ತಮಿಳುನಾಡಿನಲ್ಲಿ ಅಣ್ಣನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನನ್ನು ಅಪಹರಿಸಿದ ಪ್ರಕರಣದಲ್ಲಿ ಎಡಿಜಿಪಿಯನ್ನು ಬಂಧಿಸಲಾಗಿದೆ. 

ಅಣ್ಣನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನನ್ನು ಅಪಹರಿಸಿ ತಮ್ಮದೇ ಜೀಪಿನಲ್ಲಿ ಕರೆದೊಯ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಎಡಿಜಿಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲೇ ಡೆಇಜಿಪಿ ಜಯರಾಮನ್ ಎಂಬುವವರನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ

ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ನಾನ್ ಕಾಡು ಪ್ರದೇಶದ ನಿವಾಸಿಯಾದ ತನುಷ್ ಎಂಬಾತನಿಗೆ ತಮಿಳುನಾಡಿನ ತೇಣಿ ಜಿಲ್ಲೆಯ ವಿಜಯಶ್ರೀ ಎಂಬ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು. ನಂತರ ದೂರವಾಣಿ ಸಂಖ್ಯೆ ಎಕ್ಸ್‌ಚೇಂಜ್ ಮಾಡಿಕೊಂಡಿದ್ದು, ಇಬ್ಬರೂ ಫೋನ್‌ನಲ್ಲಿ ದಿನವೂ ಮಾತನಾಡುತ್ತಿದ್ದರು. ಕಾಲಕ್ರಮೇಣ ಈ ಪರಿಚಯ ಪ್ರೇಮವಾಗಿ ಮಾರ್ಪಟ್ಟಿದೆ. ಇತ್ತ ಮಗಳು ವಿಜಯಶ್ರೀಯ ಪ್ರೇಮ ವಿಚಾರ ತಿಳಿದ ಪೋಷಕರು ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಿಸುವ ಪ್ಲಾನ್ ಮಾಡಿದ್ದಾರೆ.

ಈ ವಿಚಾರ ತಿಳಿದ ವಿಜಯಶ್ರೀ ಮನೆಯಿಂದ ಓಡಿ ಹೋಗಿದ್ದಾರೆ. ಇದಾದ ನಂತರ ನಂತರ ವಿಜಯಶ್ರೀ ಸಂಬಂಧಿಕರು ಆಕೆಗಾಗಿ ಹುಡುಕಾಟ ನಡೆಸಿ ಎಲ್ಲೆಡೆ ವಿಚಾರಿಸಿದಾಗ, ಮೇ15ರಂದೇ ತನುಷ್ ಜೊತೆ ವಿಜಯಶ್ರೀ ರಿಜಿಸ್ಟ್ರೇಡ್‌ ಮದುವೆಯಾಗಿ ತಲೆಮರೆಸಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಿಂದ ಕುಪಿತಗೊಂಡ ಯುವತಿ ವಿಜಯಶ್ರೀ ಪೋಷಕರು ತಿರುವಾಳಂಗಾಡಿನ ಕಳಪ್ಪಾಕ್ಕಂನಲ್ಲಿರುವ ತನುಷ್ ಮನೆಗೆ ಹೋಗಿದ್ದು, ಅಲ್ಲಿದ್ದ ತನುಷ್‌ನ ತಮ್ಮನನ್ನು ಗಾಡಿಯಲ್ಲಿ ಹಾಕಿಕೊಂಡು ಅಪಹರಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಕುರಿತು ತನುಷ್ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ತನುಷ್ ತಾಯಿ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ತಿರುವಾಳಂಗಾಡಿನ ಪೊಲೀಸರು ವಿಚಾರಣೆ ನಡೆಸಿ ವಿಜಯಶ್ರೀಯ ತಾಯಿ ವನರಾಜ ಸೇರಿದಂತೆ ಮೂವರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇತ್ತ ಈ ಅಪಹರಣದಲ್ಲಿ ಪುರಚಿ ಭಾರತಂ ಪಕ್ಷದ ನಾಯಕ ಹಾಗೂ ಶಾಸಕನೂ ಆಗಿರುವ ಪೂವೈ ಜಗನ್ಮೂರ್ತಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದ್ದು. ಕೆ.ವಿ.ಕುಪ್ಪಂ ಶಾಸಕ ಜಗನ್ಮೂರ್ತಿ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾದ ಬೆನ್ನಲ್ಲೇ ಪೂವೈ ಜಗನ್ಮೂರ್ತಿ ಚೆನ್ನೈ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ವಿಚಾರಣೆ ಇಂದೇ ನಡೆಸಬೇಕೆಂದು ಕೋರಿಕೆ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರಕರಣವೂ ಹೈಕೋರ್ಟ್ ನ್ಯಾಯಾಧೀಶ ವೇಲ್ಮುರುಗನ್ ಅವರ ಮುಂದೆ ವಿಚಾರಣೆಗೆ ಬಂತು. ವಿಚಾರಣೆಗೆ ಪೂವೈ ಜಗನ್ಮೂರ್ತಿ ಪರ ಹಾಜರಾದ ಹಿರಿಯ ವಕೀಲ ಪ್ರಭಾಕರ್, ಈ ಅಪಹರಣ ಪ್ರಕರಣದಲ್ಲಿ ಪೂವೈ ಜಗನ್ಮೂರ್ತಿಗೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದರು.

