ಮನೆಯ ಯಜಮಾನತಿಗೆ ಗೃಹಲಕ್ಷ್ಮಿ ಯೋಜನೆ ಅಡಿ ವರ್ಷಕ್ಕೆ 10 ಸಾವಿರ ರೂ. ಹಾಗೂ 500 ರೂ .ನಲ್ಲಿ ಸಬ್ಸಿಡಿ ಸಿಲಿಂಡರ್‌ ನೀಡಿಕೆಯನ್ನು 3 ದಿನದ ಹಿಂದೆಯೇ ಪ್ರಕಟಿಸಿದ್ದರು. ಈ ಎರಡೂ ಸೇರಿ ಒಟ್ಟು 7 ಗ್ಯಾರಂಟಿಗಳನ್ನು ಶುಕ್ರವಾರ ರಾಜಸ್ಥಾನ ಸಿಎಂ ಪ್ರಕಟಿಸಿದರು.

ಜೈಪುರ (ಅಕ್ಟೋಬರ್ 28, 2023): ರಾಜಸ್ಥಾನ ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಉಳಿದಿರುವ ನಡುವೆಯೇ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಕಾಂಗ್ರೆಸ್‌ ಪಕ್ಷದ ವತಿಯಿಂದ 7 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಈ ಪೈಕಿ 2 ಗ್ಯಾರಂಟಿಗಳು 3 ದಿನದ ಹಿಂದೆ ಘೋಷಣೆ ಆಗಿದ್ದರೆ, ಇನ್ನು 5 ಗ್ಯಾರಂಟಿಗಳು ಹೊಸ ಘೋಷಣೆಗಳಾಗಿವೆ. ಶುಕ್ರವಾರ ಕಾಂಗ್ರೆಸ್‌ ಸಭೆಯಲ್ಲಿ ಮಾತನಾಡಿದ ಗೆಹ್ಲೋಟ್ ತಾವು ಮರು ಆಯ್ಕೆಯಾದರೆ ಎಲ್ಲ 7 ಗ್ಯಾರಂಟಿಗಳನ್ನು ಜಾರಿ ಮಾಡುವ ಭರವಸೆ ನೀಡಿದರು.

ಈ ಪೈಕಿ ಮನೆಯ ಯಜಮಾನತಿಗೆ ಗೃಹಲಕ್ಷ್ಮಿ ಯೋಜನೆ ಅಡಿ ವರ್ಷಕ್ಕೆ 10 ಸಾವಿರ ರೂ. ಹಾಗೂ 500 ರೂ .ನಲ್ಲಿ ಸಬ್ಸಿಡಿ ಸಿಲಿಂಡರ್‌ ನೀಡಿಕೆಯನ್ನು 3 ದಿನದ ಹಿಂದೆಯೇ ಪ್ರಕಟಿಸಿದ್ದರು. ಈ ಎರಡೂ ಸೇರಿ ಒಟ್ಟು 7 ಗ್ಯಾರಂಟಿಗಳನ್ನು ಶುಕ್ರವಾರ ಅವರು ಪ್ರಕಟಿಸಿದರು.

ಇದನ್ನು ಓದಿ: ಸೋಲಾರ್‌ ಬಿರುಗಾಳಿಗೆ ನಲುಗಿದ ಎರಡೂ ಪಕ್ಷಗಳು: ಈ ರಾಜ್ಯದ ಸಿಎಂ ತಂದೆಗಿಂತ ಹೆಚ್ಚು ಎಂದ ಹಾಸ್ಯ ನಟ!

ಹೊಸ ಘೋಷಣೆಗಳ ಪೈಕಿ, ಸರ್ಕಾರವು ರೈತರಿಂದ ಹಸು ಸಗಣಿಯನ್ನು ಕೆಜಿಗೆ 2 ರೂ. ನಂತೆ ಖರೀದಿಸಿ ರಸಗೊಬ್ಬರವಾಗಿ ಪರಿವರ್ತಿಸಲಿದೆ. ಪ್ರಸ್ತುತ ಭಾರತದಲ್ಲಿ ಕೇವಲ ಛತ್ತೀಸ್‌ಗಢದಲ್ಲಿ ಮಾತ್ರ ಈ ಯೋಜನೆ ಜಾರಿಯಲ್ಲಿದ್ದು ಅದನ್ನು ಗೋಧನ ನ್ಯಾಯ ಯೋಜನೆ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

