- Home
- News
- Crime
- ಕೆಲಸದಾಳು ಜೊತೆಗೇ ಯಜಮಾನಿಯ ಕುಚ್ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲಾಗಿದ್ದೇ ರೋಚಕ!
ಕೆಲಸದಾಳು ಜೊತೆಗೇ ಯಜಮಾನಿಯ ಕುಚ್ ಕುಚ್! ಅಮ್ಮನ ಕಳ್ಳಾಟ ಕಣ್ಣಾರೆ ಕಂಡ ಮಗ, 6 ತಿಂಗಳ ಕೊಲೆ ಕೇಸ್ ಈಗ ಬಯಲಾಗಿದ್ದೇ ರೋಚಕ!
ವಿಜಯಪುರದಲ್ಲಿ ಕೆಲಸದಾಳುವೊಬ್ಬನ ಕೊಲೆ ನಡೆದು ಆರು ತಿಂಗಳಾದರೂ ಸುಳಿವಿರಲಿಲ್ಲ. ತಾಯಿಯ ಅಕ್ರಮ ಸಂಬಂಧಕ್ಕೆ ಕೋಪಗೊಂಡು ಮಗನೇ ಹತ್ಯೆ ಮಾಡಿ, 'ದೃಶ್ಯಂ' ಸಿನಿಮಾ ಮಾದರಿಯಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಅಂತಿಮವಾಗಿ, ವೈಜ್ಞಾನಿಕ ತನಿಖೆಯಿಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆ ಕೆಲಸದಾಳು ಜತೆ ಊರಿನ ಗೌಡ್ತಿ ಅಕ್ರಮ ಸಂಬಂಧ
ವಿಜಯಪುರ: ಅವನೊಬ್ಬ ಕೆಲಸದಾಳು. ಊರಿನ ಗೌಡ್ತಿ ಮನೆಯಲ್ಲಿ ಕೆಲಸಕ್ಕಿದ್ದ. ಅವರು ಕೊಡೋ ಪುಡಿಗಾಸಿನಲ್ಲೇ ಜೀವನ ಮಾಡ್ತಿದ್ದ. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ಆತ ನಾಪತ್ತೆಯಾಗಿಬಿಟ್ಟ. ಮಕ್ಕಳು ಹೋಗಿ ಗೌಡ್ತಿಯನ್ನ ಕೇಳಿದ್ರೆ ಆತ ಕೆಲಸಕ್ಕೇ ಬಂದಿಲ್ಲ ಅಂದ್ರು. ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಿದ್ರು. ಬಟ್ ಯಾವುದೇ ಸುಳಿವು ಸಿಗೋದಿಲ್ಲ. ನಂತರ ಮೂರು ದಿನದ ಬಳಿಕ ಅದೇ ಗ್ರಾಮದ ಪೊದೆಯೊಂದರಲ್ಲಿ ಆತನ ಶವ ಸಿಕ್ಕಿತ್ತು. ಆರಂಭದಲ್ಲಿ ಆತನದ್ದು ಸಹಜ ಸಾವು ಅಂದುಕೊಂಡಿದ್ರು. ಆದ್ರೆ ಪೋಸ್ಟ್ ಮಾರ್ಟಮ್ ರಿಪೋರ್ಟ್ನಲ್ಲಿ ಅದು ಕೊಲೆ ಅನ್ನೋದು ಗೊತ್ತಾಗಿತ್ತು ಆದ್ರೆ ಕೊಲೆ ಮಾಡಿದ್ದು ಯಾರು? ಊರ ಗೌಡ್ತಿ ಮಾಡಿರೋಕೆ ಚಾನ್ಸೇ ಇಲ್ಲ.. ಯಾಕಂದ್ರೆ ಅದು ಒಳ್ಳೆ ಮನೆತನ. ಆತನಿಗೆ ಶತ್ರುಗಳೂ ಇರಲಿಲ್ಲ. ಹಾಗಾದ್ರೆ ಯಾರು? 6 ತಿಂಗಳು ಕಳೆದೇ ಹೊಯ್ತು. ಆದ್ರೆ ಇವತ್ತು ಹಂತಕರು ತಗ್ಲಾಕಿಕೊಂಡಿದ್ದಾರೆ. ಸುಳಿವೇ ಇಲ್ಲದ ಕೇಸನ್ನ ಪೊಲೀಸರು ಬೇದಿಸಿದ್ದಾರೆ. ಡೆಡ್ಲಿ ಮರ್ಡರ್ ಹಿಂದಿನ ರೋಚಕ ತನಿಖೆಯೇ ಈ ಸ್ಟೋರಿ.
