ಪತ್ನಿ ಶಾಖರೆ ಖಲೀಲಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸ್ವಾಮಿ ಶ್ರದ್ಧಾನಂದನಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಶಿಕ್ಷೆ ಮರುಪರಿಶೀಲನೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಯಾವುದೇ ಪರಿಹಾರಕ್ಕಾಗಿ ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಲು ಸೂಚಿಸಿದೆ.
ನವದೆಹಲಿ (ಡಿ.6): ಪತ್ನಿ ಹತ್ಯೆ ಪ್ರಕರಣದಲ್ಲಿ ತನಗೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿರುವ ಆದೇಶ ಮರುಪರಿಶೀಲನೆ ಕೋರಿ ಬೆಂಗಳೂರಿನ ಸ್ವಯಂಘೋಷಿತ ದೇವಮಾನವ ಸ್ವಾಮಿ ಶ್ರದ್ಧಾನಂದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಅಲ್ಲದೆ, ಜೈಲುಶಿಕ್ಷೆ ಸಂಬಂಧಿಸಿ ಏನೇ ಸಮಸ್ಯೆಗಳೇನೇ ಇದ್ದರೂ ಕರ್ನಾಟಕ ಸರ್ಕಾರದ ಬಳಿ ಹೋಗುವಂತೆ ಸಲಹೆ ನೀಡಿದೆ. ಶ್ರದ್ಧಾನಂದ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾ. ಜೆ.ಕೆ.ಮಹೇಶ್ವರಿ ಮತ್ತು ನ್ಯಾ.ವಿಜಯ್ ಬಿಷ್ಣೋಯಿ ಅವರಿದ್ದ ಪೀಠ ಈ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರದ್ಧಾನಂದ ಪರ ಹಾಜರಾಗಿದ್ದ ವಕೀಲ ವರುಣ್ ಠಾಕೂರ್ ಅವರು ತಮ್ಮ ಅರ್ಜಿಯನ್ನು ವಾಪಸ್ ಪಡೆದರು.
ಏನಿದು ಪ್ರಕರಣ?:
ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಶಾಖರೆ ಖಲೀಲಿ ಅವರನ್ನು 1986ರಲ್ಲಿ ಮದುವೆಯಾಗಿದ್ದ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರಳಿ ಮನೋಹರ್ ಮಿಶ್ರಾ ಆಸ್ತಿ ಆಸೆಗಾಗಿ ಆಕೆಯನ್ನು 1991ರಲ್ಲಿ ಬೆಂಗಳೂರಿನಲ್ಲಿ ಜೀವಂತ ಸಮಾಧಿ ಮಾಡಿದ್ದ. ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ವಿಚಾರಣಾ ನ್ಯಾಯಾಲಯವು ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿಹಿಡಿದ ಹಿನ್ನೆಲೆಯಲ್ಲಿ ಶ್ರದ್ದಾನಂದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಪ್ರಕರಣದಲ್ಲಿ ಶ್ರದ್ಧಾನಂದಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಜೀವನಪರ್ಯಂತ ಜೈಲಲ್ಲೇ ಇರುವ ಶಿಕ್ಷೆಯಾಗಿ ಪರಿವರ್ತಿಸಿ 2008ರಲ್ಲಿ ತೀರ್ಪು ನೀಡಿತ್ತು. ಇದನ್ನು ಆತ ಮರುಪರಿಶೀಲನೆ ಮಾಡಿ ಎಂದು ಕೋರಿದ್ದ.


