Drunk Chamarajanagar Police Officer Vandalizes Home in Rage: ಚಾಮರಾಜನಗರದಲ್ಲಿ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ (RSI) ಒಬ್ಬರು ಕುಡಿದ ಮತ್ತಿನಲ್ಲಿ ಬೇರೆಯವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮನೆಯ ಬಾಗಿಲು, ಕಿಟಕಿ ಒಡೆದು ಹಾಕಿ, ಮಹಿಳೆ, ಮಕ್ಕಳಲ್ಲಿ ಭಯ ಹುಟ್ಟಿಸಿದ ಅಧಿಕಾರಿ ಬಂಧನ
ಚಾಮರಾಜನಗರ, (ಅ.25): ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ದುರ್ವರ್ತನೆಗಳು ದಿನೇದಿನೆ ಬಯಲಾಗುತ್ತಿವೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ಕರ್ತವ್ಯ ಮರೆತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಚಾಮರಾಜನಗರದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ (RSI) ಬಾಬು ಸಾಬ್ ಅವರ ಅಸಭ್ಯ ವರ್ತನೆ ಸ್ಥಳೀಯರನ್ನು ಕೆರಳಿಸಿದೆ.
ಕುಡಿದ ಮತ್ತಿನಲ್ಲಿ ಬೇರೆಯವರ ಮನೆಗೆ ನುಗ್ಗಿ ದಾಂಧಲೆ:
ಗಂಗಾಮತಸ್ಥರ ಬೀದಿಯಲ್ಲಿ ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಬಾಬು ಸಾಬ್ ಬೇರೆಯವರ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಜೋರಾಗಿ ಹೊಡೆದಿದ್ದಾರೆ. ಅಕ್ರಮವಾಗಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಮನೆಯೊಳಗಿನ ಬಾಗಿಲುಗಳು, ಕಿಟಕಿಗಳನ್ನು ಒಡೆದು ಹಾಕಿ, ಆತಂಕ ಸೃಷ್ಟಿಸಿದ್ದಾರೆ. ಪೊಲೀಸ್ ಅಧಿಕಾರಿಯ ದುರ್ವರ್ತನೆಗೆ ಮನೆಯ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದರು.
ರಕ್ಷಣೆ ನೀಡಬೇಕಾದ ಪೊಲೀಸರೇ ಪುಡಾರಿಗಳಂತಾದರೆ?
ಪೊಲೀಸ್ ಅಧಿಕಾರಿಯೇ ಇಂತಹ ಕೃತ್ಯ ಮಾಡಿದ್ದಾನೆ ಎಂದರೆ, ನಮ್ಮ ಭದ್ರತೆ ಯಾರ ಬಳಿ ಹೇಳಿಕೊಳ್ಳಬೇಕು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಚಾಮರಾಜನಗರ ಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. RSI ಬಾಬು ಸಾಬ್ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದರು.
ಘಟನೆ ಸಂಬಂಧ ಮನೆಯ ಯಜಮಾನ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಕ್ರಮ ಮನೆ ಪ್ರವೇಶ, ದಾಂಧಲೆ ನಡೆಸಿದ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