ದೃಶ್ಯಂ ಸಿನಿಮಾವನ್ನ ನೀವೆಲ್ಲ ನೋಡಿಯೇ ಇರ್ತಿರಾ.. ದೃಶ್ಯ ಸಿನಿಮಾದ ಮೊದಲ ಪಾರ್ಟ್ ಜನರಿಗೆ ಸಖತ್ ಇಷ್ಟವಾಗಿತ್ತು. ಹೀಗಾಗಿ ಪಾರ್ಟ್ ೨ ಸಹ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ದೃಶ್ಯ ಸಿನಿಮಾದ ಕಥಾ ಹಂದರ, ಸಸ್ಪೆನ್ಸ್-ಥ್ರಿಲ್ಲರ್ ಸ್ಕ್ರಿಪ್ಟ್ ಪ್ರೇಕ್ಷಕರ ಮನಸೋರೆಗೊಂಡಿತ್ತು. ಅನಿವಾರ್ಯವಾಗಿ ಮಗಳಿಂದ ನಡೆದ ಹತ್ಯೆ, ಪ್ರಕರಣದಲ್ಲಿ ಮಗಳನ್ನ ಉಳಿಸೋದಕ್ಕೆ ಅಪ್ಪನೊಬ್ಬ ಮಾಡುವ ಪ್ಲಾನಿಂಗ್ ಅಬ್ಬಬ್ಬಾ. ಕೊಲೆ ಕೇಸ್ ನಲ್ಲಿ ಬಚಾವ್ ಆಗೋಕೆ ಪೊಲೀಸ್ ತನಿಖೆಯಲ್ಲಿ ಹೇಗೆಲ್ಲ ವರ್ತಿಸಬೇಕು, ಏನು ಮಾತನಾಡ್ಬೇಕು, ಏನೆಲ್ಲ ಮಾತನಾಡಬಾರದು, ಎಷ್ಟು ಮಾತನಾಡಬೇಕು ಅನ್ನೋದನ್ನ ಸಿನಿಮಾದ ಹೀರೋ ಪೊನ್ನಪ್ಪ ಮನೆಯ ಪ್ರತಿ ಸದಸ್ಯನನ್ನು ಟ್ರೇನ್ ಮಾಡಿರ್ತಾನೆ.
ದೃಶ್ಯ ಸಿನಿಮಾವನ್ನ ಮೀರಿಸುವ ಕಥೆ
ಇದು ದೃಶ್ಯ ಸಿನಿಮಾವನ್ನ ಮೀರಿಸುವ ಕಥೆಯನ್ನು ಹೊಂದಿದೆ. ಇಲ್ಲಿಯು ಕೊಲೆಗಾರ ಪ್ರಕರಣದಿಂದ ಬಚಾವ್ ಆಗಲು ಆಡುವ ಆಟ, ಮಾಡುವ ನಾಟಕ ಎಂಥವ್ರನ್ನು ಬೆಚ್ಚಿ ಬೀಳಿಸುತ್ತೆ. ಇನ್ನು ಒಂದು ಕೊಲೆಯನ್ನ ಮಾಡಿ, ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳಬಾರದು ಅನ್ನೋ ಕಾರಣಕ್ಕೆ ಆತ ತನ್ನ ಕುಟುಂಬಸ್ಥರಿಗೆ ನೀಡುವ ಟ್ರೈನಿಂಗ್ ಎಂಥವರನ್ನು ಅವಾಕ್ಕಾಗಿಸುತ್ತೆ. ಇಂಥಹ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ಲೇವಲ್ ಗೆ ಸೈಕ್ ಹುಟ್ಟಿಸೋ ಕ್ರೈಂ ಕಹಾನಿಯನ್ನ ಹೇಳೋಕೆ ನಾವು ಹೊರಟಿದ್ದೇವೆ. ಆದ್ರೆ ಈ ಕಥೆಯನ್ನ ಹೇಳೋದಕ್ಕೆ ನಾವು ನೇರವಾಗಿ ಭೀಮಾತೀರದ ಕುಖ್ಯಾತಿಯ ವಿಜಯಪುರ ಜಿಲ್ಲೆಗೆ ಹೋಗಬೇಕು.
ಈ ಪೋಟೊದಲ್ಲಿ ಕಾಣ್ತಿರೋ ಈತನ ಹೆಸ್ರು ಮಹಾದೇವಪ್ಪ ಪೂಜಾರಿ ಊರ್ಫ್ ಹರಿಜನ್ ಅಂತಾ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನ್ನಟ್ಟಿ ಪಿ.ಎ ಎನ್ನುವ ಗ್ರಾಮದ ನಿವಾಸಿ. ಇದೆ ಗ್ರಾಮದ ತೋಟದ ವಸ್ತಿಯಲ್ಲಿರೋ ಮಲ್ಲಮ್ಮಗೌಡ್ತಿ ಗಂಗಾರೆಡ್ಡಿ ಎನ್ನುವ ಯಜಮಾನಿ ಜಮೀನಿನಲ್ಲಿ ಕೆಲಸದಾಳಾಗಿದ್ದ. ಮಹಾದೇವಪ್ಪ ಬಲು ಕಟ್ಟು ಮಸ್ತಾದ ಆಳು, ನೋಡಲು ತೆಳ್ಳಗೆ ಆದ್ರೆ ಬಲಿಷ್ಠ ದೇಹ ಇತ್ತು. ಹಾಗಾಗೀಯೇ ತನ್ನ ಜಮೀನಿನಲ್ಲಿ ತೋಟದ ಕೆಲಸಗಳನ್ನ ಮಾಡಿಸಿಕೊಳ್ಳೋದಕ್ಕೆ ಮಹಾದೇವಪ್ಪನೆ ಒಳ್ಳೆ ಆಳು ಮನುಷ್ಯ ಅಂತ ಮಲ್ಲಮ್ಮಗೌಡ್ತಿ ಇಟ್ಟುಕೊಂಡಿದ್ಳು.
