ಮಧುರೈನಲ್ಲಿ ಪೊಲೀಸ್ ವಿಚಾರಣೆಗೆ ಹೋದ ಯುವಕ ಸಾವನ್ನಪ್ಪಿದ್ದು, ಕುಟುಂಬಸ್ಥರು ಪೊಲೀಸರ ವಿರುದ್ಧ ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಚಿನ್ನ ಕಳ್ಳತನ ಪ್ರಕರಣದಲ್ಲಿ ವಿಚಾರಣೆಗೆ ಕರೆದೊಯ್ದಾಗ ಈ ಘಟನೆ ನಡೆದಿದೆ.
ಮಧುರೈ: ಪೊಲೀಸ್ ವಿಚಾರಣೆಗೆ ಹೋದ ಯುವಕನೋರ್ವ ಅದೇ ವೇಳೆ ಸಾವನ್ನಪ್ಪಿದ್ದು, ಕುಟುಂಬದವರು ಪೊಲೀಸರ ವಿರುದ್ಧ ಆರೋಪ ಮಾಡಿ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮಧುರೈನ ಶಿವಗಂಗೆಯಲ್ಲಿ ಘಟನೆ ನಡೆದಿದೆ.
ಘಟನೆಯ ಹಿನ್ನೆಲೆ
ಮಧುರೈ ಜಿಲ್ಲೆಯ ತಿರುಮಂಗಲಂನ ಶಿವಕಾಮಿ ಮತ್ತು ಅವರ ಪತ್ನಿ ನಿಖಿತಾ ಶಿವಗಂಗೆ ಜಿಲ್ಲೆಯ ಮಡಪುರಂ ದೇವಸ್ಥಾನಕ್ಕೆ ಕಾರಿನಲ್ಲಿ ಹೋಗಿದ್ದರು. ನಿಖಿತಾ ಕಾರನ್ನು ಚಾಲನೆ ಮಾಡುತ್ತಿದ್ದರು. ಅಲ್ಲಿಗೆ ತಲುಪಿದ ಬಳಿಕ, ನಿಖಿತಾ ತಮ್ಮ ಕಾರನ್ನು ಪಕ್ಕಕ್ಕೆ ನಿಲ್ಲಿಸುವಂತೆ ಕಾವಲುಗಾರ ಅಜಿತ್ ಕುಮಾರ್ (28) ಅವರಿಗೆ ಕಾರಿನ ಕೀಲಿಯನ್ನು ನೀಡಿದ್ದಾರೆ. ಈ ವೇಳೆ ತನಗೆ ಕಾರು ಚಾಲನೆ ಮಾಡಲು ಬರುವುದಿಲ್ಲ ಎಂದು ಅಜಿತ್ ಕುಮಾರ್ ಕಾರಿನ ಕೀಯನ್ನು ಬೇರೆಯವರಿಗೆ ನೀಡಿ ಕಾರು ಪಾರ್ಕಿಂಗ್ ಮಾಡಲು ಹೇಳಿದ್ದಾರೆ.
ಇತ್ತ ನಿಖಿತಾ ತಮ್ಮ ಪತಿಯ ಜೊತೆ ದೇವಸ್ಥಾನಕ್ಕೆ ಹೋಗಿ ದರ್ಶನ ಮುಗಿಸಿ ವಾಪಸ್ ಬಂದಿದ್ದು, ನಂತರ ಕಾರಿನಲ್ಲಿದ್ದ 9 ಪವನ್ ಚಿನ್ನ ಕಾಣೆಯಾಗಿರುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಕಾವಲುಗಾರ ಅಜಿತ್‌ಕುಮಾರ್ ಅವರನ್ನು ಕೇಳಿದಾಗ ಅವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇದಾದ ನಂತರ ನಿಖಿತಾ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಅಲ್ಲಿನ ಪೊಲೀಸರು ಅಜಿತ್ ಕುಮಾರ್ ಅವರನ್ನು ವಿಚಾರಣೆಗಗಾಗಿ ಕರೆದೊಯ್ದಿದ್ದಾರೆ. ಆದರೆ ಸಂಜೆ 6 ಗಂಟೆಗೆ ವೇಳೆಗೆ ಅಜಿತ್‌ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಅವರನ್ನು ಪೊಲೀಸರು ಶಿವಗಂಗೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ ಮಧುರೈನ ಖಾಸಗಿ ಆಸ್ಪತ್ರೆಗೆ ಬರುವಾಗಲೇ ಅಜಿತ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆ ಖಂಡಿಸಿ ಅಜಿತ್ ಕುಮಾರ್ ಸಂಬಂಧಿಕರು ತಿರುಪ್ಪುವನಂ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದು,. ಪೊಲೀಸರ ಹಲ್ಲೆಯಿಂದಲೇ ಅಜಿತ್ ಕುಮಾರ್ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ 6 ಪೊಲೀಸರ ಅಮಾನತು
ಘಟನೆ ಸಂಬಂಧ ಅಧಿಕಾರಿಗಳು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ್ದು, ಅಜಿತ್ ಕುಮಾರ್‌ನನ್ನು ವಿಚಾರಣೆಗೆ ಕರೆದೊಯ್ದ 6 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ನಯಿನಾರ್ ನಾಗೇಂದ್ರನ್ ಖಂಡಿಸಿದ್ದು, ಇದು ಪೊಲೀಸರ ಕ್ರೌರ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಅವರು ಶಿವಗಂಗೆ ಜಿಲ್ಲೆಯ ತಿರುಪ್ಪುವನಂನಲ್ಲಿ ಪೊಲೀಸ್ ವಿಚಾರಣೆಗೆ ಕರೆದೊಯ್ದ ಯುವಕ ಸಾವನ್ನಪ್ಪಿರುವುದು ಆಘಾತಕಾರಿ. ಮಡಪುರಂ ದೇವಸ್ಥಾನದ ಅಜಿತ್ ಕುಮಾರ್‌ರನ್ನು 7 ಪೊಲೀಸರು 2 ದಿನಗಳ ಕಾಲ ಹೊಡೆದು ಚಿತ್ರಹಿಂಸೆ ನೀಡಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಇದು ಲಾಕ್-ಅಪ್ ಡೆತ್ ಎಂಬ ಅನುಮಾನವಿದೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಜಿತ್ ಕುಮಾರ್ ಮತ್ತು ಅವರ ಸಹೋದರನನ್ನು ಕರೆದೊಯ್ಯುವಾಗ ಹಗ್ಗದಿಂದ ಕಟ್ಟಿ ಹೊಡೆದಿದ್ದಾರೆ ಎಂದು ಸಹೋದರ ಹೇಳಿದ್ದಾರೆ. ಇದು ಪೊಲೀಸರ ಕ್ರೌರ್ಯವನ್ನು ತೋರಿಸುತ್ತದೆ. ಡಿಎಂಕೆ ಆಡಳಿತದಲ್ಲಿ ಪೊಲೀಸ್ ಠಾಣೆಗೆ ಬಂದರೆ ಬಡವರ ಜೀವಕ್ಕೆ ರಕ್ಷಣೆಯಿಲ್ಲದಂತಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ತಕ್ಷಣ ತನಿಖೆ ನಡೆಸಿ ಸತ್ತವರಿಗೆ ನ್ಯಾಯ ಒದಗಿಸಬೇಕು ಎಂದುತಮಿಳುನಾಡು ಬಿಜೆಪಿ ಅಧ್ಯಕ್ಷ ನಯಿನಾರ್ ನಾಗೇಂದ್ರನ್ ಒತ್ತಾಯಿಸಿದ್ದಾರೆ.
