ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರನ್ನು ಅವಮಾನಿಸಿದ ಆರೋಪದ ಮೇಲೆ ಪಕ್ಷದಿಂದ ಅಮಾನತು ಆಗಿದ್ದ ಟಿ. ರಾಜಾ ಸಿಂಗ್‌ರ ಅಮಾನತನ್ನು ಹಿಂಪಡೆದು ಗೋಶಾಮಹಲ್‌ ಕ್ಷೇತ್ರದಿಂದ ಟಿಕೆಟ್‌ ನೀಡಿದೆ.

ನವದೆಹಲಿ (ಅಕ್ಟೋಬರ್ 23, 2023): ತೆಲಂಗಾಣ ವಿಧಾನಸಭಾ ಚುನಾವಣೆಗೆ ತನ್ನ 52 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಈ ಪೈಕಿ ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಸೇರಿದಂತೆ ಮೂವರು ಹಾಲಿ ಸಂಸದರಿಗೆ ಟಿಕೆಟ್‌ ನೀಡಲಾಗಿದೆ. ಈ ಮೂಲಕ ಸಂಸದರನ್ನು ಕಣಕ್ಕಿಳಿಸುವ ತನ್ನ ಪ್ರವೃತ್ತಿಯನ್ನು ಬಿಜೆಪಿ ಮುಂದುವರಿಸಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಬಿಜೆಪಿ ಅನೇಕ ಹಾಲಿ ಸಂಸದರನ್ನು ಕಣಕ್ಕಿಳಿಸಿದೆ.

ಇದೇ ವೇಳೆ ಹಾಲಿ ಬಿಜೆಪಿ ಶಾಸಕ ಎಟಾಲ ರಾಜೇಂದ್ರ ಅವರನ್ನು ಗಜ್ವೇಲ್‌ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹಾಗೂ ಬಿಆರ್‌ಎಸ್‌ ನಾಯಕ ಕೆ. ಚಂದ್ರಶೇಖರರಾವ್‌ ವಿರುದ್ಧ ಕಣಕ್ಕಿಳಿಸಲಾಗಿದೆ. ಗಜ್ವೇಲ್‌ ಅಲ್ಲದೆ ತಮ್ಮ ಸ್ವಕ್ಷೇತ್ರ ಹುಜೂರಾಬಾದ್‌ನಲ್ಲೂ ರಾಜೇಂದ್ರ ಸ್ಪರ್ಧಿಸಲಿದ್ದಾರೆ.

ಇದನ್ನು ಓದಿ: ಹಣ, ಉಡುಗೊರೆಗಾಗಿ ಸಂಸತ್ತಿನಲ್ಲಿ ಪ್ರಶ್ನೆ ಮಾಡ್ತಿದ್ದ ಟಿಎಂಸಿ ಸಂಸದೆ? ಏನಿದು ವಿವಾದ..? ಇಲ್ಲಿದೆ ವಿವರ..

ಅಲ್ಲದೇ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಅವರನ್ನು ಅವಮಾನಿಸಿದ ಆರೋಪದ ಮೇಲೆ ಪಕ್ಷದಿಂದ ಅಮಾನತು ಆಗಿದ್ದ ಟಿ. ರಾಜಾ ಸಿಂಗ್‌ರ ಅಮಾನತನ್ನು ಹಿಂಪಡೆದು ಗೋಶಾಮಹಲ್‌ ಕ್ಷೇತ್ರದಿಂದ ಟಿಕೆಟ್‌ ನೀಡಿದೆ.

ಸದ್ಯ ರಾಜ್ಯದಲ್ಲಿ ಬಿಜೆಪಿ ನಾಲ್ವರು ಸಂಸದರಿದ್ದು, ಮೊದಲ ಪಟ್ಟಿಯಲ್ಲಿ ಮೂವರ ಹೆಸರಿದೆ. ಇದರಲ್ಲಿ ಕುಮಾರ್‌ ಅವರಿಗೆ ಕರೀಂನಗರದಿಂದ, ಸೋಯಂ ಬಾಪು ರಾವ್‌ ಅವರಿಗೆ ಬೋತ್ ಕ್ಷೇತ್ರಕ್ಕೆ ಮತ್ತು ಧರ್ಮಪುರಿ ಅರವಿಂದ್‌ ಅವರಿಗೆ ಕೊರಟ್ಲಾದಿಂದ ಟಿಕೆಟ್‌ ನೀಡಲಾಗಿದೆ.

ಇದನ್ನು ಓದಿ: ಮಧ್ಯ ಪ್ರದೇಶ ಸಿಎಂ ‘ಶಿವರಾಜ’ನ ವಿರುದ್ಧ ‘ಹನುಮಂತ’ನ ಸ್ಪರ್ಧೆ’: ಕಾಂಗ್ರೆಸ್‌ ಪಟ್ಟಿಯಲ್ಲಿ ಬಿಜೆಪಿ ಮಾಜಿ ನಾಯಕರು!

ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್‌ ಅಮಾನತು ರದ್ದು: ಮತ್ತೆ ಟಿಕೆಟ್‌
ಹೈದರಾಬಾದ್‌: ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್‌ರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸಸ್ಪೆಂಡ್‌ ಆಗಿದ್ದ ತೆಲಂಗಾಣ ಶಾಸಕ ಟಿ. ರಾಜಾ ಸಿಂಗ್‌ರ ಅಮಾನತನ್ನು ಬಿಜೆಪಿ ಭಾನುವಾರ ರದ್ದುಗೊಳಿಸಿದೆ. ಅಲ್ಲದೇ ರಾಜಾ ಸಿಂಗ್‌ಗೆ ಅವರದೇ ಕ್ಷೇತ್ರವಾದ ಗೋಶಾಮಹಲ್‌ನಿಂದ ತೆಲಂಗಾಣ ವಿಧಾನಸಭೆ ಚುನಾವಣೆಗೆ ಪಕ್ಷವು ಮತ್ತೆ ಟಿಕೆಟ್‌ ನೀಡಿದೆ.

ಈ ಬಗ್ಗೆ ಭಾನುವಾರ ಮಾತನಾಡಿರುವ ರಾಜ್ಯ ಬಿಜೆಪಿ ಮುಖ್ಯಸ್ಥ ಕಿಶನ್‌ ರೆಡ್ಡಿ ‘ಪಕ್ಷ ನೀಡಿದ್ದ ಶೋಕಾಸ್ ನೋಟಿಸ್‌ಗೆ ಪ್ರತಿಯಾಗಿ ರಾಜಾ ಸಿಂಗ್‌ ನೀಡಿರುವ ವಿವರಣೆಯನ್ನು ಪರಿಗಣಿಸಿ ಅವರ ಅಮಾನತನ್ನು ರದ್ದುಗೊಳಿಸಲಾಗಿದೆ’ ಎಂದಿದ್ದಾರೆ.

ರಾಜಾ ಸಿಂಗ್‌ ತೆಲಂಗಾಣದ ಪ್ರಮುಖ ಬಿಜೆಪಿ ನಾಯಕರಾಗಿದ್ದು, ಪ್ರಖರ ಹಿಂದುತ್ವ ಸಿದ್ಧಾಂತವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರವಾದಿ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿವಾದಿತ ಹೇಳಿಕೆ ನೀಡಿ ಅಮಾನತಾದ ಬೆನ್ನಲ್ಲೇ ರಾಜಾ ಸಿಂಗ್‌ ಕೂಡ ಹೇಳಿಕೆ ನೀಡಿ ಅಮಾನತಿಗೆ ಒಳಗಾಗಿದ್ದರು.