ದೆಹಲಿಯಲ್ಲಿ ಯು.ಪಿ.ಎಸ್.ಸಿ ಟ್ರೇನಿಂಗ್ ಕೂಡ ಪಡೆದಿದ್ದ ಅಪ್ಪುಗೌಡ
ಇನ್ನೂ ಇದೆ ಮಲ್ಲಮ್ಮಗೌಡ್ತಿಗೆ ಒಬ್ಬನೇ ಮಗ ಆತನ ಹೆಸ್ರು ಅಪ್ಪುಗೌಡ ಗಂಗರೆಡ್ಡಿ ಅಂತಾ. ಬಲು ಚಾಲಾಕಿ, ವಿದ್ಯಾವಂತ. ಸದ್ಯ ಸಿಂದಗಿ ಸರ್ಕಾರಿ ಸರ್ವೇ ಕಚೇರಿಯಲ್ಲಿ ಸರ್ವೇಯರ್ ಆಗಿ ಕೆಲಸ ಮಾಡ್ತಿದ್ದಾನೆ. ಇದಕ್ಕು ಮೊದಲು ಈ ಅಪ್ಪುಗೌಡ ದೆಹಲಿಯಲ್ಲಿ ಯು.ಪಿ.ಎಸ್.ಸಿ ಟ್ರೇನಿಂಗ್ ಕೂಡ ಪಡೆದಿದ್ದ. ಐಎಎಸ್ ಎಕ್ಸಾಂ ಕೂಡ ಕಟ್ಟಿದ್ದನಂತೆ. ಆದರೆ ಸರ್ವೇ ಇಲಾಖೆಯಲ್ಲಿ ಸರ್ಕಾರಿ ನೌಕರಿ ಸಿಕ್ಕ ಮೇಲೆ ತನ್ನೂರು ಸಿಂದಗಿಗೆ ಬಂದು ಸೆಟ್ಲ್ ಆಗಿದ್ದ. ಹತ್ತಾರು ಏಕರೆ ಜಮೀನು ಮನೆಯಲ್ಲಿ ಸರ್ಕಾರಿ ನೌಕರಿ ಮಾಡೋ ಮಗಾ ಅಂದ್ರೆ ಮಲ್ಲಮ್ಮಗೌಡ್ತಿ ಹವಾ ಕೇಳ್ತೀರಾ. ಹಾಗಿತ್ತು ಬೆನ್ನಟ್ಟಿ ಪಿ.ಎ ಗ್ರಾಮದಲ್ಲಿ ಮಲ್ಲಮ್ಮಗೌಡ್ತಿಯ ಹವಾ. ಇದೆ ಮಲ್ಲಮ್ಮ ಗೌಡ್ತಿಗೆ ಆಕಳಿನಂತ ಸೌಮ್ಯ ಸ್ವಭಾವದ ಗಂಡ ಇದ್ದ ಆತನ ಹೆಸ್ರೆ ಸಿದ್ದನಗೌಡ ಅಂತಾ. ಸಿದ್ದನಗೌಡನ ಹೆಸ್ರಲ್ಲಿ ಗೌಡ ಅಂತಾ ಇದೆ ಆದ್ರೂ ಮನೆಯಲ್ಲಿ ಗೌಡಿಕಿ ಕೆಲಸವೆಲ್ಲ ನೋಡಿಕೊಳ್ತಿದ್ದವಳು ಮಲ್ಲಮ್ಮಗೌಡ್ತಿಯೇ.
ಆದ್ರೆ ಇದೇ ಗೌಡ್ತಿ ಮಲ್ಲಮ್ಮ ಜಮೀನು ಕೆಲಸದಾಳು ಮಹಾದೇವಪ್ಪ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ಲು. ಅದೆಷ್ಟು ವರ್ಷದಿಂದ ಈ ಲವ್ವಿಡವ್ವಿ ಆಟ ನಡೀತ್ತಿತ್ತೋ ಏನೋ ಆದ್ರೆ ಆವತ್ತೊಂದು ದಿನ ಸ್ವಂತ ಮಗನ ಕೈಗೆ ಸಿಕ್ಕಿಹಾಕಿಕೊಂಡಿದ್ರು. ಈ ಟೈಂನಲ್ಲಿ ಸಿಟ್ಟಿಗೆದ್ದ ಮಗ ಮಹಾದೇವಪ್ಪನನ್ನ ಕೊಂದು ಬಿಟ್ಟಿದ್ದ. ಈ ಘಟನೆ ನಡೆದು ತಿಂಗಳುಗಳೆ ಕಳೆದಿದ್ರು, ಹಂತಕರು ಯಾರು ಅನ್ನೋದೆ ಪೊಲೀಸರಿಗೆ ಗೊತ್ತಾಗಿರಲಿಲ್ಲ. ಅಪ್ಪುಗೌಡ ಹತ್ಯೆಯ ಒಂದೇ ಒಂದು ಸುಳಿವು ಸಿಗದಂತೆ ದೃಶ್ಯ ಸಿನಿಮಾ ರೀತಿಯಲ್ಲಿ ಪ್ಲಾನ ಹೇಗಿತ್ತು ಅನ್ನೋದನ್ನ ನೀವು ಊಹಿಸೋದಕ್ಕು ಸಾಧ್ಯವಿಲ್ಲ. ತನ್ನ ತಾಯಿ ಹಾಗೂ ತಂದೆಗೆ ಕೇಸ್ ನಿಂದ ಹೇಗೆ ಬಚಾವ್ ಆಗಬೇಕು ಅನ್ನೋ ಬಗ್ಗೆಯೂ ಅಪ್ಪುಗೌಡ ಟ್ರೇನಿಂಗ್ ಸಹ ನೀಡಿದ್ದನಂತೆ. ಆದರೆ ಕೊಲೆ ನಡೆದ 5 ತಿಂಗಳ ಬಳಿಕ ಕೊನೆಗೆ ವೈಜ್ಞಾನಿಕ ಆಧಾರವಾಗಿ ನಡೆಸಿದ ಅದೊಂದು ತನಿಖೆಯಲ್ಲಿ ಮಲ್ಲಮ್ಮಗೌಡ್ತಿ, ಮಗ ಅಪ್ಪುಗೌಡ, ಮಲ್ಲಮ್ಮನ ಗಂಡ ಸಿದ್ದನಗೌಡ ಸಿಕ್ಕಿ ಬಿದ್ದು ಈಗ ದರ್ಗಾ ಜೈಲು ಸೇರಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಮನೆಯಲ್ಲಿ ತನ್ನದೆ ನಡೆಯಬೇಕು ಅನ್ನೋ ಹಾಗಿದ್ದ ಮಲ್ಲಮ್ಮಗೌಡ್ತಿಗೆ ಗೆಳೆಯನೊಬ್ಬನಿದ್ದ. ಆತನೇ ತನ್ನದೆ ಜಮೀನಿನಲ್ಲಿ ಕೆಲಸ ಮಾಡೋ ಆಳು ಮಹಾದೇವಪ್ಪ. ಅದ್ಯಾವ ಕಾರಣಕ್ಕೆ ಈ ವಯಸ್ಸಿನಲ್ಲಿ ಇಬ್ಬರ ನಡುವೆ ಆಕರ್ಷಣೆ ಬೆಳೆಯಿತೋ ಗೊತ್ತಿಲ್ಲ. ಆದ್ರೆ ಖಾಯಂ ಆಗಿ ಮಹಾದೇವಪ್ಪ ಕೆಲಸ ಅಂತಾ ಮಾಡ್ತಿದ್ದದ್ದು ಇದೆ ಮಲ್ಲಮ್ಮಗೌಡ್ತಿ ಗದ್ದೆಯಲ್ಲೆ. ಹೀಗಿರೋವಾಗ ಮಲ್ಲಮ್ಮಗೌಡ್ತಿ ಅದೊಂದು ದಿನ ಜಮೀನಿನ ಕೆಲಸದಾಳು ಮಹಾದೇವಪ್ಪನ ಜೊತೆಗೆ ಏಕಾಂತದಲ್ಲಿ ಇರೋವಾಗ ಮಗ ಅಪ್ಪುಗೌಡನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಳು. ನೋಡಬಾರದನ್ನ ನೋಡಿದ ಮಗ ಅಪ್ಪುಗೌಡ, ಆಗಿದ್ದಾಯ್ತು, ಇದು ಇಲ್ಲಿಗೆ ನಿಲ್ಲಬೇಕು ಅಂತಾ ತಾಕೀತು ಮಾಡಿದ್ದ. ಮತ್ತೊಮ್ಮೆ ಇಬ್ಬರು ಕೂಡಿದನ್ನ ಕಂಡ್ರೆ ಏನ್ ಮಾಡ್ತಿನೋ ನನಗೆ ಗೊತ್ತಿಲ್ಲ ಅಂತಾ ತಾಕೀತು ಮಾಡಿದ್ದ.
ಆದ್ರೆ ತನ್ನ ತಾಯಿ ಮಲ್ಲಮ್ಮನ ಈ ಸ್ವಭಾವ ಇಲ್ಲಿಗೆ ನಿಲ್ಲೋದಲ್ಲ ಅಂತಾ ಮೊದಲೇ ಮಗ ಅಪ್ಪುಗೌಡನಿಗೆ ಗೊತ್ತಿತ್ತು ಅಂತಾ ಕಾಣಿಸುತ್ತೆ. ಮತ್ತೆ ಮೇ 31 ರಂದು ಅಪ್ಪುಗೌಡ ಜಮೀನಿಗೆ ಸಪ್ರೈಸ್ ವಿಜಿಟ್ ಕೊಟ್ಟಿದ್ದ. ಅಪ್ಪುಗೌಡನ ಅಚಾನಕ್ ಭೇಟಿ ವೇಳೆ ಮಲ್ಲಮ್ಮಗೌಡ್ತಿ ಮತ್ತದೆ ಸ್ಥಿತಿಯಲ್ಲಿ ಮಹಾದೇವಪ್ಪನ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಳು. ಇದನ್ನ ಸಹಿಸದ ಅಪ್ಪುಗೌಡ ಅಲ್ಲೆ ಇದ್ದ ಕಟ್ಟಿಗೆಯಿಂದ ಮಹಾದೇವಪ್ಪನ ತಲೆಗೆ ಹೊಡೆದು ಬಿಟ್ಟಿದ್ದ. ಸಿಟ್ಟಿನಲ್ಲಿ ಅಪ್ಪುಗೌಡ ಕೊಟ್ಟ ಏಟು ಸ್ಥಳದಲ್ಲೆ ಮಹಾದೇವಪ್ಪನ್ನ ಉಸಿರು ನಿಲ್ಲಿಸಿತ್ತು.
ಅದ್ಯಾವಾಗ ತನ್ನದೇ ಕೈಯಿಂದ ತಮ್ಮದೇ ಜಮೀನು ಆಳಿನ ಹೆಣ ಬಿದ್ದಿದೆ ಅಂತಾ ಸ್ಮೃತಿಪಟಲಕ್ಕೆ ಬಂತೋ ಅಪ್ಪುಗೌಡ ತನ್ನ ಜೀವಮಾನದ ವಿದ್ಯೆ, ಬುದ್ಧಿ, ಚಾನಾಕ್ಷತನವನ್ನ ಆಚೆ ಹಾಕೋಕೆ ರೆಡಿಯಾಗಿ ಬಿಟ್ಟಿದ್ದ. ಆತ ಮೊದಲಿಗೆ ಮಾಡಿದ್ದೆ ಮಹಾದೇವಪ್ಪನ ಹೆಣವನ್ನ ತಮ್ಮ ಜಮೀನಿನಿಂದ ಹೊರ ಹಾಕೋದು. ಹಾಗೇ ಈ ಮಾಹಿತಿಯನ್ನ ತನ್ನ ತಂದೆ ಸಿದ್ದನಗೌಡನಿಗೂ ಹೇಳಿ ಹೆಣವನ್ನ ಪಕ್ಕದ ಜಮೀನು ಅಂದ್ರೆ ಇದೆ ಮಹಾದೇವಪ್ಪನ ಮಕ್ಕಳು ಮಾಡಿಕೊಂಡಿದ್ದ ಜಮೀನಿನ ಮುಳ್ಳುಕಂಟಿಯಲ್ಲಿ ತಂದು ಬಿಸಾಕಿ ಬಿಟ್ಟಿದ್ದ.
