ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ಸಂಸದನಿಗೆ ಚಾಕು ಇರಿತ: ಆರೋಪಿಗೆ ಹಿಗ್ಗಾಮುಗ್ಗ ಥಳಿತ; ಪೊಲೀಸ್ ವಶಕ್ಕೆ
ಬಿಆರ್‌ಎಸ್‌ನ ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಪ್ರಭಾಕರ್ ಪ್ರಚಾರ ಮಾಡುತ್ತಿದ್ದಾಗ ರಾಜು ಎಂಬಾತ ಸಂಸದರ ಬಳಿ ಬಂದು ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ.
ಹೈದರಾಬಾದ್ (ಅಕ್ಟೋಬರ್ 30, 2023): ತೆಲಂಗಾಣದ ಮೇದಕ್ ಸಂಸದರಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ವರದಿಯಾಗಿದೆ. ತೆಲಂಗಾಣದಲ್ಲಿ ನಡೆಯಲಿರೋ ವಿಧಾನಸಭೆ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದ ವೇಳೆ ಮೇದಕ್ ಸಂಸದ ಕೋಥಾ ಪ್ರಭಾಕರ್ ರೆಡ್ಡಿ ಅವರಿಗೆ ಸೋಮವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ದುಬ್ಬಾಕ್ ವಿಧಾನಸಭಾ ಕ್ಷೇತ್ರದಲ್ಲಿ ಅವರು ಪ್ರಚಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಪ್ರಭಾಕರ್ ಸೂರಂಪಲ್ಲಿ ಗ್ರಾಮದಲ್ಲಿ ಪ್ರಚಾರ ಮಾಡುತ್ತಿದ್ದಾಗ ರಾಜು ಎಂಬಾತ ಸಂಸದರ ಬಳಿ ಬಂದು ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿದೆ. ಘಟನೆ ವೇಳೆ ಹಾಲಿ ಸಂಸದರ ಹೊಟ್ಟೆಗೆ ಗಾಯವಾಗಿದೆ. ಅವರ ಪಕ್ಷದ ಕಾರ್ಯಕರ್ತರು ಸುತ್ತುವರಿದಿದ್ದರೂ ಸಹ ಗಾಯವಾಗಿದೆ.
ಇದನ್ನು ಓದಿ: ರಾಜಸ್ಥಾನ ಕಾಂಗ್ರೆಸ್‌ನಿಂದ 7 ಗ್ಯಾರಂಟಿ; ಅಧಿಕಾರಕ್ಕೆ ಬಂದ್ರೆ ಕರ್ನಾಟಕ ರೀತಿ ಎಲ್ಲ ಗ್ಯಾರಂಟಿ ಜಾರಿ: ಗೆಹ್ಲೋಟ್ ಘೋಷಣೆ
ಇನ್ನು, ಚಾಕು ಇರಿತದ ಘಟನೆ ನೋಡಿದ ಸಂಸದರ ಬಂದೂಕುಧಾರಿಗಳು ತಕ್ಷಣ ಆರೋಪಿಯನ್ನು ಕೆಳಗೆ ತಳ್ಳಿದ್ದಾರೆ. ಅಲ್ಲದೆ, ಪ್ರಭಾಕರ ರೆಡ್ಡಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಅವರ ಕಾರಿನಲ್ಲಿ ಸ್ಥಳಾಂತರಿಸಿದಾಗ, ಸಂಸದರ ಬಳಿ ಇದ್ದ ಸ್ಥಳೀಯ ಬಿಆರ್‌ಎಸ್ ಸಿಬ್ಬಂದಿ ಆರೋಪಿ ರಾಜುವನ್ನು ಹಿಡಿದು ದೊಣ್ಣೆ ಮತ್ತು ಕೈಗಳಿಂದ ಹಲ್ಲೆ ನಡೆಸಿ ನೆಲಕ್ಕೆ ತಳ್ಳಿದ್ದಾರೆ.
ಪ್ರಭಾಕರ ರೆಡ್ಡಿ ಅವರನ್ನು ಗಜ್ವೇಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಆರ್‌ಎಸ್‌ನ ಕೆಲವು ಕಾರ್ಯಕರ್ತರು ಮಧ್ಯಪ್ರವೇಶಿಸಿದ ನಂತರ, ರಾಜುವನ್ನು ಹೆಚ್ಚಿನ ದಾಳಿಯಿಂದ ತಪ್ಪಿಸಲಾಯಿತು ಮತ್ತು ನಂತರ ಆರೋಪಿಯನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಅವರು ಆತನ ವಿರುದ್ಧ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಜತೆ ವೇದಿಕೆ ಹಂಚ್ಕೊಳ್ಳಲ್ಲ: ಮೈತ್ರಿ ಪಕ್ಷದ ಸಿಎಂ ಸಡ್ಡು
ರಾಜು ಎಂಬಾತ ಸೋಷಿಯಲ್ ಮೀಡಿಯಾ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಶಂಕಿಸಲಾಗಿದ್ದು, ಆತನಿಂದ ಐಡಿ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಲಾಗಿದೆ. .ಪ್ರಭಾಕರ್ ಹತ್ಯೆಗೆ ಯತ್ನದ ಉದ್ದೇಶ ಮತ್ತು ರಾಜಕೀಯ ನಂಟು ಇದೆಯೇ ಎಂದು ತಿಳಿಯಲು ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ತೆಲಂಗಾಣದಲ್ಲೂ 3 ಸಂಸದರಿಗೆ ಬಿಜೆಪಿ ಟಿಕೆಟ್: ವಿವಾದಿತ ಶಾಸಕ ರಾಜಾ ಸಿಂಗ್‌ರಿಂದಲೂ ಸ್ಪರ್ಧೆ