ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಟೆಂಪೋ ಚಾಲಕ ಸೇರಿದಂತೆ ಇಬ್ಬರು ವ್ಯಕ್ತಿಗಳು ಪ್ರತ್ಯೇಕವಾಗಿ ಹತ್ಯೆಗೀಡಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಹಾಗೂ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ.

ಬೆಂಗಳೂರು: ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಟೆಂಪೋ ಚಾಲಕ ಸೇರಿದಂತೆ ಇಬ್ಬರು ವ್ಯಕ್ತಿಗಳು ಪ್ರತ್ಯೇಕವಾಗಿ ಹತ್ಯೆಗೀಡಾಗಿರುವ ಘಟನೆ ಕುಮಾರಸ್ವಾಮಿ ಲೇಔಟ್‌ ಹಾಗೂ ವರ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿವೆ. ದೊಮ್ಮಸಂದ್ರದ ನಿವಾಸಿ ಮುನಿಯಪ್ಪ (45) ಹಾಗೂ ಕೋಣನಕುಂಟೆ ನಿವಾಸಿ ಶರತ್‌ ಕುಮಾರ್‌ (24) ಮೃತರು. ಈ ಹತ್ಯೆಗಳು ಶುಕ್ರವಾರ ರಾತ್ರಿ ನಡೆದಿದ್ದು, ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಆರೋಪಿಗಳಾದ ಲೋಕೇಶ್‌, ಸಂತೋಷ್‌ ಹಾಗೂ ಶ್ರೀಧರ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಂದೆಗೆ ಚಾಡಿ ಹೇಳಿದಕ್ಕೆ ಚಾಲಕನ ಹತ್ಯೆ

ಆನೇಕಲ್‌ ಹತ್ತಿರದ ಸರ್ಜಾಪುರದ ನೆಕ್ಕುಂದಿ ದೊಮ್ಮಸಂದ್ರದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ ಮುನಿಯಪ್ಪ, ಟೆಂಪೋ ಚಾಲಕನಾಗಿ ಜೀವನ ಸಾಗಿಸುತ್ತಿದ್ದರು. ಅವರ ನೆರೆ ಮನೆಯಲ್ಲೇ ಶ್ರೀಧರ್‌ ಕುಟುಂಬ ನೆಲೆಸಿದೆ. ಮದ್ಯ ವ್ಯಸನಿಯಾಗಿದ್ದ ಶ್ರೀಧರ್‌ನ ಕೆಟ್ಟ ಚಟುವಟಿಕೆಗಳ ಬಗ್ಗೆ ಆತನ ತಂದೆಗೆ ಮುನಿಯಪ್ಪ (Muniappa) ಹೇಳಿದ್ದರು. ಇದರಿಂದ ಕೆರಳಿದ ಶ್ರೀಧರ್‌(Shridhar), ಶುಕ್ರವಾರ ರಾತ್ರಿ ವರ್ತೂರಿನ ಎಸ್‌ಎಸ್‌ಎಸ್‌ ಬಾರ್‌ಗೆ ಮದ್ಯ ಸೇವನೆ ನೆಪದಲ್ಲಿ ಮುನಿಯಪ್ಪ ಜತೆ ಬಂದಿದ್ದಾನೆ. ಆಗ ಚಾಡಿ ಮಾತು ವಿಚಾರ ಪ್ರಸ್ತಾಪಿಸಿ ಶ್ರೀಧರ್‌ ಗಲಾಟೆ ಶುರು ಮಾಡಿದ್ದಾನೆ. ಈ ಹಂತದಲ್ಲಿ ರೊಚ್ಚಿಗೆದ್ದ ಶ್ರೀಧರ್‌, ಮುನಿಯಪ್ಪ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕೃತ್ಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ ಪರಾರಿಯಾಗುವ ಮುನ್ನವೇ ಆರೋಪಿಯನ್ನು ಬಂಧಿಸಿದ್ದಾರೆ.

ಮದಿರೆಯ ನಶೆಯಲ್ಲಿ ಊರಿಗೆ ಊರೇ ಸುಸ್ತು: ಬೋರ್‌ವೆಲ್ ಜಗ್ಗಿದ್ರೂ ಶರಾಬು ಬಂತು

ಕೊಲ್ಲಲು ಬಂದು ತಾನೇ ಕೊಲೆಯಾದ

ಹಳೇ ಕೊಲೆ ಪ್ರಕರಣದ ಸಾಕ್ಷಿದಾರನನ್ನು ಕೊಲ್ಲಲು ಹೋಗಿ ಕೊನೆಗೆ ಡೆಲವರಿ ಬಾಯ್‌ ಶರತ್‌ ತಾನೇ ಹತ್ಯೆಗೀಡಾಗಿದ ವಿಚಿತ್ರ ಘಟನೆ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಹತ್ಯೆ ಸಂಬಂಧ ಕೋಣನಕುಂಟೆಯ(Konnakunte Cross) ಲೋಕೇಶ್‌ ಹಾಗೂ ಸಂತೋಷ್‌ ಬಂಧನವಾಗಿದೆ. ಕ್ಲಬ್‌ ವಿವಾದದ ಹಿನ್ನಲೆಯಲ್ಲಿ 2018ರಲ್ಲಿ ಆಟೋಮೊಬೈಲ್‌ ಅಂಗಡಿ ಮಾಲಿಕ ಲೋಕೇಶ್‌ ಸ್ನೇಹಿತ ಜಯಂತ್‌ ಕೊಲೆಯಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಶರತ್‌ (Sharat) ಆರೋಪಿಯಾಗಿದ್ದರೆ, ಲೋಕೇಶ್‌ (Lokesh) ದೂರುದಾರನಾಗಿದ್ದ. ಇತ್ತೀಚೆಗೆ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯಲ್ಲಿ ಆರಂಭವಾಗಿತ್ತು. ಆಗ ತನ್ನ ವಿರುದ್ಧ ನ್ಯಾಯಾಲಯಕ್ಕೆ ಲೋಕೇಶ್‌ ಸಾಕ್ಷಿ ಹೇಳುತ್ತಾನೆ ಎಂದು ಶರತ್‌ ಹೆದರಿದ್ದ. ಶುಕ್ರವಾರ ರಾತ್ರಿ ತನ್ನ ಸೋದರ ಸಂಬಂಧಿ ಸಂತೋಷ್‌ ಜತೆ ಕೋಣನಕುಂಟೆ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಲೋಕೇಶ್‌ ಮೇಲೆ ಶರತ್‌ ದಾಳಿ ನಡೆಸಿದ್ದಾನೆ. ಆಗ ಇಬ್ಬರು ಪರಸ್ಪರ ಕೈ-ಕೈ ಮಿಲಾಯಿಸಿದ್ದು, ಕೊನೆಗೆ ಶರತ್‌ ಕೈಯಿಂದ ಚಾಕು ಕಸಿದು ಅದೇ ಚಾಕುವಿನಿಂದ ಆತನಿಗೆ ಲೋಕೇಶ್‌ ಇರಿದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಎಣ್ಣೆ ಕಿಕ್ಕಲ್ಲಿ ಯುವಕ ಯವತಿ ಮಧ್ಯೆ ಫುಲ್ ಕಿರಿಕ್: viral video