'ಒಂದೇ ತಿಂಗ್ಳಲ್ಲಿ ವಾಪಾಸ್ ತಂದು ಇಡ್ತೇನೆ..' ಜಗತ್ತಲ್ಲಿ ಇಂಥ ಖದೀಮರೂ ಇರ್ತಾರೆ!
ಚೆನ್ನೈನ ಟುಟಿಕೋರಿನ್‌ನಲ್ಲಿ ನಿವೃತ್ತ ಶಿಕ್ಷಕ ಚಿಟ್ಟಿರೈ ಸೆಲ್ವಿನ್ ಹಾಗೂ ಅವರ ಪತ್ನಿ ಚೆನ್ನೈನಿಂದ ವಾಪಾಸ್ ಮನೆಗೆ ಬಂದಾಗ ಅವರ ಮನೆ ಕಳ್ಳತನವಾಗಿರುವುದು ಗೊತ್ತಾಗಿದೆ. 60 ಸಾವಿರ ನಗದು ಹಣ ಹಾಗೂ ಮೌಲ್ಯಯುತವಾದ ಆಭರಣಗಳು ನಾಪತ್ತೆಯಾಗಿದ್ದವು.
ಚೆನ್ನೈ (ಜು.4): ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನದ ಘಟನೆ ನಡೆದಿದೆ. ಇತ್ತೀಚೆಗೆ ಚೆನ್ನೈಗೆ ಹೋಗಿ ವಾಪಸಾಗಿದ್ದ 79 ವರ್ಷ ವಯಸ್ಸಿನ ನಿವೃತ್ತ ಶಿಕ್ಷಕರಾದ ಚಿಟ್ಟಿರೈ ಸೆಲ್ವಿನ್ ಹಾಗೂ ಅವರ ಪತ್ನಿಯ ನಿವಾಸದಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಕಳ್ಳ 60 ಸಾವಿರ ನಗದು ಹಾಗೂ ಕೆಲ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದೊಯ್ದಿದ್ದ. ನಿವೃತ್ತ ಶಿಕ್ಷಕರ ಮನೆಗೆ ನುಗ್ಗಿ ಕಳ್ಳತನ ಮಾಡಿರುವ ಕಳ್ಳ ಕ್ಷಮಾಪಣಾ ಪತ್ರವನ್ನು ಬರೆದಿದ್ದಾನೆ ಎನ್ನುವುದು ಗೊತ್ತಾಗಿದೆ. ಕದ್ದ ವಸ್ತುಗಳನ್ನು ಇನ್ನೊಂದೇ ತಿಂಗಳಲ್ಲಿ ಮರಳಿ ನೀಡುತ್ತೇನೆ. ಮನೆಯಲ್ಲಿ ಆಪ್ತರೊಬ್ಬರಿಗೆ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಈ ಕೆಲಸ ಮಾಡಿದ್ದೇನೆ ಎಂದು ಬರೆದಿದ್ದಾನೆ. ಕಳೆದ ಜೂನ್ 17ರಂದು ದಂಪತಿಗಳಾದ ಸೆಲ್ವಿನ್ ಹಾಗೂ ಅವರ ಪತ್ನಿ ಚೆನ್ನೈನಲ್ಲಿರುವ ತಮ್ಮ ಪುತ್ರನನ್ನು ಭೇಟಿ ಮಾಡಲು ತೆರಳಿದ್ದರು. ಈ ವೇಳೆ ಟುಟಿಕೊರಿನ್‌ನ ಮೆಗ್ನಾನಪುರಂನ ಸಂತಕುಳಂ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಈ ಘೆಟನೆ ನಡೆದಿದೆ.
ಜೂನ್ 26ರಂದು ಸೆಲ್ವಿನ್ ದಂಪತಿಗಳ ನಿವಾಸದ ಬಳಿ ಮನೆಗೆಲಸದಾಕೆ ಸೆಲ್ವಿ ಬಂದಿದ್ದಾರೆ. ಈ ವೇಳೆ ಮನೆಯ ಪ್ರವೇಶದ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಇದರಿಂದ ಆಘಾತಕ್ಕೀಡಾಗಿರುವ ಸೆಲ್ವಿ, ತಕ್ಷಣವೇ ಸೆಲ್ವಿನ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸೆಲ್ವಿನ್ ಮನೆಗೆ ನೋಡಿದಾಗ, ಬೀರುವಿನಲ್ಲಿದ್ದ ರೂ. 60,000 ನಗದು, 12 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಒಂದು ಜೊತೆ ಬೆಳ್ಳಿ ಕಾಲುಂಗುರ ಕಳ್ಳತನವಾಗಿದೆ.
WATCH: ಕಿಕ್ಕಿರಿದ ಜನಸಂದಣಿ ನಡುವೆಯೂ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಟೀಮ್ ಇಂಡಿಯಾ ಫ್ಯಾನ್ಸ್!
ಕಳ್ಳತನದ ಮಾಹಿತಿ ಸಿಕ್ಕ ಬೆನ್ನಲ್ಲಿಯೇ ಮನೆಗೆ ಬಂದು ಶೋಧ ಕಾರ್ಯ ನಡೆಸಿದ ಪೊಲೀಸರಿಗೆ ಕಳ್ಳತನ ಮಾಡಿರುವ ವ್ಯಕ್ತಿ ಬರೆದಿರುವ ಕ್ಷಮಾಪಣಾ ಪತ್ರ ಸಿಕ್ಕಿದೆ. "ನನ್ನನ್ನು ಕ್ಷಮಿಸಿ, ನಾನು ಈ ವಸ್ತುಗಳನ್ನು ಇನ್ನು ಒಂದು ತಿಂಗಳಲ್ಲಿ ವಾಪಾಸ್ ನೀಡುತ್ತೇನೆ. ನಮ್ಮ ಮನೆಯಲ್ಲಿ ಒಬ್ಬರಿಗೆ ಹುಷಾರಿಲ್ಲದೆ ಇರುವುದರಿಂದ ನಾನು ಈ ಕೃತ್ಯ ಮಾಡುತ್ತಿದ್ದೇನೆ" ಎಂದು ಆ ಪತ್ರದಲ್ಲಿ ಬರೆಯಲಾಗಿದೆ. ಇಡೀ ಪತ್ರವನ್ನು ಆತ ತಮಿಳು ಭಾಷೆಯಲ್ಲಿಯೇ ಬರೆದಿರುವ ಕಾರಣ ಸ್ಥಳೀಯರೇ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೆಗ್ನಾನಪುರಂ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
'ನನಗೂ ವಿನಯ್ ರಾಜ್‌ಕುಮಾರ್‌ಗೂ ಮದುವೆಯಾಗಿಲ್ಲ..' ಸ್ಪಷ್ಟನೆ ನೀಡಿದ ಸರಳ ಪ್ರೇಮಕಥೆ ನಾಯಕಿ!