16 ವರ್ಷದ ಅಪ್ರಾಪ್ತ ಬಾಲಕಿಯ ಬಾಲ್ಯವಿವಾಹ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಅಪ್ರಾಪ್ತ ವಯಸ್ಸಿನಲ್ಲಿ ನಡೆದ ವಿವಾಹವು ಕಾನೂನುಬಾಹಿರವಾಗಿದ್ದು, ನಂತರ ನೋಂದಾಯಿಸಿದರೂ ಅಪರಾಧದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬಾಲ್ಯವಿವಾಹ ಆಯೋಜಿಸುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಬೆಂಗಳೂರು: 16 ವರ್ಷದ ಅಪ್ರಾಪ್ತ ಬಾಲಕಿಯೊಂದಿಗೆ ನಡೆದಿದ್ದ ಬಾಲ್ಯವಿವಾಹ ಪ್ರಕರಣದಲ್ಲಿ ಪತಿ ಹಾಗೂ ಬಾಲಕಿಯ ಪೋಷಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಜೊತೆಗೆ ಬಾಲ್ಯವಿವಾಹ ಆಯೋಜನೆಗೆ ಕಾರಣವಾಗುವವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗದು ನ್ಯಾಯಾಲಯ ಗಂಭೀರ ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಈ ಕುರಿತು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿ, ಬಾಲ್ಯವಿವಾಹ ತಡೆ ಕಾಯ್ದೆಯ ಉದ್ದೇಶವನ್ನು ಹಾಳುಮಾಡುವ ರೀತಿಯಲ್ಲಿ ಪ್ರಕರಣಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಕೋವಿಡ್ ಅವಧಿಯಲ್ಲಿ ದೇವನಹಳ್ಳಿಯ ನಿವಾಸಿಯಾಗಿರುವ ವ್ಯಕ್ತಿಯೊಂದಿಗೆ 16 ವರ್ಷದ ಬಾಲಕಿಯ ವಿವಾಹ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಬಾಲಕಿ ಅಪ್ರಾಪ್ತೆಯಾಗಿದ್ದರೂ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ವಿವಾಹ ನಡೆಯಿತು ಎಂಬುದು ಆರೋಪ. ನಂತರ ಬಾಲಕಿ 18 ವರ್ಷ ವಯಸ್ಸು ಪೂರೈಸಿದ ಬಳಿಕ ಈ ವಿವಾಹವನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿತ್ತು. ಇದನ್ನು ಆಧಾರವನ್ನಾಗಿ ಮಾಡಿಕೊಂಡು ಪತಿ ಹಾಗೂ ಬಾಲಕಿಯ ಪೋಷಕರು ತಮ್ಮ ವಿರುದ್ಧ ದಾಖಲಾಗಿದ್ದ ಬಾಲ್ಯವಿವಾಹ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ವಾದ, ಹೈಕೋರ್ಟ್ ಅಭಿಪ್ರಾಯ

ಅರ್ಜಿದಾರರು ತಮ್ಮ ಅರ್ಜಿಯಲ್ಲಿ, ಬಾಲಕಿ ಈಗಾಗಲೇ ಪ್ರಾಪ್ತವಯಸ್ಕಳಾಗಿದ್ದು ವಿವಾಹವನ್ನು ನಂತರ ಕಾನೂನುಬದ್ಧವಾಗಿ ನೋಂದಾಯಿಸಲಾಗಿದೆ ಎಂದು ವಾದಿಸಿದ್ದರು. ಆದ್ದರಿಂದ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ ಈ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಅಪ್ರಾಪ್ತ ವಯಸ್ಸಿನಲ್ಲೇ ನಡೆದ ವಿವಾಹವು ಕಾನೂನುಬಾಹಿರವಾಗಿದ್ದು, ನಂತರ ಪ್ರಾಪ್ತವಯಸ್ಸು ಬಂದ ಬಳಿಕ ವಿವಾಹವನ್ನು ನೋಂದಾಯಿಸಿದರೂ ಮೊದಲಿನ ಅಪರಾಧದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಬಾಲ್ಯವಿವಾಹವು ಕೇವಲ ಕಾನೂನುಬಾಹಿರ ಕೃತ್ಯ ಮಾತ್ರವಲ್ಲ, ಅದು ಬಾಲಕಿಯ ಭವಿಷ್ಯವನ್ನು ಗಂಭೀರವಾಗಿ ಹಾನಿಗೊಳಿಸುವ ಸಾಮಾಜಿಕ ಸಮಸ್ಯೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಾಲಕಿಯ ಶಿಕ್ಷಣದ ಮೇಲೆ ಪರಿಣಾಮ

ವಿದ್ಯೆ ಕಲಿಯಬೇಕಾದ ವಯಸ್ಸಿನಲ್ಲಿ ಬಾಲಕಿಯ ಮೇಲೆ ವಿವಾಹ ಮತ್ತು ಸಂಸಾರದ ಹೊಣೆಗಾರಿಕೆಯನ್ನು ಹಾಕುವುದು ಸರಿಯಲ್ಲ. ಇಂತಹ ಬಾಲ್ಯವಿವಾಹಗಳು ಬಾಲಕಿಯ ಶಿಕ್ಷಣ, ವ್ಯಕ್ತಿತ್ವ ಅಭಿವೃದ್ಧಿ ಹಾಗೂ ಭವಿಷ್ಯದ ಕನಸುಗಳನ್ನು ಭಂಗಪಡಿಸುತ್ತವೆ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ಆಯೋಜಕರಿಗೂ ಹೊಣೆಗಾರಿಕೆ

ಈ ವೇಳೆ ನ್ಯಾಯಾಲಯ ಮತ್ತೊಂದು ಮಹತ್ವದ ವಿಚಾರವನ್ನು ಉಲ್ಲೇಖಿಸಿದೆ. ದೇವಾಲಯಗಳಲ್ಲಿ ಅಥವಾ ಕಲ್ಯಾಣ ಮಂಟಪಗಳಲ್ಲಿ ಬಾಲ್ಯವಿವಾಹಗಳು ನಡೆಯುವ ಸಂದರ್ಭಗಳಲ್ಲಿ ಆಯೋಜಕರ ವಿರುದ್ಧವೂ ಕ್ರಮ ಕೈಗೊಳ್ಳಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ದೇವಾಲಯದಲ್ಲಿ ಬಾಲ್ಯವಿವಾಹ ನಡೆದರೆ ದೇವಾಲಯದ ಆಡಳಿತ ಮಂಡಳಿ ಮತ್ತು ಪುರೋಹಿತರಿಗೂ ಹೊಣೆಗಾರಿಕೆ ಇರಬಹುದು. ಅದೇ ರೀತಿ ಕಲ್ಯಾಣ ಮಂಟಪಗಳಲ್ಲಿ ಬಾಲ್ಯವಿವಾಹ ನಡೆದರೆ ಮಂಟಪದ ಆಯೋಜಕರ ವಿರುದ್ಧವೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಳಿಕ ಪ್ರಕರಣವನ್ನು ರದ್ದುಪಡಿಸಿದರೆ ಬಾಲ್ಯವಿವಾಹ ತಡೆ ಕಾಯ್ದೆಯ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಪತಿ ಹಾಗೂ ಬಾಲಕಿಯ ಪೋಷಕರು ಸಲ್ಲಿಸಿದ್ದ ಪ್ರಕರಣ ರದ್ದುಪಡಿಸುವ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.