Gurugram crime news: ಪೊಲೀಸರು ಸ್ಥಳಕ್ಕೆ ಬಂದಾಗ, ಆರೋಪಿ ಅರೆಬೆತ್ತಲೆಯಾಗಿ ಕಂಡುಬಂದಿದ್ದು, ಮಹಿಳೆ ಎಸ್‌ಯುವಿ ಕಾರಿನ ಹಿಂದಿನ ಸೀಟಿನಲ್ಲಿ ಪ್ರಜ್ಞಾಹೀನಳಾಗಿದ್ದಳು. ಸಂತ್ರಸ್ತೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು.

ಗುರುಗ್ರಾಮದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳು ಎದ್ದಿವೆ . ಅರಾವಳಿ ಬೆಟ್ಟಗಳ ಬಳಿಯಿರುವ ಜನಪ್ರಿಯ ಪ್ರವಾಸಿ ತಾಣವಾದ ಲೆಪರ್ಡ್ ಟ್ರಯಲ್‌ ಬಳಿ 23 ವರ್ಷದ ಯುವತಿಯನ್ನು ಅಪಹರಣ ಮಾಡಿ ಅತ್ಯಾ*ಚಾರಕ್ಕೆ ಯತ್ನಿಸಿದ ಭಯಾನಕ ಘಟನೆ ನಡೆದಿದೆ. ಇದೀಗ ಪೊಲೀಸರು 25 ವರ್ಷದ ಗೌರವ್ ರಥಿ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಕಾರ್ಯಕ್ರಮವೊಂದರಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿ ಆಕೆಯನ್ನು ಬಲವಂತವಾಗಿ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ಕೂರಿಸಿ ಅತ್ಯಾ*ಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖೆ ಮುಂದುವರೆದಿದ್ದು, ಪೊಲೀಸರು ಘಟನೆಯ ಪ್ರತಿಯೊಂದು ಅಂಶವನ್ನು ತನಿಖೆ ಮಾಡುತ್ತಿದ್ದಾರೆ.

ಘಟನೆ ಹೇಗೆ ನಡೆಯಿತು?

ಸಂತ್ರಸ್ತೆಯ ಸ್ನೇಹಿತ ನೀಡಿದ ದೂರಿನ ಪ್ರಕಾರ, ಭಾನುವಾರ ಬೆಳಗ್ಗೆ ಇಬ್ಬರೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಲೆಪರ್ಡ್ ಟ್ರಯಲ್‌ ಬಳಿ ನಿಲ್ಲಲು ನಿರ್ಧರಿಸಿದರು. ಇದ್ದಕ್ಕಿದ್ದಂತೆ ದಾರಿಯಲ್ಲಿ ಒಂದು ಸ್ಕಾರ್ಪಿಯೋ ಎಸ್‌ಯುವಿ ಅವರನ್ನು ತಡೆದಿದೆ. ಆಗ ಯುವತಿಯ ಸ್ನೇಹಿತ ಕಾರಿನಿಂದ ಇಳಿದು ಗೌರವ್ ರಥಿಯೊಂದಿಗೆ ವಾಗ್ವಾದ ನಡೆಸಿದ್ದಾನೆ ಎಂದು ವರದಿಯಾಗಿದೆ. ಈ ಮಧ್ಯೆ ಸಂತ್ರಸ್ತೆಯೂ ವಾಹನದಿಂದ ಇಳಿದಿದ್ದಾಳೆ. ಗೌರವ್ ರಥಿ ಯುವತಿಯ ಸ್ನೇಹಿತನ ಮೊಬೈಲ್ ಫೋನ್ ಕಸಿದುಕೊಂಡು, ಅವನ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯನ್ನು ಬಲವಂತವಾಗಿ ಎಸ್‌ಯುವಿಯಲ್ಲಿ ಕರೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿಯ ಸ್ನೇಹಿತ ಹುಂಡೈ ಔರಾ ಕಾರಿನಲ್ಲಿ ಆರೋಪಿ ಗೌರವ್ ರಥಿಯ ಎಸ್‌ಯುವಿಯನ್ನು ಬೆನ್ನಟ್ಟಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ತಕ್ಷಣ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ, ಪೊಲೀಸರು ಲೆಪರ್ಡ್ ಟ್ರಯಲ್‌ನಿಂದ ಸ್ವಲ್ಪ ದೂರದಲ್ಲಿರುವ ಸಕತ್‌ಪುರ ಪ್ರದೇಶದಲ್ಲಿ ಸ್ಕಾರ್ಪಿಯೋ ಎಸ್‌ಯುವಿಯನ್ನು ವಶಪಡಿಸಿಕೊಂಡರು.

ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಪತ್ತೆ

ಎಸ್‌ಯುವಿ ಕಾರಿನ ಒಂದು ಚಕ್ರ ಚರಂಡಿಯಲ್ಲಿ ಸಿಲುಕಿಕೊಂಡಿರುವುದನ್ನು ಮತ್ತು ವಾಹನದ ಹುಡ್ ಹಾನಿಗೊಳಗಾಗಿರುವುದನ್ನು ಪೊಲೀಸರು ಕಂಡುಕೊಂಡರು. ಈ ಅಪಘಾತಕ್ಕೆ ಅತಿವೇಗವೇ ಕಾರಣವಾಗಿರಬಹುದು ಎಂದು ಸೂಚಿಸುತ್ತದೆ. ಪೊಲೀಸರು ಸ್ಥಳಕ್ಕೆ ಬಂದಾಗ, ಆರೋಪಿ ಅರೆಬೆತ್ತಲೆಯಾಗಿ ಕಂಡುಬಂದಿದ್ದು, ಮಹಿಳೆ ಎಸ್‌ಯುವಿ ಕಾರಿನ ಹಿಂದಿನ ಸೀಟಿನಲ್ಲಿ ಪ್ರಜ್ಞಾಹೀನಳಾಗಿದ್ದಳು. ಸಂತ್ರಸ್ತೆಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಗೌರವ್ ರಥಿ ಫ್ರೂಟ್ ಸ್ಟಾಲ್ ನಡೆಸುತ್ತಿದ್ದು, ಪರಿಚಯಸ್ಥರಿಂದ ಆ ಎಸ್‌ಯುವಿಯನ್ನು ಎರವಲು ಪಡೆದಿದ್ದಾನೆ ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಪೊಲೀಸರು ಈಗ ವಾಹನದ ಮಾಲೀಕರನ್ನು ಪ್ರಶ್ನಿಸುತ್ತಿದ್ದಾರೆ.