Buddha statue vandalized in Chamarajanagar: ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ಕಿಡಿಗೇಡಿಗಳು ಬುದ್ಧನ ವಿಗ್ರಹವನ್ನು ಒಡೆದು, ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕವನ್ನು ವಿರೂಪಗೊಳಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಭೇಟಿ ನೀಡದ್ದಾರೆ.
ಚಾಮರಾಜನಗರ (ಅ.24): ಕಿಡಿಗೇಡಿಗಳು ಬುದ್ಧನ ವಿಗ್ರಹವನ್ನು ಒಡೆದು ಹಾಕಿ, ಡಾ ಬಿಆರ್ ಅಂಬೇಡ್ಕರ್ ನಾಮಫಲಕವನ್ನು ಕಿತ್ತು ವಿರೂಪಗೊಳಿಸಿದ ಘಟನೆ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದೆ.
ಜ್ಯೋತಿಗೌಡನಪುರ ಗ್ರಾಮದ ಗುಡಿಯೊಳಗಿಂದ ಬುದ್ಧನ ವಿಗ್ರಹವನ್ನು ಹೊರತಂದು ಕಿಡಿಗೇಡಿಗಳು ಒಡೆದು ಹಾಕಿದ್ದಾರೆ. ಅಲ್ಲದೆ, ಗ್ರಾಮದ ಪ್ರಮುಖ ಸ್ಥಳದಲ್ಲಿದ್ದ ಅಂಬೇಡ್ಕರ್ ನಾಮಫಲಕವನ್ನು ಹರಿದು, ಬರಹವನ್ನು ಅಳಿಸಿ ವಿಕೃತಗೊಳಿಸಿದ್ದಾರೆ. ಈ ದುಷ್ಕೃತ್ಯ ರಾತ್ರಿಯ ಸಮಯದಲ್ಲಿ ನಡೆದಿರಬಹುದು ಎಂದು ಊಹಿಸಲಾಗಿದೆ.
ಸ್ಥಳಕ್ಕೆ ಎಸ್‌ಪಿ ಕವಿತಾ ಭೇಟಿ:
ಸುದ್ದಿ ತಿಳಿದ ತಕ್ಷಣ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಬಿಟಿ ಕವಿತಾ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು. ಘಟನಾ ಸ್ಥಳವನ್ನು ಪರಿಶೀಲಿಸಿ, ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ. ಸಿಸಿಟಿವಿ ದೃಶ್ಯಗಳು, ಸ್ಥಳೀಯರ ಮಾಹಿತಿ ಆಧಾರದ ಮೇಲೆ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಗ್ರಾಮಸ್ಥರು ಆಕ್ರೋಶ:
ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ತಕ್ಷಣ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶಾಂತಿ ಕಾಪಾಡಲು ಪೊಲೀಸ್ ಬಂದೋಬಸ್ತ್ ಜಾರಿಗೊಳಿಸಲಾಗಿದೆ.
