ಚನ್ನಗಿರಿಯಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ: ಭಯಾನಕ ವಿಡಿಯೋ ಮೊಬೈಲ್‌ನಲ್ಲಿ ಸೆರೆ
* ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ತರಳಬಾಳು ವೃತ್ತದಲ್ಲಿ ನಡೆದ ಘಟನೆ
* ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ
* ತೀವ್ರ ಆಕ್ರೋಶ ಹೊರಹಾಕುತ್ತಿದ್ದ ಸಲೀಂ
ದಾವಣಗೆರೆ/ಚನ್ನಗಿರಿ(ಜೂ.22): ತನ್ನ ಎರಡನೇ ಪತ್ನಿಯನ್ನು ತನ್ನಿಂದ ದೂರ ಮಾಡಿದ್ದಾನೆಂಬ ಕಾರಣಕ್ಕೆ ಖಾಸಗಿ ಬಸ್ ಏಜೆಂಟನನ್ನು ಹಮಾಲಿ ಕೆಲಸಗಾರನೊಬ್ಬ ಹಾಡಹಾಗಲೇ ಜನದಟ್ಟಣೆ ವೃತ್ತದಲ್ಲಿ ಭೀಕರವಾಗಿ ಇರಿದು ಹತ್ಯೆ ಮಾಡಿದ ಘಟನೆ ಚನ್ನಗಿರಿ ಪಟ್ಟಣದ ತರಳಬಾಳು ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ನಿವಾಸಿ, ಖಾಸಗಿ ಬಸ್ಸು ಏಜೆಂಟ್ ಜಾಕೀರ್(52 ವರ್ಷ) ಕೊಲೆಯಾದ ವ್ಯಕ್ತಿ. ಜಾಕೀರ್ ನಲ್ಲೂರು ಗ್ರಾಮದ ಜಾಮಿಯಾ ಮಸೀದಿ ಕಾರ್ಯದರ್ಶಿಯಾಗಿದ್ದ ವೇಳೆ ತನ್ನ ಎರಡನೇ ಪತ್ನಿ ಫಾತಿಮಾಳನ್ನು ಬೇರೆ ಮಾಡಿದ್ದ ಎಂಬ ಕಾರಣಕ್ಕೆ ಹಮಾಲಿ ಕೆಲಸಗಾರ ಸಲೀಂ ಎಂಬಾತ ಚನ್ನಗಿರಯ ಕೈಮರ ಸಮೀಪದ ತರಳಬಾಳು ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಅಮಾನುಷವಾಗಿ ಇರಿದು ಕೊಂದಿದ್ದು, ಈ ಎಲ್ಲಾ ದೃಶ್ಯಗಳು ಮೊಬೈಲ್‌ಗಳಲ್ಲಿ ಸೆರೆಯಾಗಿವೆ.
ಬೆಂಗಳೂರಿನಲ್ಲಿ ಕೇವಲ 50 ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಸ್ನೇಹಿತ!
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ:
ನಲ್ಲೂರಿನಿಂದ ಎಂದಿನಂತೆ ಬೈಕ್‌ನಲ್ಲಿ ಚನ್ನಗಿರಿ ಕಡೆಗೆ ಬರುತ್ತಿದ್ದ ಜಾಕೀರ್‌ಗೆ ತರಳಬಾಳು ವೃತ್ತದಲ್ಲಿ ಶಿವಮೊಗ್ಗ-ಭದ್ರಾವತಿ-ದಾವಣಗೆರೆಗೆ ಸಂಪರ್ಕ ಕಲ್ಪಿಸುವ ವೃತ್ತದಲ್ಲಿ ತಡೆದ ಹಮಾಲಿ ಕೆಲಸಗಾರ ಸಲೀಂ, ತನ್ನ ಬಳಿ ಇದ್ದ ಅರಿತವಾದ ಆಯುಧದಿಂದ ಏಕಾಏಕಿ ಇರಿದಿದ್ದಾನೆ. ಹಠಾತ್ ದಾಳಿಯಿಂದ ಜಾಕೀರ್ ತಪ್ಪಿಸಿಕೊಂಡು ಓಡಲೆತ್ನಿಸಿದರೂ ನೋವಿನಿಂದಾಗಿ ಅಲ್ಲಿಯೇ ಕುಸಿದು ಕುಳಿತರೂ ಸಲೀಂ ಆಕ್ರೋಶ ಮಾತ್ರ ಶಮನವಾಗದೇ, ಮನಸೋ ಇಚ್ಛೆ ಚಾಕುವಿನಿಂದ ಇರಿದಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಕಾರು, ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದವರು ಸೆರೆ ಹಿಡಿದಿರುವುದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ.
ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಸಾವು:
ಜಾಕೀರ್‌ನನ್ನು ಅಮಾನುಷವಾಗಿ ಇರಿಯುತ್ತಿದ್ದರೂ ಸ್ಥಳದಲ್ಲಿದ್ದವರೂ ಬಿಡಿಸುವಂತಹ ಧೈರ್ಯವನ್ನು ತೋರಲಿಲ್ಲ. ಆತನ ಆಕ್ರೋಶ ಕಂಡು ಬಿಡಿಸಲು ಹೋದವರೂ ಹಿಂದೇಟು ಹಾಕುವಂತಹ ಸ್ಥಿತಿ ಅಲ್ಲಿತ್ತು. ಯಾರೋ ಕೆಲವರು ಬಿಡಿಸಲು ಮುಂದಾದರೂ ಸಲೀಂ ಮಾತ್ರ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕಡೆಗೆ ಸಲೀಂನಿಂದ ತೀವ್ರ ದಾಳಿಗೆ ತುತ್ತಾದ ಬಸ್ಸು ಏಜೆಂಟ್ ತೀವ್ರ ರಕ್ತಸ್ರಾವವಾಗಿ, ನರಳಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದರಾದರೂ ಅಷ್ಟರಲ್ಲಿ ಜಾಕೀರ್ ತೀವ್ರ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದ. ಆರೋಪಿ ಸಲೀಂನನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ: ಬೆಳ್ಳಂಬೆಳಿಗ್ಗೆ ಕುಂದಾನಗರಿಯಲ್ಲಿ ಫೈರಿಂಗ್, ಕೊಲೆ ಆರೋಪಿ ಬಂಧನ
ತೀವ್ರ ಆಕ್ರೋಶ ಹೊರಹಾಕುತ್ತಿದ್ದ ಸಲೀಂ:
ಹಮಾಲಿ ಕೆಲಸ ಮಾಡುವ ಸಲೀಂಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿ ರುಕ್ಸಾನಾ ಬಾನು, ಎರಡನೇ ಹೆಂಡತಿ ಫಾತಿಮಾ. ಹಮಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಲೀಂನಿಂದ ಎರಡನೇ ಪತ್ನಿ ಫಾತಿಮಾ ದೂರವಾಗಲು ಆಗ ನಲ್ಲೂರು ಗ್ರಾಮದ ಜಾಮಿಯಾ ಮಸೀದಿ ಕಾರ್ಯದರ್ಶಿಯಾಗಿದ್ದ ಜಾಕೀರ್ ಕಾರಣ. ಅಲ್ಲದೇ, ತನ್ನಿಂದ ದೂರವಾದ ಫಾತಿಮಾ ಮತ್ತೆ ಅಮ್ಜದ್ ಎಂಬಾತನನ್ನು ಮದುವೆಯಾಗುವುದಕ್ಕೂ ಇದೇ ಜಾಕೀರನೇ ಕಾರಣ. ತಮ್ಮಿಬ್ಬರನ್ನೂ ಬೇರ್ಪಡಿಸಿದ್ದ ಜಾಕೀರ್ ಎಂಬ ಆಕ್ರೋಶವನ್ನು ಕೊಲೆ ಮಾಡುತ್ತಿದ್ದ ವೇಳೆ ಸಲೀಂ ಹೊರ ಹಾಕುತ್ತಿದ್ದ ಎನ್ನಲಾಗಿದೆ.
ಕಳೆದ ಕೆಲ ತಿಂಗಳಿನಿಂದ ಶಾಂತವಾಗಿದ್ದ ಚನ್ನಗಿರಿ ಪಟ್ಟಣದಲ್ಲಿ ಈಗ ಏಕಾಏಕಿ ಹಾಡಹಗಲೇ, ಜನದಟ್ಟಣೆ ವೃತ್ತದಲ್ಲಿ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಇಡೀ ಪಟ್ಟಣದ ವಾಸಿಗಳನ್ನು ಬೆಚ್ಚಿ ಬೀಳಿಸಿದೆ. ಪೊಲೀಸರೂ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಜಾಕೀರ್ ಹತ್ಯೆ ಪ್ರಕರಣವು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿ ನಲ್ಲೂರು ಗ್ರಾಮದ ವಾಸಿ, ಹಮಾಲಿ ಕೆಲಸಗಾರ ಸಲೀಂನನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.