ಹಾಗೆಯೇ ಪೊಲೀಸ್ ಪರ ವಕೀಲ ದಾಮೋದರನ್, ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೇ ಅಪಹರಿಸಲಾದ ಬಾಲಕನನ್ನು ಎಡಿಜಿಪಿ ಜಯರಾಮನ್ ಅವರ ಕಾರಿನಲ್ಲಿ ಕರೆತರಲಾಗಿದೆ.. ಈ ಅಪಹರಣಕ್ಕೂ ಎಡಿಜಿಪಿಗೂ ಇರುವ ಸಂಬಂಧದ ಬಗ್ಗೆ ಪೂವೈ ಜಗನ್ಮೂರ್ತಿಯನ್ನು ಬಂಧಿಸಿ ವಿಚಾರಣೆ ನಡೆಸಬೇಕಾಗಿದೆ ಎಂದು ಮನವಿ ಮಾಡಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನ ಹಾಜರಾಗುವಂತೆ ಪೂವೈ ಜಗನ್ಮೂರ್ತಿ ಮತ್ತು ಎಡಿಜಿಪಿ ಜಯರಾಮನ್‌ಗೆ ಆದೇಶಿಸಿದರು. ಶಾಸಕ ಪೂವೈ ಜಗನ್ಮೂರ್ತಿ ನ್ಯಾಯಾಲಯದಲ್ಲಿ ಹಾಜರಾದರು. ಈ ಪ್ರಕರಣದಲ್ಲಿ ಎಡಿಜಿಪಿ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅಲ್ಲದೇ ಎಡಿಜಿಪಿ ಜಯರಾಮನ್‌ರನ್ನು ಕೂಡಲೇ ಬಂಧಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಹೀಗಾಗಿ ಚೆನ್ನೈ ಹೈಕೋರ್ಟ್ ಆದೇಶದಂತೆ ನ್ಯಾಯಾಲಯದ ಆವರಣದಲ್ಲೇ ಎಡಿಜಿಪಿ ಜಯರಾಮನ್‌ರನ್ನು ಬಂಧಿಸಲಾಯಿತು.

ಅಮಾನತು

ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುವುದು ಸಾಮಾನ್ಯ ನಿಯಮ. ಹೀಗಾಗಿ ಬಾಲಕನ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಎಡಿಜಿಪಿ ಜಯರಾಮ್ ಅವರನ್ನು ಎಸ್ಪಿ ಕಚೇರಿಯಲ್ಲಿ ವಿಚಾರಣೆ ನಡೆಸಬೇಕಿದ್ದ ಸಂದರ್ಭದಲ್ಲಿಯೇ ಅಮಾನತುಗೊಳಿಸುವಂತೆ ಗೃಹ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಬಾಲಕನ ಅಪಹರಣ ಪ್ರಕರಣದಲ್ಲಿ ತಮ್ಮನ್ನು ಬಂಧಿಸಲು ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಎಡಿಜಿಪಿ ಜಯರಾಮ್ ಪರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ನಾಳೆ ವಿಚಾರಣೆಗೆ ಬರಲಿದೆ.