7 ಗ್ಯಾರಂಟಿಗಳು 

  •  ಕುಟುಂಬದ ಯಜಮಾನಿಗೆ ವಾರ್ಷಿಕ 10,000 ರೂ.
  •  ಹಸು ಸಗಣಿ ಕೆಜಿಗೆ 2 ರೂ.ನಂತೆ ಸರ್ಕಾರದಿಂದ ಖರೀದಿ. ಈ ಸಗಣಿ ಮೂಲಕ ಸಾವಯವ ಗೊಬ್ಬರ ಹಾಗೂ ವಿವಿಧ ಉತ್ಪನ್ನಗಳ ತಯಾರಿಕೆ
  • ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಅಥವಾ ಲ್ಯಾಪ್‌ಟಾಪ್‌ ವಿತರಣೆ
  • ಪ್ರವಾಹದಂಥ ನೈಸರ್ಗಿಕ ವಿಪತ್ತಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ 15 ಲಕ್ಷ ರೂ.ವರೆಗೂ ಉಚಿತ ವಿಮೆ
  • ಎಲ್ಲ ವಿದ್ಯಾರ್ಥಿಗಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಸೌಲಭ್ಯ, ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ
  • ರಾಜ್ಯದ 1 ಕೋಟಿ ಕುಟುಂಬಗಳಿಗೆ 500 ರೂ.ಗೆ ಸಬ್ಸಿಡಿ ದರದಲ್ಲಿ ಗ್ಯಾಸ್‌ ಸಿಲಿಂಡರ್‌
  • ಹಳೆ ಪಿಂಚಣಿ ಪದ್ಧತಿ ಜಾರಿ, ಈ ಮೂಲಕ ಪಿಂಚಣಿಯಿಂದ ವಂಚಿತರಾದವರಿಗೆ ಪೆನ್ಷನ್‌

ಇದನ್ನೂ ಓದಿ: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಭೇಟಿಯಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್: ಭೇಟಿಯ ಮಹತ್ವ ಹೀಗಿದೆ..

ತೆಲಂಗಾಣದಲ್ಲಿ ಅಜರುದ್ದೀನ್‌ಗೆ ಕಾಂಗ್ರೆಸ್‌ ಟಿಕೆಟ್‌
ನವದೆಹಲಿ: ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ಗೆ ಜುಬಿಲಿ ಹಿಲ್ಸ್‌ ಕ್ಷೇತ್ರದಿಂದ ಟಿಕೆಟ್‌ ನೀಡಿದೆ. ಅಲ್ಲದೇ ಮಾಜಿ ಸಂಸದ ಮಧು ಗೌಡ ಯಾಕ್ಷಿ, ಪೊನ್ನಮ್‌ ಪ್ರಭಾಕರ್‌, ಕಂಡಿ ಶ್ರೀನಿವಾಸ್‌ ರೆಡ್ಡಿ, ತುಮ್ಲಾ ನಾಗೇಶ್ವರರಾವ್‌ ಮತ್ತು ರಾಜ್‌ಗೋಪಾಲ್‌ ರೆಡ್ಡಿ ಅವರಿಗೂ ಟಿಕೆಟ್‌ ನೀಡಿದೆ. ಇಲ್ಲಿಯವರೆಗೆ ಕಾಂಗ್ರೆಸ್‌ 100 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದ್ದು, ಇನ್ನು 19 ಸ್ಥಾನಗಳು ಬಾಕಿ ಇವೆ. ಶುಕ್ರವಾರ ದೆಹಲಿಯಲ್ಲಿ ನಡೆದ ಪಕ್ಷದ ಚುನಾವಣಾ ಸಮಿತಿಯ ಸಭೆಯ ಬಳಿಕ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಸರ್ಕಾರಿ ಉದ್ಯೋಗವಿಲ್ಲ: ಕಾಂಗ್ರೆಸ್‌ ಸರ್ಕಾರದಿಂದ ‘ಜಾಬ್‌ ಬುಲ್ಡೋಜರ್’ ಅಸ್ತ್ರ’!