Crime News: ರಾತ್ರಿ ಊಟ ಬಡಿಸಲಿಲ್ಲ ಎಂದು ಪತ್ನಿಯನ್ನು ಕೊಂದು ಶವದ ಪಕ್ಕದಲ್ಲೇ ಮಲಗಿದ ಪತಿ
ರಾತ್ರಿ ಊಟ ಬಡಿಸಲಿಲ್ಲ ಎಂಬ ಜಗಳದಲ್ಲಿ ಪತ್ನಿಯನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಂಪತಿಗಳು ಒಟ್ಟಿಗೆ ಮದ್ಯ ಸೇವಿಸಿದ್ದು, ಆರೋಪಿ ಪತಿ ಮೃತದೇಹದ ಜೊತೆ ಮಲಗಿದ್ದ.
ನವದೆಹಲಿ (ಜೂ.22): ದೆಹಲಿಯ ಸುಲ್ತಾನ್‌ಪುರದಲ್ಲಿರುವ ಮನೆಯಲ್ಲಿ 47 ವರ್ಷದ ವ್ಯಕ್ತಿಯೊಬ್ಬ ಜಗಳದ ನಂತರ ಪತ್ನಿಯನ್ನು ಥಳಿಸಿ ಕೊಚ್ಚಿ ಕೊಲೆ ಮಾಡಿದ್ದಾರೆ. ದಂಪತಿ ಮದ್ಯ ಸೇವಿಸಿದ್ದು, ರಾತ್ರಿ ಊಟ ನೀಡಲು ಪತ್ನಿ ನಿರಾಕರಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಆಕೆಯನ್ನು ಹತ್ಯೆಗೈದಿದ್ದಾನೆ. ಇದಾದ ಬಳಿಕ ಪತಿ ಪತ್ನಿಯ ದೇಹದೊಂದಿಗೆ ಮಲಗಿದ್ದು ಎಚ್ಚರವಾದ ನಂತರ ಅವಳು ಸತ್ತಿದ್ದಾಳೆಂದು ಅರಿತಿದ್ದಾನೆ. ಆರೋಪಿಯನ್ನು ಸುಲ್ತಾನಪುರ ನಿವಾಸಿ ವಿನೋದ್ ಕುಮಾರ್ ದುಬೆ (47) ಎಂದು ಗುರುತಿಸಲಾಗಿದೆ.
ಅಪರಾಧವನ್ನು ಮಾಡಿದ ನಂತರ, ಆರೋಪಿಯು 40,000 ರೂ.ಗೂ ಹೆಚ್ಚು ನಗದು ಹಣದೊಂದಿಗೆ ದೆಹಲಿಯಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ಆದರೆ ಪರಾರಿಯಾಗುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದು ರಾಷ್ಟ್ರ ರಾಜಧಾನಿ ದೆಹಲಿಯ ಮತ್ತೊಂದು ಪ್ರದೇಶದಿಂದ ಆತನನ್ನು ಬಂಧಿಸಲಾಗಿದೆ.
ಹೆಂಡತಿಯನ್ನು ದಿಂಬಿನಿಂದ ಹಿಸುಕಿ ಕೊಂದ ಪತಿ: ಜೂನ್ 17 ರಂದು ಬೆಳಗ್ಗೆ 9.30ಕ್ಕೆ ವಿನೋದ್ ಕುಮಾರ್ ದುಬೆ ತನ್ನ ಪತ್ನಿ ಸೋನಾಲಿ ದುಬೆಯನ್ನು ಕೊಂದಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ನೋಡಿದಾಗ ಆರೋಪಿ ತನ್ನ ಪತ್ನಿಯನ್ನು ತಲೆದಿಂಬಿನ ಸಹಾಯದಿಂದ ಹೊಡೆದು ಹಿಸುಕಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 259, 202 ಮತ್ತು 302 ರ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಚನ್ನಗಿರಿಯಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ: ಭಯಾನಕ ವಿಡಿಯೋ ಮೊಬೈಲ್‌ನಲ್ಲಿ ಸೆರೆ
"ಪೊಲೀಸ್ ತಂಡವು ಆರೋಪಿಯ ಬಗ್ಗೆ ಕರೆ ಮಾಡಿದವರು ಮತ್ತು ಸ್ಥಳೀಯರನ್ನು ವಿಚಾರಣೆ ನಡೆಸಿತು. ಕಣ್ಗಾವಲು ಮತ್ತು ತಾಂತ್ರಿಕ ವಿಶ್ಲೇಷಣೆಯ ಮೂಲಕ ಆರೋಪಿಯ ಸ್ಥಳವನ್ನು ಪತ್ತೆ ಮಾಡಲಾಯಿತು. ಬಳಿಕ ಆರೋಪಿ ವಿನೋದ್ ಕುಮಾರ್ ದುಬೆಯನ್ನು ಬಂಧಿಸಲಾಯಿತು, " ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ( ದಕ್ಷಿಣ) ಪವನ್ ಕುಮಾರ್ ಹೇಳಿದರು.
ಅವರ ಬಳಿಯಿದ್ದ ಒಟ್ಟು 43,280 ಮತ್ತು ಅವರ ವಸ್ತುಗಳನ್ನು ಒಳಗೊಂಡ ಬ್ಯಾಗ್, ಎರಡು ಮದ್ಯದ ಬಾಟಲಿಗಳು ಮತ್ತು ರಕ್ತದ ಕಲೆಯುಳ್ಳ ದಿಂಬುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ಅಪರಾಧ ಒಪ್ಪಿಕೊಂಡ ಪತಿ: ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿಯು ಗುರುವಾರ ರಾತ್ರಿ ತಾನು ಮತ್ತು ತನ್ನ ಪತ್ನಿ ಮದ್ಯ ಸೇವಿಸಿದ್ದು, ರಾತ್ರಿ ಊಟ ನೀಡುವಂತೆ ಕೇಳಿದಾಗ ಆಕೆ ನಿರಾಕರಿಸಿದ್ದಾಳೆ ಎಂದು ತಿಳಿಸಿದ್ದಾರೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ಪತ್ನಿ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ಕುಪಿತಗೊಂಡ ವಿನೋದ್ ಕೋಪದ ಭರದಲ್ಲಿ ಪತ್ನಿಯನ್ನು ಕೊಂದಿದ್ದಾನೆ. ನಗದು ಸಮೇತ ದೆಹಲಿಯಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಆರೋಪ: ಪೊಲೀಸರ ಮೇಲೆಯೇ ಎಫ್‌ಐಆರ್ ದಾಖಲು