ಕಟ್ಟು ಕಥೆ ಕಟ್ಟಿದ ತಾಯಿ ಮಗ
ನಂತರ ಮಹಾದೇವಪ್ಪ ಜಮೀನು ಕಡೆಗೆ ಬಂದೆ ಇಲ್ಲ ಎನ್ನುವ ಕಟ್ಟು ಕಥೆಯನ್ನ ಕಟ್ಟೋಕೆ ಅಪ್ಪುಗೌಡ, ತಾಯಿ ಮಲ್ಲಮ್ಮಗೌಡ್ತಿ ರೆಡಿಯಾಗಿದ್ರು. ಆಗಲೇ ಮಹಾದೇವಪ್ಪನ ಸಣ್ಣ ಮಗಳು ಬುತ್ತಿ ಸಮೇತ ಜಮೀನಿಗೆ ಬಂದಿದ್ದಳು. ಮಗ ಕೊಟ್ಟ ಪ್ಲಾನ್ ನಂತೆಯೆ ಮಲ್ಲಮ್ಮ ಇಲ್ಲೆ ಬುತ್ತಿ ಇಟ್ಟು ಹೋಗು ಬಂದು ಊಟ ಮಾಡ್ತಾನೆ, ಜಮೀನಿನಲ್ಲಿ ನೀರು ಬಿಡೋಕೆ ಹೋಗಿದ್ದಾನೆ ಅಂತಾ ಹೇಳಿ ಕಳುಹಿಸಿದ್ದಾಳೆ. ಅಪ್ಪನ ಚಪ್ಪಲಿ ಕಂಡಿದ್ದ ಮಗಳು ವಾಪಸ್ ಹೋಗಿ ಸಂಜೆ ಮತ್ತೆ ಬಂದು ನೋಡಿದರೆ ಬುತ್ತಿ ಚೀಲ ಹಾಗೇ ಇತ್ತು. ಆದ್ರೆ ಅಲ್ಲಿ ಮಹಾದೇವಪ್ಪನ ಚಪ್ಪಲಿ ಇರಲಿಲ್ಲ. ಆಗ ಮಲ್ಲಮ್ಮಳನ್ನ ಕೇಳಿದಾಗ ನನಗೇನು ಗೊತ್ತಿಲ್ಲ ನೀರು ಹಾಯಿಸೋಕೆ ಹೋಗಿದ್ದನ್ನ ನೋಡಿದ್ದೇನಷ್ಟೆ. ಎತ್ತುಗಳ ತರೋಕೆ ನಂದಗಿರಿಗೆ ಹೋಗ್ತಿನಿ ಎಂದಿದ್ದ ಅಲ್ಲಿಗೇನಾದ್ರೂ ಹೋಗಿರಬೇಕು ಎಂದು ಸಮಜಾಯಿಸಿ ಕೊಟ್ಟಿದ್ದಾಳೆ. ಇನ್ನೂ ಮಹಾದೇವಪ್ಪ ಅಲ್ಲಿದ್ದಾನೆ ನೋಡೊಣ ಬಾ ಎಂದು ಅವರ ಮನೆಯವರ ಜೊತೆಗೂ ಕೂಡಿ ಹುಡುಕಾಟದ ನಾಟಕವನ್ನು ಆಡಿದ್ದಾಳಂತೆ ಮಲ್ಲಮ್ಮಗೌಡ್ತಿ..
ಮಲ್ಲಮ್ಮಗೌಡ್ತಿ ಮಹಾದೇವಪನನ್ನ ಹುಡುಕಾಟದ ನಾಟಕ ಆಡಿದ್ದಳು ಹೀಗಾಗಿ ಮಹಾದೇವಪ್ಪ ಕುಟುಂಬ ಗೌಡ್ತಿ ಕುಟುಂಬದವರ ಮೇಲೇ ಅನುಮಾನವನ್ನೆ ಪಟ್ಟಿರಲಿಲ್ಲ. ಹೀಗಿರೋವಾಗ ಮೂರು ದಿನದ ಬಳಿಕ ಅಂದ್ರೆ ಜೂನ್ 3 ರಂದು ಪಕ್ಕದ ಜಮೀನಿನ ಮುಳ್ಳು ಕಂಟಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಾದೇವಪ್ಪನ ಶವ ಸಿಕ್ಕಿತ್ತು..
