ಬೆಳಗಾವಿಯ ಜಿಎಸ್‌ಟಿ ಗುಪ್ತಚರ ಇಲಾಖೆಯು ಸುಮಾರು ₹593 ಕೋಟಿ ಮೌಲ್ಯದ ನಕಲಿ ಬಿಲ್ ಆಧಾರಿತ ಇನ್‌ಪುಟ್ ತೆರಿಗೆ ಕ್ರೆಡಿಟ್ ಹಗರಣವನ್ನು ಭೇದಿಸಿದೆ. ಯಾವುದೇ ಸರಕು ಅಥವಾ ಸೇವೆಗಳ ಪೂರೈಕೆಯಿಲ್ಲದೆ, ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಅಕ್ರಮವಾಗಿ ತೆರಿಗೆ ಕ್ರೆಡಿಟ್ ವರ್ಗಾಯಿಸುತ್ತಿದ್ದ ಜಾಲದ ಸೂತ್ರಧಾರ ಬಂಧನ.
ಬೆಳಗಾವಿ: ಸರಕು ಮತ್ತು ಸೇವಾ ತೆರಿಗೆ ವಂಚನೆ ವಿರುದ್ಧ ದೊಡ್ಡ ಮಟ್ಟದ ಕ್ರಮ ಕೈಗೊಂಡಿರುವ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶನಾಲಯದ ಬೆಳಗಾವಿ ವಲಯ ಘಟಕ ಸುಮಾರು ₹593 ಕೋಟಿ ಮೌಲ್ಯದ ನಕಲಿ ಬಿಲ್ ಆಧಾರಿತ ಇನ್‌ಪುಟ್ ತೆರಿಗೆ ಕ್ರೆಡಿಟ್ ಹಗರಣವನ್ನು ಭೇದಿಸಿದೆ.
ಸಂಶಯಾಸ್ಪದ ಜಿಎಸ್‌ಟಿ ನೋಂದಣಿ ಕುರಿತು ತನಿಖೆ ಆರಂಭಿಸಿದ ಅಧಿಕಾರಿಗಳು, ಬೆಂಗಳೂರಿನ ಸ್ಟಾರ್ ಟ್ಯಾಕ್ಸ್ ಕನ್ಸಲ್ಟೆಂಟ್ ಸಂಸ್ಥೆಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ ಯಾವುದೇ ವಸ್ತು ಅಥವಾ ಸೇವೆಗಳ ನೈಜ ಪೂರೈಕೆ ಇಲ್ಲದೇ ನಕಲಿ ಬಿಲ್ ಜಾರಿಗೊಳಿಸಿ ಸುಮಾರು ₹ 235 ಕೋಟಿ ಮೌಲ್ಯದ ಇನ್‌ಪುಟ್ ತೆರಿಗೆ ಕ್ರೆಡಿಟ್ ಅಕ್ರಮವಾಗಿ ಪಡೆದು ಹಸ್ತಾಂತರಿಸಿರುವುದು ಪತ್ತೆಯಾಗಿದೆ.
ತನಿಖೆ ವೇಳೆ ಬಯಲಾದ ವಂಚನೆ ಪ್ರಕರಣ
ಪ್ರಾಥಮಿಕ ತನಿಖೆಯಲ್ಲಿ ಹಲವು ಜಿಎಸ್‌ಟಿ ನೋಂದಣಿಗಳನ್ನು ಕೇವಲ ನಕಲಿ ಬಿಲ್ ಮತ್ತು ಇ ವೇ ಬಿಲ್ ಸೃಷ್ಟಿಸಲು ಮಾತ್ರ ಬಳಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಅಂತಿಮ ಲಾಭಾಂಶದಾರರಿಗೆ ಅಕ್ರಮ ತೆರಿಗೆ ಕ್ರೆಡಿಟ್ ಸೌಲಭ್ಯ ಒದಗಿಸಲು ಶೆಲ್ ಸಂಸ್ಥೆಗಳ ಮೂಲಕ ವಹಿವಾಟು ನಡೆಸಲಾಗುತ್ತಿತ್ತು. ಯಾವುದೇ ನೈಜ ವ್ಯವಹಾರ ಚಟುವಟಿಕೆಗಳಿಲ್ಲದೇ ಆನ್‌ಲೈನ್ ಲೆಕ್ಕಪತ್ರ ವ್ಯವಸ್ಥೆ ಬಳಸಿ ವಹಿವಾಟುಗಳನ್ನು ದಾಖಲಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಗರಣದ ಸೂತ್ರದಾರಿಯ ಬಂಧನ
ಈ ಹಗರಣದ ಸೂತ್ರಧಾರನಾಗಿ ಗುರುತಿಸಲ್ಪಟ್ಟಿರುವ ಮೊಹಮ್ಮದ್ ಸೈಫುಲ್ಲಾ ಎಂಬ ನೋಂದಾಯಿತ ಜಿಎಸ್‌ಟಿ ಪ್ರಾಕ್ಟಿಷನರ್ ಹಲವಾರು ಅಸ್ತಿತ್ವದಲ್ಲೇ ಇಲ್ಲದ ಜಿಎಸ್‌ಟಿ ಸಂಖ್ಯೆ ನಿರ್ವಹಿಸಿ ನಕಲಿ ಬಿಲ್ ಹಾಗೂ ಇ ವೇ ಬಿಲ್‌ಗಳನ್ನು ಕಮಿಷನ್ ಆಧಾರದ ಮೇಲೆ ಜಾರಿಗೊಳಿಸುತ್ತಿದ್ದನು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಅಧಿಕಾರಿಗಳು ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸಿದಾಗ ಆತ ತನ್ನ ಪಾತ್ರ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದೆ.
ಮೊಹಮ್ಮದ್ ಸೈಫುಲ್ಲಾನನ್ನು ಫೆ.24ರಂದು ಬೆಂಗಳೂರಿನಲ್ಲಿ ಕೇಂದ್ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಕಲಂ 69ರ ಅಡಿಯಲ್ಲಿ ಬಂಧಿಸಲಾಗಿದೆ. ಬಳಿಕ, ಅವರನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬೆಳಗಾವಿಗೆ ತರಲು ಅನುಮತಿ ಪಡೆಯಲಾಯಿತು. ನಂತರ ಅವರನ್ನು ಬೆಳಗಾವಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಗರಣದ ಸಂಪೂರ್ಣ ವ್ಯಾಪ್ತಿ ಹಾಗೂ ಇತರೆ ಲಾಭಾಂಶದಾರರನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶನಾಲಯದ ಬೆಳಗಾವಿ ವಲಯ ಘಟಕ ಅಧಿಕಾರಿಗಳು ತಿಳಿಸಿದ್ದಾರೆ.


