ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನಿರ್ವಹಣೆಯ ರೆಸಾರ್ಟ್‌ನಲ್ಲಿ ದಾಖಲೆಗಳಿಲ್ಲದ ನೇಪಾಳಿ ಮೂಲದವರಿಗೆ ಆಶ್ರಯ ನೀಡಿದ ಆರೋಪ ಕೇಳಿಬಂದಿದೆ. ಗರ್ಭಿಣಿಯೊಬ್ಬರ ಆಸ್ಪತ್ರೆ ದಾಖಲಾತಿ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದ್ದು, ಬ್ರಹ್ಮಾವರ ಪೊಲೀಸರಿಂದ ಒಂಬತ್ತು ಮಂದಿ ವಶಕ್ಕೆ
ಉಡುಪಿ(ಡಿ.20): ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ನಿರ್ವಹಣೆ ಮಾಡುತ್ತಿರುವ ರೆಸಾರ್ಟ್‌ನಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದ ನೇಪಾಳಿ ಮೂಲದ ವಿದೇಶಿಯರಿಗೆ ಆಶ್ರಯ ನೀಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.
ಗರ್ಭಿಣಿ ಚಿಕಿತ್ಸೆಗೆ ಬಂದಾಗ ರಹಸ್ಯ ಬಯಲಿಗೆ:
ರೆಸಾರ್ಟ್‌ನಲ್ಲಿ ನೆಲೆಸಿದ್ದ ನೇಪಾಳಿ ಮೂಲದ ಗರ್ಭಿಣಿ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಗುರುತಿನ ಚೀಟಿ ಹಾಗೂ ಅಗತ್ಯ ದಾಖಲಾತಿಗಳನ್ನು ಕೇಳಿದ್ದಾರೆ. ಆದರೆ, ಮಹಿಳೆ ಹಾಗೂ ಆಕೆಯ ಜೊತೆಗಿದ್ದವರು ಯಾವುದೇ ಕಾನೂನುಬದ್ಧ ದಾಖಲೆಗಳನ್ನು ಹೊಂದಿರಲಿಲ್ಲ. ಇದರಿಂದ ಸಂಶಯಗೊಂಡ ವೈದ್ಯರು ಕೂಡಲೇ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಪೊಲೀಸ್ ವಿಚಾರಣೆ ವೇಳೆ ಸಿಕ್ಕಿಬಿದ್ದ ವಲಸಿಗರು
ವೈದ್ಯರ ಮಾಹಿತಿಯ ಮೇರೆಗೆ ಆಸ್ಪತ್ರೆಗೆ ಧಾವಿಸಿದ ಬ್ರಹ್ಮಾವರ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ದೀಪಕ್ ದಮಾಯಿ, ಸುನಿತಾ ದಮಾಯಿ, ಊರ್ಮಿಳಾ, ಕೈಲಾಶ್ ದಮಾಯಿ, ಕಪಿಲ್ ದಮಾಯಿ ಸೇರಿದಂತೆ ಒಟ್ಟು ಒಂಬತ್ತು ಮಂದಿ ನೇಪಾಳಿ ಮೂಲದವರು ಪತ್ತೆಯಾಗಿದ್ದಾರೆ. ಇವರಲ್ಲಿ ಮೂವರು ಸಣ್ಣ ಮಕ್ಕಳೂ ಸೇರಿದ್ದು, ಇವರೆಲ್ಲರೂ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಹೆಗ್ಡೆ ನಿರ್ವಹಣೆಯ ರೆಸಾರ್ಟ್‌ನಲ್ಲಿ ವಾಸವಿದ್ದರು ಎಂಬುದು ತಿಳಿದುಬಂದಿದೆ.
ದಾಖಲೆಗಳಿಲ್ಲದ ಆಶ್ರಯ ನೀಡಿದ್ದು ಹೇಗೆ? ತನಿಖೆ
ವಿದೇಶಿ ಪ್ರಜೆಗಳು ಭಾರತಕ್ಕೆ ಬಂದಾಗ ಅಥವಾ ಇಲ್ಲಿ ನೆಲೆಸುವಾಗ ಪಾಲಿಸಬೇಕಾದ ಯಾವುದೇ ನಿಯಮಗಳನ್ನು ಪಾಲಿಸದೆ, ದಾಖಲೆಗಳಿಲ್ಲದವರಿಗೆ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಕೀಯ ಮುಖಂಡನಿಗೆ ಸೇರಿದ ರೆಸಾರ್ಟ್‌ನಲ್ಲಿ ಈ ರೀತಿ ಅಕ್ರಮ ವಲಸಿಗರಿಗೆ ಆಶ್ರಯ ನೀಡಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ವಶಕ್ಕೆ ಪಡೆದಿರುವ ವಿದೇಶಿಯರ ಹಿನ್ನೆಲೆ ಮತ್ತು ರೆಸಾರ್ಟ್ ಮಾಲೀಕರ ಜವಾಬ್ದಾರಿಯ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.