ಧೈರ್ಯ ತುಂಬಿದ್ದ ಮಗ
ಅದ್ಯಾವಾಗ ಮಹಾದೇವಪ್ಪನ ಶವ ಸಿಕ್ತೋ ಆಗ ಹಂತಕ ಅಪ್ಪುಗೌಡ ಅಲರ್ಟ್ ಆಗಿ ಬಿಟ್ಟಿದ್ದ. ಆಗಲೇ ನೋಡಿ ಅಪ್ಪುಗೌಡ ರೆಡಿ ಮಾಡಿದ್ದ ದೃಶ್ಯ ಸಿನಿಮಾ ಮಾದರಿಯ ಅದೊಂದು ಸ್ಕ್ರಿಪ್ಟನ್ನ. ಶವ ಸಿಕ್ಕದಿನವೇ ಅಪ್ಪುಗೌಡ ತನ್ನ ತಾಯಿ ಮಲ್ಲಮ್ಮ ಹಾಗೂ ತಂದೆ ಸಿದ್ದನಗೌಡನನ್ನ ಕೂರಿಸಿಕೊಂಡು ಧೈರ್ಯ ತುಂಬಿದ್ದ. ಇನ್ನು ಮೇಲೆ ಪೊಲೀಸರು ಬರ್ತಾರೆ. ಪೊಲೀಸರು ಬಂದಾಗ ನೀವು ವಿಚಲಿತರಾಗಬಾದ್ರು. ಯಾವುದೇ ಕಾರಣಕ್ಕೂ ಹೆದರಬಾರದು. ಎಲ್ಲರೂ ಒಂದೆ ಮಾತನ್ನೆ ಪೊಲೀಸರ ಎದುರು ಆಡಬೇಕು. ಮಹಾದೇವಪ್ಪ ಜಮೀನಿಗೆ ಬಂದಿದ್ದು ಮಾತ್ರ ನೋಡಿದ್ದೇವೆ ಎಲ್ಲಿ ಹೋದ ನೋಡಿಲ್ಲ ಎಂದು ಹೇಳಬೇಕು. ಯಾವುದೇ ಕಾರಣಕ್ಕೂ ಸಂಶಯ ಬರದಂತೆ ನಡೆದುಕೊಳ್ಳಬೇಕು ಎಂದು ತಾಕೀತು ಮಾಡಿದ್ದ. ಅಷ್ಟೇ ಅಲ್ಲದೆ ಪೊಲೀಸರ ಎದುರು ಏನ್ ಮಾತಾಡಬೇಕು.. ಏನ್ ಮಾತನಾಡಬಾರದು.. ಅಕ್ಕ ಪಕ್ಕದ ಜಮೀನಿನವರ ಜೊತೆಗೆ ವರ್ತನೆ ಹೇಗಿರಬೇಕು ಎಂದು ಅಪ್ಪ ಅಮ್ಮನನ್ನ ಟ್ರೇನ್ ಮಾಡಿದ್ದ ಅಪ್ಪುಗೌಡ!
ಮಹದೇವಪ್ಪನನ್ನ ಕೊಲೆ ಮಾಡಿದ ಹಂತಕರು ಯಾರು ಅನ್ನೋದನ್ನ ಪತ್ತೆ ಮಾಡಲು ಹರಸಾಹಸ ಪಟ್ಟಿದ್ರು.. ಕಾರಣ ಅಲ್ಲಿ ಮಲ್ಲಮ್ಮ ಆ್ಯಂಡ್ ಫ್ಯಾಮಿಲಿ ಒಂದೇ ಒಂದು ಸಾಕ್ಷಿ ಉಳಿಸಿರಲಿಲ್ಲ. ನೋಡೋವರೆಗೂ ನೋಡಿದ ಮಹಾದೇವಪ್ಪ ಕುಟುಂಬ ದಲಿತ ಸಂಘಟನೆಗಳ ಮೊರೆ ಹೋಗಿತ್ತು. ಇತ್ತ ಇಡೀ ಕೇಸ್ ಮಹಾದೇವಪ್ಪನ ಮಗನ ಕಡೆಗೆ ತಿರುಗುವಂತೆ ಮಾಡಿದ್ದ ಹಂತಕ ಅಪ್ಪುಗೌಡ. ಆದ್ರೆ ಕೊನೆಗೆ ಆಗಿದ್ದೇ ಬೇರೆ.. ಪೊಲೀಸರು ಬ್ರೇನ್ ಮ್ಯಾಪಿಂಗ್, ಪಾಲಿಗ್ರಾಫಿಗೆ ಮುಂದಾಗ್ತಾರೆ. ಮಹದೇವಪ್ಪ ಫ್ಯಾಮಿಲಿ ಮತ್ತು ಮಲ್ಲಮ್ಮ ಫ್ಯಾಮಿಲಿಯನ್ನ ಪರೀಕ್ಷೆಗೆ ಒಳಪಡಿಸುತ್ತಾರೆ. ಆಗಲೇ ನೋಡಿ ಹಂತಕರು ಈಸಿಯಾಗಿ ತಗ್ಲಾಕಿಕೊಳ್ಳೋದು.
UPSC ತಯಾರಿಗಾಗಿ ಪಡೆದ ಟ್ರೇನಿಂಗ್ ವಿದ್ಯೆ ಬಳಸಿದ್ದ ಮಗ
ಮಹಾದೇವಪ್ಪನ ಹೆಣ ವಿಟ್ಟಿದ್ದ ಅಪ್ಪುಗೌಡ ಅದೇಷ್ಟು ಚಾಣಾಕ್ಷ ಅಂದ್ರೆ, ತಾನು UPSC ತಯಾರಿಗಾಗಿ ಪಡೆದ ಟ್ರೇನಿಂಗ್ ಸಮಯದ ವಿದ್ಯೆಗಳನ್ನ ಈ ಕೇಸ್ ನಿಂದ ಬಚಾವ್ ಆಗೋದಕ್ಕೆ ಪ್ರಯೋಗಿಸಿದ್ದ. ಅದ್ರಲ್ಲು ಹೆಣ ಸಿಕ್ಕ ಮೇಲಂತೂ ಒಂದೇ ಒಂದು ಸುಳಿವು ಸಿಗದಂತೆ ಎಲ್ಲ ಸಾಕ್ಷಿಗಳನ್ನು ನಾಶ ಮಾಡಿದ್ದ. ಅಲ್ಲದೆ ಮರ್ಡರ್ ಕೇಸ್ ಸ್ವತಃ ಮಹಾದೇವಪ್ಪನ ಮಗ ಸಂಗಪ್ಪನ ಕಡೆಗೆ ತಿರುಗುವಂತ ಮಾಸ್ಟರ್ ಕ್ರಿಮಿನಲ್ ಪ್ಲಾನ್ ಒಂದನ್ನ ಹಾಕಿ ಬಿಟ್ಟಿದ್ದ.
