*  ಅಂಗನವಾಡಿ ಸಹಾಯಕಿ ಸರೋಜಾ ಅಶೋಕ ನಾಯರ ಹತ್ಯೆ*  ಕೃಷ್ಣ ಸುಬ್ಬಾ ನಾಯ್ಕ ಬಂಧಿತ ಆರೋಪಿ*  ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು  

ಯಲ್ಲಾಪುರ(ಸೆ.18): ತಾಲೂಕಿನ ತುಡಗುಣಿಯ ವಿಶಾಲನಗರದ ನಿವಾಸಿ ಅಂಗನವಾಡಿ ಸಹಾಯಕಿ ಸರೋಜಾ ಅಶೋಕ ನಾಯರ(45) ಎಂಬವರನ್ನು ಗುರುವಾರ ರಾತ್ರಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಕೊಲೆಯಾದ ಸರೋಜಾ ತಾಯಿ ಶ್ರೀಮತಿ ನೀಡಿದ ದೂರಿನನ್ವಯ ಕೊಲೆ ಆರೋಪಿಯನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಸಿ ತಾಲೂಕಿನ ಕೆರೆಕೊಪ್ಪ ನಿವಾಸಿ, ಹಾಲಿ ಗೋವಾದ ಮಾಪ್ಸಾದಲ್ಲಿ ವಾಸವಾಗಿರುವ ಕೃಷ್ಣ ಸುಬ್ಬಾ ನಾಯ್ಕ(46) ಬಂಧಿತ ಆರೋಪಿ. ಕೊಲೆಯಾದ ಸರೋಜಾ ನಾಯರ್‌ ತಂಗಿ ಮಂಗಲಾ ಜತೆ ಸ್ನೇಹ ಮಾಡಿದ ಈತ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಆಕೆಯೊಂದಿಗೆ ಗೋವಾದಲ್ಕಿ ನೆಲೆಸಿದ್ದ. ಗೋವಾದಲ್ಲಿ ಮಂಗಲಾಳನ್ನು ಚೆನ್ನಾಗಿ ನೋಡಿಕೊಳ್ಳದೇ ಹೊಡೆದು- ಬಡಿದು ಜಗಳ ಮಾಡಿಕೊಂಡಿದ್ದಾನೆ. ಕೊಲ್ಲುವ ಬೆದರಿಕೆ ಹಾಕಿರುವ ಕಾರಣಕ್ಕೆ ಇತ್ತೀಚೆಗೆ ಆರೋಪಿಯ ಜತೆ ಜಗಳ ಮಾಡಿಕೊಂಡ ಮಂಗಲಾ ಅಕ್ಕನ ಮನೆಗೆ ಬಂದಿದ್ದಳು. ಈ ಸಂಬಂಧ ಆರೋಪಿ ಕೃಷ್ಣಾ ನಾಯ್ಕ ಗುರುವಾರ ರಾತ್ರಿ ಸರೋಜಾ ಅವರ ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೆ, ಸರೋಜಾಳನ್ನು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ. ಅಲ್ಲದೇ ಪಿರ್ಯಾದಿ ಶ್ರೀಮತಿಯ ಮೊಮ್ಮಗ ಅಕ್ಷಯ(21)ನನ್ನು ಬಲವಂತವಾಗಿ ಎಳೆದುಕೊಂಡು ಕಾಡಿನೊಳಗೆ ಓಡಿ ಹೋಗಿದ್ದಾನೆ.

ಫುಟ್ಬಾಲ್‌ ಮೈದಾನದಲ್ಲಿ ಅಟ್ಟಾಡಿಸಿ ರೌಡಿಶೀಟರ್‌ ಹತ್ಯೆ

ಪ್ರಕರಣ ದಾಖಲಿಸಿಕೊಂಡ ಪೊಲೀಸ್‌ ನಿರೀಕ್ಷಕ ಸುರೇಶ ಯೆಳ್ಳೂರು, ಪಿಎಸ್‌ಐ ಮಂಜುನಾಥ ಗೌಡರ್‌ ನೇತೃತ್ವದಲ್ಲಿ ಪಿಎಸ್‌ಐ ಪ್ರಿಯಾಂಕಾ ನ್ಯಾಮೇಗೌಡ ಹಾಗೂ ಪೊಲೀಸ್‌ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.