೊನೆ ಕ್ಷಣದಲ್ಲಿ ಏನಾಯ್ತು ಎಲ್ಲವೂ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.