ಬೆಳಿಗ್ಗೆ ಜಮೀನು ಕೆಲಸಕ್ಕೆ ಬಂದಿದ್ದ ವೇಳೆ ಕೊಲೆಯಾಗಿದ್ದ ಮಹಾದೇವಪ್ಪನ ಚಪ್ಪಲಿ ಜಮೀನಿನಲ್ಲಿದ್ವು. ಅದನ್ನ ಬಳಿಕ ಡಿಸ್ಪೋಜ್ ಮಾಡಿದ್ದ. ಹತ್ಯೆಗೆ ಬಳಕೆ ಮಾಡಿದ್ದ ಕಟ್ಟಿಗೆ ಹಾಗೂ ವಸ್ತುಗಳನ್ನ ಮಹಾದೇವಪ್ಪನ ಮಗ ಸಂಗಪ್ಪ ಮಾಡಿಕೊಂಡಿದ್ದ ಜಮೀನು ಪಕ್ಕದಲ್ಲಿ ಎಸೆದಿದ್ದ. ಜಮೀನಿಗಾಗಿ ಸಂಗಪ್ಪನೆ ಮಹಾದೇವಪ್ಪನ ಹತ್ಯೆ ಮಾಡಿರಬಹುದು ಎನ್ನುವ ವದಂತಿ ಪೊಲೀಸರ ಕಿವಿಗೆ ಮುಟ್ಟುವಂತೆ ಮಾಡಿದ್ದ. ಆಗ ಪೊಲೀಸರು ಮಹಾದೇವಪ್ಪನ ಕೊಲೆ ಕೇಸಿನಲ್ಲಿ ಸ್ವತಃ ಮಗ ಸಂಗಪ್ಪನೇ ಇರಬಹುದು ಎಂದು ಒಂದು ಕ್ಷಣ ಅನುಮಾನ ಪಟ್ಟಿದ್ದು ಇದೆ.
ಕೊಲೆಯನ್ನ ಮತ್ತೊಬ್ಬರ ಮೇಲೆ ಎತ್ತಿ ಹಾಕೋದಕ್ಕೆ ಮಲ್ಲಮ್ಮ ಪ್ರಯತ್ನ
ಇನ್ನೂ ಅದ್ಯಾವಾಗ ಮಹಾದೇವಪ್ಪ ಹೆಣ ಸಿಕ್ತೊ ಇತ್ತ ಮಲ್ಲಮ್ಮ ಈ ಕೊಲೆಯನ್ನ ಮತ್ತೊಬ್ಬರ ಮೇಲೆ ಎತ್ತಿ ಹಾಕೋದಕ್ಕೆ ಯತ್ನಿಸಿದ್ದಳು. ಈ ಹಿಂದೆ ತಮ್ಮ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ಕೆಂಬಾವಿ ಅನ್ನೋರಿಗೂ ಮತ್ತು ಮಹಾದೇವಪ್ಪ ಗೆ ಜಗಳ ಆಗಿತ್ತು. ಹೀಗಾಗಿ ಕೆಂಬಾವಿ ಯವರೆ ಈ ಕೊಲೆ ಮಾಡಿರಬೇಕು ಎಂದು ಮಲ್ಲಮ್ಮ ಹೊಸ ಹುಳವೊಂದನ್ನ ಮಹಾದೇವಪ್ಪ ಕುಟುಂಬಸ್ಥರ ತಲೆಯಲ್ಲಿ ಬಿಟ್ಟಿದ್ದಳು. ಆರಂಭದಲ್ಲಿ ಕೆಂಬಾವಿಯವರನ್ನ ಅರೆಸ್ಟ್ ಮಾಡೋಕೆ ಮಹಾದೇವಪ್ಪ ಕುಟುಂಬ ಪೊಲೀಸರಿಗೆ ಆಗ್ರಹ ಮಾಡಿತ್ತು. ಪೊಲೀಸರು ಕೆಂಬಾವಿ ಎಂಬುವರನ್ನ ಠಾಣೆಗೆ ಕರೆಯಿಸಿ ತನಿಖೆಯನ್ನ ಮಾಡಿದ್ರು. ಆದ್ರೆ ತನಿಖೆಯಲ್ಲಿ ಯಾವುದೇ ಅನುಮಾನವಾಗಲಿ, ಸಾಕ್ಷಿಗಳಾಗಲಿ ಸಿಗದೆ ಇರೋದಕ್ಕೆ ವಾಪಸ್ ಕಳಿಸಿದ್ರು.
ಇನ್ನೂ ಪ್ರಕರಣ ಹಂತಕರೆ ಸಿಗದೆ ಯಾವಾಗ ಜಟಿಲವಾಯ್ತಾ ಹೋಯ್ತೋ ಆಗ ಮಹಾದೇವಪ್ಪ ಕುಟುಂಬಸ್ಥರು ದಲಿತ ಸಂಘಟನೆ ಮೊರೆ ಹೋದ್ರು. ಹತ್ಯೆ ನಡೆದ 2 ತಿಂಗಳ ಬಳಿಕ ಸಿಂದಗಿಯಲ್ಲಿ ದಲಿತ ಸಂಘಟನೆಗಳು ಪಾದಯಾತ್ರೆ ಹಮ್ಮಿಕೊಂಡು ಹಂತಕರ ಪತ್ತೆಗೆ ಒತ್ತಾಯಿಸಿದ್ರು. ಬಳಿಕ ಈ ಪ್ರಕರಣ ಎಸ್ಪಿ ಲಕ್ಷ್ಮಣ ನಿಂಬರಗಿ ಅವರ ಬಳಿ ಹೋಗಿತ್ತು. ಈ ಪ್ರಕರಣದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಬ್ರೇನ್ ಮ್ಯಾಪಿಂಗ್ ಹಾಗೂ ಪಾಲಿಗ್ರಾಫಿ ನಡೆಸೋಕೆ ನಿರ್ಧರಿಸಿದ್ರು.
