ಬೆಂಗಳೂರು(ಅ.27): ನಿತ್ಯ ಕುಡಿದು ನಿಂದಿಸುತ್ತಿದ್ದ ಎಂಬ ಕಾರಣಕ್ಕೆ ಸ್ನೇಹಿತನನ್ನು ಅಪಹರಿಸಿ ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅ.21ರಂದು ಆರೋಪಿಗಳು ಮಹೇಶ್‌ಗೌಡ (28) ಎಂಬಾತನನ್ನು ಹತ್ಯೆ ಮಾಡಿದ್ದರು.

ಮೃತನ ತಂದೆ ಕೊಟ್ಟ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ರಾಜಗೋಪಾಲನಗರ ನಿವಾಸಿ ಕೃಷ್ಣ ಅಲಿಯಾಸ್‌ ಅಪ್ಪಿ, ರಾಮದಾಸ, ಸಂತೋಷ್‌, ಸುರೇಶ್‌ ಅಲಿಯಾಸ್‌ ಸೂರಿ ಮತ್ತು ಗಣೇಶ್‌ ಬಂಧಿತರು.

ಮಹೇಶ್‌ಗೌಡ ಮತ್ತು ಕೃಷ್ಣ ಸ್ನೇಹಿತರಾಗಿದ್ದು, ಕೋಟ್ಯಂತರ ರುಪಾಯಿ ಆಸ್ತಿ ಹೊಂದಿದ್ದಾರೆ. ಇಬ್ಬರಿಗೂ ಲಕ್ಷಾಂತರ ರುಪಾಯಿ ಬಾಡಿಗೆ ಬರುತ್ತಿತ್ತು. ಐಷಾರಾಮಿ ಜೀವನ ನಡೆಸುತ್ತಿದ್ದರು. ಕೃಷ್ಣನಿಗೆ ವಿವಾಹವಾಗಿದ್ದು, ಇಬ್ಬರು ನೆರೆಮನೆ ನಿವಾಸಿಗಳಾಗಿದ್ದಾರೆ.

ದುಡ್ಡಿಗಾಗಿ ಇಬ್ಬರೂ ಹೆಂಡತಿಯರೊಂದಿಗಿನ ಸೆಕ್ಸ್ ಲೈವ್ ಬಿಟ್ಟ ಪತಿರಾಯ!

ನಿತ್ಯ ಕೃಷ್ಣ ಮತ್ತು ಮಹೇಶ್‌ಗೌಡ ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಇಬ್ಬರು ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಮಹೇಶ್‌ಗೌಡ ಇತ್ತೀಚೆಗೆ ಸ್ನೇಹಿತರನ್ನು ಕೃಷ್ಣನ ಬಳಿ ಕರೆದೊಯ್ದು ಬೆದರಿಕೆವೊಡ್ಡಿದ್ದ. ಅಲ್ಲದೆ, ಆಗಾಗ್ಗೆ ಕರೆ ಮಾಡಿ ತೊಂದರೆ ನೀಡುತ್ತಿದ್ದ. ಮಹೇಶ್‌ನ ವರ್ತನೆಯಿಂದ ಬೇಸತ್ತಿದ್ದ ಕೃಷ್ಣ, ಸ್ನೇಹಿತನ ಕೊಲೆಗೆ ಸಂಚು ರೂಪಿಸಿದ್ದ.

ಅ.21ರಂದು ಸಂಜೆ 6.30ರ ಸುಮಾರಿಗೆ ಮಾತನಾಡುವ ನೆಪದಲ್ಲಿ ಹೆಸರುಘಟ್ಟದಲ್ಲಿರುವ ತನ್ನ ಜಮೀನಿಗೆ ಕರೆದುಕೊಂಡು ಹೋಗಿದ್ದ. ಮಹೇಶ್‌ನಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದರು. ಬಳಿಕ ಕೃಷ್ಣ ಮತ್ತು ರಾಮದಾಸ ಇಬ್ಬರು ಮಚ್ಚಿನಿಂದ ಮಹೇಶ್‌ನ ತಲೆ ಮತ್ತು ಕತ್ತಿನ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದರು. ನಂತರ ಜಮೀನಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಗಣೇಶ್‌, ಸೂರಿ ಮತ್ತು ಸಂತೋಷ್‌ ಸಹಾಯದೊಂದಿಗೆ ಗುಂಡಿ ತೋಡಿಸಿ ಮೃತದೇಹವನ್ನು ಹೂತು ಹಾಕಿದ್ದರು.

ಪುತ್ರ ನಾಪತ್ತೆಯಾಗಿದ್ದ ಬಗ್ಗೆ ಮಹೇಶ್‌ ತಂದೆ ದೂರು ನೀಡಿದ್ದರು. ಆರೋಪಿ ಬಂಧನಕ್ಕೆ ಇನ್ಸ್‌ಪೆಕ್ಟರ್‌ ಅಯ್ಯಣ್ಣರೆಡ್ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೊನೆ ಬಾರಿಗೆ ಕೃಷ್ಣನ ಜೊತೆ ಮಹೇಶ್‌ ಹೋಗಿದ್ದ ಬಗ್ಗೆ ಪೊಲೀಸರಿಗೆ ಮಹೇಶ್‌ ತಂದೆ ಮಾಹಿತಿ ನೀಡಿದ್ದರು. ಕೃಷ್ಣನನ್ನು ಕರೆ ತಂದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಾಯ್ಬಿಟ್ಟ. ತಹಸೀಲ್ದಾರ್‌ ಸಮ್ಮುಖದಲ್ಲಿ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್‌ ಮೀನಾ ಹೇಳಿದ್ದಾರೆ.