ಸಾಯ್ತೀನಿ ಸಾಯ್ತೀನಿ ಎಂದು ತನ್ನನ್ನು ಬೆದರಿಸುತ್ತಿದ್ದ ಪ್ರಿಯಕರನನ್ನು ಪ್ರೇಯಸಿಯೇ ಸಾಯಿಸಿಬಿಟ್ಟ ಆಘಾತಕಾರಿ ಘಟನೆ ಜಾರ್ಖಂಡ್‌ನ ಜೇಮ್ಶೆಡ್‌ಪುರದಲ್ಲಿ ನಡೆದಿದೆ.  

ಜೇಮ್ಶೆಡ್‌ಪುರ: ಸಾಯ್ತೀನಿ ಸಾಯ್ತೀನಿ ಎಂದು ತನ್ನನ್ನು ಬೆದರಿಸುತ್ತಿದ್ದ ಪ್ರಿಯಕರನನ್ನು ಪ್ರೇಯಸಿಯೇ ಸಾಯಿಸಿಬಿಟ್ಟ ಆಘಾತಕಾರಿ ಘಟನೆ ಜಾರ್ಖಂಡ್‌ನ ಜೇಮ್ಶೆಡ್‌ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆಯಾದ ಯುವಕನ ಪ್ರೇಯಸಿಯನ್ನು ಬಂಧಿಸಲಾಗಿದೆ. ಕೊಲೆಗೂ ಮೊದಲು ಇಬ್ಬರ ನಡುವೆ ವಾಗ್ವಾದವಾಗಿದ್ದು, ಇದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಮೃತ ವ್ಯಕ್ತಿಯನ್ನು ಸುಬೋಧ್‌ ಪಾಂಡೆ (Subodh Pandey) ಎಂದು ಗುರುತಿಸಲಾಗಿದ್ದು, ಪೌರೋಹಿತ್ಯದ ಕೆಲಸ ಮಾಡುತ್ತಿದ್ದ ಸುಬೋದ್‌ಗೆ ಈಗಾಗಲೇ ಮದ್ವೆಯಾಗಿತ್ತು. ಒಂದು ವರ್ಷದಿಂದ ಈತನಿಗೆ ಶ್ರದ್ಧಾ ತಿವಾರಿ ಜೊತೆ ಅಕ್ರಮ ಸಂಬಂಧವಿದ್ದು, ಈ ಜೋಡಿ ಪರ್ಸುಧಿ (Parsudih area) ಪ್ರದೇಶದಲ್ಲಿ ಅಪಾರ್ಟ್‌ಮೆಂಟೊಂದನ್ನು ಬಾಡಿಗೆ ಪಡೆದು ಅಲ್ಲಿ ಆಗಾಗ ಭೇಟಿ ಆಗುತ್ತಿದ್ದರು. 

ಮಾರ್ಚ್ 2 ರಂದು ಇಬ್ಬರೂ ಮದ್ಯಸೇವಿಸಿದ್ದು, ಇಬ್ಬರ ಮಧ್ಯೆ ಸಣ್ಣ ವಿಚಾರಕ್ಕೆ ವಾಗ್ವಾದವಾಗಿದೆ. ಜಗಳದ ಮಧ್ಯೆ ಸುಬೋಧ್‌ (Subodh Pandey) ಬಟ್ಟೆಯ ತುಂಡೊಂದನ್ನು ತೆಗೆದುಕೊಂಡು ಅದನ್ನು ನೇಣಿನ ಕುಣಿಕೆಯಂತೆ ಮಾಡಿ ಫ್ಯಾನ್‌ಗೆ ನೇತು ಹಾಕಿ ಕುರ್ಚಿಯ ಮೇಲೆ ನಿಂತುಕೊಂಡು ಸಾಯುವುದಾಗಿ ಪ್ರೇಯಸಿ ಶ್ರದ್ಧಾಗೆ (Sharda) ಬೆದರಿಸಿದ್ದಾನೆ. ಹೀಗೆ ಸಾಯುವುದಾಗಿ ಬೆದರಿಸಿಕೊಂಡು ನೇಣಿಗೆ ಕೊರಳೊಡ್ಡಿ ಕುರ್ಚಿ ಏರಿ ನಿಂತಿದ್ದಾಗ ಸಿಟ್ಟಿಗೆದ್ದ ಶ್ರದ್ಧಾ, ಸುಬೋಧ್ ನಿಂತಿದ ಕುರ್ಚಿಯನ್ನು ತಳ್ಳಿದ್ದು ಇದರಿಂದ ನೇಣಿನ ಕುಣಿಕೆ ಬಿಗಿಗೊಂಡಿದ್ದು, ಆತ ಸಾವನ್ನಪ್ಪಿದ್ದಾನೆ. ಬಳಿಕ ಶ್ರದ್ಧಾ ಸ್ಥಳದಿಂದ ಪರಾರಿಯಾಗಿದ್ದಾಳೆ.

ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಶವ ಪತ್ತೆ: ಮೃತಳ ಸ್ನೇಹಿತ ವಶಕ್ಕೆ?

ಇತ್ತ ಶ್ರದ್ಧಾ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಸುಬೋಧ್ ಪುತ್ರ, ಮಾರ್ಚ್ 6 ರಂದು ಪೊಲೀಸರಿಗೆ ಶ್ರದ್ಧಾ ವಿರುದ್ಧ ದೂರು ನೀಡಿದ್ದಾನೆ. ನಂತರ ತನಿಖೆಗೆ ಇಳಿದ ಪೊಲೀಸರು ಮಹಿಳೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದನ್ನು ಆಕೆ ಒಪ್ಪಿಕೊಂಡಿದ್ದಾಳೆ. 

ಈ ಸಂಬಂಧದಲ್ಲಿದ್ದಾಗ ಸುಬೋಧ್‌, ಶ್ರದ್ಧಾಗೆ ಸೇರಿದ ಆಭರಣ (jewellery) ಹಾಗೂ ಆಸ್ತಿಯನ್ನು ಮಾರಾಟ ಮಾಡಿದ್ದ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಕಲಹ ನಡೆಯುತ್ತಿತ್ತು. ನಾನು ಹಣ ಮರಳಿ ಕೇಳಿದಾಗಲೆಲ್ಲಾ ಆತ ನನಗೆ ಹೊಡೆಯುತ್ತಿದ್ದ ಎಂದು ಶ್ರದ್ಧಾ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ. ಇತ್ತ ಶ್ರದ್ಧಾಗೂ ಮೂವರು ಮಕ್ಕಳಿದ್ದಾರೆ. ಅತ್ತ ಸುಬೋಧ್‌ಗೆ ಎರಡು ಹೆಣ್ಣು ಎರಡು ಗಂಡು ಮಕ್ಕಳಿದ್ದು, ಇಬ್ಬರೂ ಕಳೆದೊಂದು ವರ್ಷದಿಂದ ಈ ಅಕ್ರಮ ಸಂಬಂಧದಲ್ಲಿದ್ದರು ಎಂದು ಸ್ಟೇಷನ್ ಇನ್‌ಚಾರ್ಜ್‌ ರಾಮ್‌ ಕುಮಾರ್ ವರ್ಮಾ (Ram Kumar Verma) ಹೇಳಿದ್ದಾರೆ. 

Bengaluru Crime: ಪ್ರೀತಿಸಿದ ಯುವತಿಗೆ ಮದುವೆ ಫಿಕ್ಸ್: ಮನೆಗೆ ನುಗ್ಗಿ ರೇಪ್‌ ಮಾಡಿ ಕೊಲೆಗೈದ ಪ್ರೇಮಿ

ಒಟ್ಟಿನಲ್ಲಿ ಅನೈತಿಕ ಸಂಬಂಧವೊಂದು ಎರಡು ಕುಟುಂಬಗಳನ್ನು ನಡುಬೀದಿಯಲ್ಲಿ ನಿಲ್ಲುವಂತೆ ಮಾಡಿದೆ.