ಬ್ರೇನ್ ಮ್ಯಾಪಿಂಗ್, ಪಾಲಿಗ್ರಾಫಿ ನಡೆಸೋದಕ್ಕೆ ನ್ಯಾಯಾಲಯ ಅನುಮತಿ
ಮಹಾದೇವಪ್ಪನ ಮಗ ಸಂಗಪ್ಪ ಹಾಗೂ ಕುಟುಂಬದ ಮೇಲು ಅನುಮಾನಗಳಿದ್ದ ಕಾರಣ ಅವನ ಕುಟುಂಬ ಹಾಗೂ ಇತ್ತ ಮಹಾದೇವಪ್ಪ ಮಲ್ಲಮ್ಮಗೌಡ್ತಿ ಜಮೀನು ಹೋಗಿಯೇ ಹೆಣವಾಗಿದ್ದ ಕಾರಣಕ್ಕೆ ಇವ್ರೆ ಕೊಲೆ ಮಾಡಿರುವ ಅನುಮಾನ ಹಿನ್ನೆಲೆ ಅಪ್ಪುಗೌಡ, ಮಲ್ಲಮ್ಮ, ಸಿದ್ದನಗೌಡನ ಬ್ರೇನ್ ಮ್ಯಾಪಿಂಗ್, ಪಾಲಿಗ್ರಾಫಿ ನಡೆಸೋದಕ್ಕೆ ನ್ಯಾಯಾಲಯದ ಅನುಮತಿ ಪಡೆದಿದ್ದಾರೆ. ಬಳಿಕ ನವೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಬ್ರೇನ್ ಮ್ಯಾಪಿಂಗ್, ಪಾಲಿಗ್ರಾಫಿ ಟೆಸ್ಟ ನಡೆಸಿದ್ದಾರೆ. ಬಳಿಕ ಬಂದ ಬ್ರೇನ್ ಮ್ಯಾಪಿಂಗ್ ವರದಿ ಪೊಲೀಸರನ್ನು ಬೆಚ್ಚಿ ಬೀಳಿಸುವಂತಿತ್ತು. ಈ ಟೆಸ್ಟ್ ನಲ್ಲಿ ಈ ಕೊಲೆ ಪ್ರಕರಣ ಮಾಸ್ಟರ್ ಮೈಂಡ್ ಅಪ್ಪುಗೌಡ ಅನ್ನೋದು ಬಯಲಾಗಿದೆ. ಅಪ್ಪುಗೌಡ ಕೊಲೆ ಮಾಡಿದ್ರೆ, ಈ ವೇಳೆ ಮಲ್ಲಮ್ಮಗೌಡ್ತಿ ಸ್ಥಳದಲ್ಲೆ ಇದ್ದದ್ದು, ಬಳಿಕ ಹೆಣವನ್ನ ಸಾಗಾಟ ಮಾಡೋದಕ್ಕೆ ಸಾಕ್ಷಿ ನಾಶಕ್ಕೆ ಅಪ್ಪುಗೌಡ ತಂದೆ ಸಿದ್ದನಗೌಡ ಸಹಕರಿಸೋ ವಿಚಾರ ಬಯಲಾಗಿದೆ.
ಇನ್ನೊಂದು ವಿಚಿತ್ರ ಅಂದ್ರ ಮಹಾದೇವಪ್ಪನ ಹತ್ಯೆ ಪ್ರಕರಣ ಪತ್ತೆಗೆ ದಲಿತ ಸಂಘಟನೆಗಳು ಹೋರಾಟ ನಡೆಸಿದ್ದ ವೇಳೆ ಮಹಾದೇವಪ್ಪ ಸಾಕಿದ್ದ ನಾಯಿಯೂ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿತ್ತು. ವಿಚಿತ್ರ ಅಂದ್ರೆ ನಾಯಿ ರೂಪದಲ್ಲಿ ಮಹಾದೇವಪ್ಪ ತನ್ನ ಹತ್ಯೆಗೆ ತಾನೇ ಪ್ರತಿಭಟನೆಯಲ್ಲಿ ಪಾಲ್ಗೊಂಡು ನ್ಯಾಯಬೇಡಿದ್ನಾ? ಹೋರಾಟದಲ್ಲಿನ ಪೋಟೊಗಳು ಈಗ ಪ್ರಕರಣ ಹೊರಬಿದ್ದಾಗ ಅಚ್ಚರಿಯನ್ನ ಮೂಡಿಸ್ತಿವೆ. ಬರೀ ಯುಪಿಎಸ್‌ಸಿ ತರಬೇತಿ ಪಡೆದಿದ್ದ ಹಂತಕ ಅಪ್ಪುಗೌಡ ಕೊಲೆ ಪ್ರಕರಣ ಬಯಲಿಗೆ ಬಾರದಂತೆ ದೃಶ್ಯ ಸಿನಿಮಾ ರೀತಿ ಸ್ಕೆಚ್ ಏನೋ ಹಾಕಿ ಚಾಪೆ ಕೆಳಗೆ ನುಗ್ಗಿದ್ದ, ಆದ್ರೆ ಯುಪಿಎಸ್‌ಸಿ ಪಾಸ್ ಆಗಿ ಖಾಕಿ ಧರಿಸಿರೋ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹಂತಕನ ಸಂಚು ಬಯಲು ಮಾಡಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

